ಅಪಹರಣಕ್ಕೊಳಗಾಗಿದ್ದ ಮುದ್ದಿನ ಮಗಳನ್ನು ದುಷ್ಕರ್ಮಿಗಳು ಕೊಂದು ಹಾಕಿದ್ದಾರೆ ಎಂಬ ಸುದ್ದಿ ಕಿವಿಗಪ್ಪಳಿಸುತ್ತಿದ್ದಂತೆ ಹೃದಯಾಘಾತಕ್ಕೊಳಗಾದ ತಂದೆ ಇಹಲೋಕ ತ್ಯಜಿಸಿದ ಹೃದಯ ವಿದ್ರಾವಕ ಘಟನೆಯೊಂದು ಆಂಧ್ರಪ್ರದೇಶದಿಂದ ವರದಿಯಾಗಿದೆ.
ಬಿಲಿಯಾಧಿಪತಿ ಉದ್ಯಮಿ ಪಾಲಗಣಿ ಪ್ರಭಾಕರ ರಾವ್ ಅತಿಯಾಗಿ ಪ್ರೀತಿಸುತ್ತಿದ್ದ 10ರ ಹರೆಯದ ಮಗಳ ಮೇಲೆ ಅಪಹರಣಕಾರರ ಕಣ್ಣು ಬಿದ್ದಿತ್ತು. ಶನಿವಾರ ಶಾಲೆಗೆ ಹೋಗುವಾಗ ಕಾರಿನ ಚಾಲಕನನ್ನು ಕೊಂದು ಹಾಕಿ ವೈಷ್ಣವಿ ಎಂಬ ಪುತ್ರಿಯನ್ನು ಅಪಹರಿಸಿದ್ದರು.
ಆದರೆ ಆಕೆಯ ಶವ ಪತ್ತೆಯಾಗಿದೆ ಮತ್ತು ಕೊಂದದ್ದು ತನ್ನ ಸ್ವತಃ ಬಾವ ಎಂಬ ಸುದ್ದಿ ಕೇಳುತ್ತಿದ್ದಂತೆ ಆಘಾತವನ್ನು ಅರಗಿಸಿಕೊಳ್ಳಲಾಗದ ತಂದೆ ಹಠಾತ್ತನೆ ಕುಸಿದು ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದರು.
ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಬದುಕುಳಿಯಲಿಲ್ಲ. ರಾಜಕಾರಣಿಗಳು ಮತ್ತು ರಿಯಲ್ ಎಸ್ಟೇಟ್ ಉದ್ಯಮಕ್ಕೆ ಪ್ರಮುಖ ಬೆನ್ನೆಲುಬಾಗಿದ್ದ ಮದ್ಯ ದೊರೆ ಸಾವನ್ನಪ್ಪಿದ ಸುದ್ದಿ ಕೇಳಿ ಇಡೀ ಆಂಧ್ರಪ್ರದೇಶವೇ ಒಂದು ದಿನದ ಮಟ್ಟಿಗೆ ಸ್ತಬ್ತವಾಗಿ ಹೋಯಿತು. ಹಲವೆಡೆ ಗೌರವ ಸೂಚಕವಾಗಿ ಮೌನ ಮೆರವಣಿಗೆಗಳನ್ನೂ ನಡೆಸಲಾಯಿತು.
ಈ ಉದ್ಯಮಿಯ ಅಂತ್ಯಸಂಸ್ಕಾರದಲ್ಲಿ ಪ್ರಜಾರಾಜ್ಯಂ ಅಧ್ಯಕ್ಷ-ನಟ ಚಿರಂಜೀವಿ, ವಿರೋಧ ಪಕ್ಷದ ನಾಯಕ ಚಂದ್ರಬಾಬು ನಾಯ್ಡು, ನಾಲ್ವರು ಸಚಿವರುಗಳು ಭಾಗವಹಿಸಿದ್ದರು. ದುರ್ಘಟನೆಗೆ ಮರುಗಿರುವ ಮುಖ್ಯಮಂತ್ರಿ ಕೆ. ರೋಸಯ್ಯ, ಉದ್ಯಮಿಯ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಹೆಂಡತಿಯ ಸಹೋದರನ ಕೃತ್ಯ... 53ರ ಹರೆಯದ ಉದ್ಯಮಿ ಪ್ರಭಾಕರ ರಾವ್ ಎರಡೆರಡು ಮದುವೆಯಾಗಿದ್ದರು. ಮೊದಲನೇ ಪತ್ನಿ ವೆಂಕಟೇಶ್ವರಮ್ಮ ಹಾಗೂ ಎರಡನೇ ಪತ್ನಿ ನರ್ಮದಾ. ಮೊದಲ ಪತ್ನಿಯ ಸಹೋದರ ವೆಂಕಟರಾವ್ ಗೌಡ್.
ಎರಡನೇ ಪತ್ನಿ ನರ್ಮದಾರಿಗೆ ಪ್ರಭಾಕರ್ ಅವರಿಂದ ಇಬ್ಬರು ಮಕ್ಕಳು ಜನಿಸಿದ್ದರು. ಹೆಣ್ಣು ಮಗು 10ರ ಹರೆಯದ ವೈಷ್ಣವಿ ಹೆಸರಿನಲ್ಲಿ ತನ್ನ ಅಪಾರ ಆಸ್ತಿಯನ್ನು ಪ್ರಭಾಕರ ರಾವ್ ಹಸ್ತಾಂತರಿಸಿದ್ದಾರೆ ಎಂಬುದೇ ಬಾಲಕಿಯ ಪ್ರಾಣಕ್ಕೆ ಹೇತುವಾಯಿತು.
ಈ ಸಂಬಂಧ ಆರಂಭದಲ್ಲಿ ಮೊದಲ ಹೆಂಡತಿ ವೆಂಕಟೇಶ್ವರಮ್ಮ ಮತ್ತು ಅವರ ಮಗ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಆಸ್ತಿ ವಿವಾದ ಕುಟುಂಬದಲ್ಲಿ ತೀವ್ರ ವಿವಾದಕ್ಕೂ ಕಾರಣವಾಗಿತ್ತು. ಆದರೆ ಈ ರೀತಿ ಮಗಳನ್ನೇ ಬಲಿ ತೆಗೆದುಕೊಳ್ಳುವವರೆಗೆ ಹೋಗುತ್ತದೆ ಎಂದು ಕೋಟ್ಯಧಿಪತಿ ಉದ್ಯಮಿ ಊಹಿಸಿಯೂ ಇರಲಿಲ್ಲ.
ಮಗ ತಪ್ಪಿಸಿಕೊಂಡಿದ್ದ... ಜನವರಿ 30ರಂದು ಸಹೋದರ 12ರ ಹರೆಯದ ಸಾಯಿ ತೇಜನೊಂದಿಗೆ ಕಾರಿನಲ್ಲಿ ವೈಷ್ಣವಿ ಶಾಲೆಗೆ ಹೊರಟಿದ್ದಳು. ದಾರಿಯಲ್ಲಿ ಕಾರಿನ ಚಾಲಕ ಲಕ್ಷ್ಮಣ್ ರಾವ್ ಅವರನ್ನು ಕೊಂದು ಹಾಕಿದ ಮೂವರು ಅಪಹರಣಕಾರರು ವೈಷ್ಣವಿಯನ್ನು ಅಪಹರಿಸಿದ್ದರು. ಇಷ್ಟು ಹೊತ್ತಿಗೆ ಆಕೆಯ ಅಣ್ಣ ತೇಜ ತಪ್ಪಿಸಿಕೊಂಡಿದ್ದ.
ಇಷ್ಟಾದರೂ ಆಗರ್ಭ ಶ್ರೀಮಂತ ಪ್ರಭಾಕರ ರಾವ್ ಪೊಲೀಸರೊಂದಿಗೆ ತನಿಖೆಗೆ ಆರಂಭದಲ್ಲಿ ಸ್ಪಂದಿಸಿರಲಿಲ್ಲ. ಒತ್ತೆ ಹಣಕ್ಕೂ ಬೇಡಿಕೆ ಬರದೇ ಇದ್ದಾಗ ಪ್ರಕರಣದಲ್ಲಿ ಬೇರೇನೋ ಇರುವುದು ಪೊಲೀಸರಿಗೆ ತಿಳಿದು ಹೋಗಿತ್ತು. ಇದೇ ಜಾಡು ಹಿಡಿದು ರಾವ್ ಅವರ ಬಾವ ವೆಂಕಟ್‌ನನ್ನು ಆತನ ಮನೆಯಿಂದಲೇ ಸೆರೆ ಹಿಡಿದು ಬಾಯಿ ಬಿಡಿಸಿದಾಗ ಬಂದಿತ್ತು ಭಯಾನಕ ಸತ್ಯ.
ಆತನಿಂದ ಮಾಹಿತಿಯನ್ನು ಪಡೆದುಕೊಂಡ ಪೊಲೀಸರು ಗುಂಟೂರಿನಲ್ಲಿನ ಆಟೋನಗರದಲ್ಲಿನ ಕಾರ್ ಗ್ಯಾರೇಜ್ ಒಂದರ ಬಾಯ್ಲರ್‌ನಲ್ಲಿ ವೈಷ್ಣವಿಯ ಶವವನ್ನು ಪತ್ತೆ ಹಚ್ಚಿದರು. ಬಾಲಕಿಯನ್ನು ಕತ್ತು ಹಿಸುಕಿ ಕೊಂದ ನಂತರ ಬಾಯ್ಲರ್ ಒಳಗೆ ತಳ್ಳಲಾಗಿತ್ತು.
ಮೊದಲ ಹೆಂಡತಿಯ ಸಹೋದರ ವೆಂಕಟ್ ಮತ್ತು ಇಬ್ಬರು ಸಂಬಂಧಿಗಳು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.