ರಾಹುಲ್ ಗಾಂಧಿ ಡೆಡ್ಲಿ ಸ್ಮೈಲ್‌ಗೆ ಕಾಲೇಜು ಹುಡ್ಗೀರು ಬೌಲ್ಡ್..!
ಪಾಟ್ನಾ, ಗುರುವಾರ, 4 ಫೆಬ್ರವರಿ 2010( 10:51 IST )
ಗುಳಿಕೆನ್ನೆಯ ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಕಾಲೇಜಿಗೆ ಭೇಟಿ ನೀಡುತ್ತಾರೆ ಎಂದು ತಿಳಿದ ಬಳಿಕ ನಿದ್ದೆ ಕೆಡಿಸಿಕೊಂಡಿದ್ದ ಹುಡುಗಿಯರು, ಅವರ 'ಡೆಡ್ಲೀ ಸ್ಮೈಲ್'ಗೆ ಕ್ಲೀನ್ ಬೌಲ್ಡ್ ಆಗಿದ್ದಾರಂತೆ. ಆದರೆ ಯಾವುದೇ ಖಾಸಗಿ ಪ್ರಶ್ನೆಗಳನ್ನು ಕೇಳಬಾರದು ಎಂದು ಮೊದಲೇ ನಿರ್ಬಂಧ ವಿಧಿಸಿದ್ದರಿಂದ ನಮಗೆ ನಿರಾಸೆಯಾಗಿದೆ ಎಂದು ವನಿತೆಯರು ಹೇಳಿಕೊಂಡಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಯುವಜನರ ಕಣ್ಮಣಿ ರಾಹುಲ್ ಮಂಗಳವಾರ ಬಿಹಾರದಲ್ಲಿನ ಪಾಟ್ನಾದ ವನಿತೆಯರ ಕಾಲೇಜಿಗೆ ಭೇಟಿ ನೀಡಿ ಆಯ್ದ ವಿದ್ಯಾರ್ಥಿನಿಯರ ಜತೆ ಸಂವಾದ ನಡೆಸಿದ್ದರು.
ಯಾವತ್ತೂ ಕಾಲೇಜಿಗೆ ಚಕ್ಕರ್ ಹಾಕುವ ಹುಡುಗಿಯರು ಕೂಡ ಅಂದು ಹಾಜರಾಗುವ ಮೂಲಕ ಅಚ್ಚರಿ ಮೂಡಿಸಿದರೆ, ಈ ಸಂದರ್ಭದಲ್ಲಿ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿ ಹಸ್ತಲಾಘವ ನೀಡುವ ಆಸಕ್ತಿಯನ್ನು ರಾಹುಲ್ ಮೆರೆದಿದ್ದಾರೆ ಎಂದು ಭದ್ರತಾ ಸಿಬ್ಬಂದಿಗಳು ಮೂಗು ಮುರಿದಿದ್ದಾರೆ.
PTI
ಬಿಹಾರದ ಅತೀ ಹಳೆಯ ಹುಡುಗಿಯರ ಕಾಲೇಜು ಎಂಬ ಹೆಗ್ಗಳಿಕೆಯನ್ನು ಹೊಂದಿರುವ ಕಾಲೇಜಿನ 4,500ಕ್ಕೂ ಹೆಚ್ಚು ವಿದ್ಯಾರ್ಥಿನಿಯರಲ್ಲಿ ಕೇವಲ 630 ಆಯ್ದ ಹುಡುಗಿಯರಿಗೆ ಮಾತ್ರ ರಾಹುಲ್ ಜತೆ ಹತ್ತಿರದಿಂದ ಸಂವಾದ ನಡೆಸಲು ಅವಕಾಶ ದೊರೆತಿತ್ತು. 2,000 ಹುಡುಗಿಯರು ತುಸು ದೂರದಿಂದಲೇ ಕಾಂಗ್ರೆಸ್ ಯುವ ನಾಯಕನ ಮಾತುಗಳನ್ನು ಕಿವಿಗಳಿಗೆ ತುಂಬಿಸಿಕೊಂಡಿದ್ದರು.
39ರ ಹರೆಯದ ಮೋಸ್ಟ್ ಬ್ಯಾಚುಲರ್ ಗಾಂಧಿಯನ್ನು 'ಸರ್... ಸರ್' ಎಂದು ಹುಡುಗಿಯರು ಕರೆಯಲಾರಂಭಿಸಿದಾಗ ಪ್ರೀತಿಯಿಂದಲೇ ಆಕ್ಷೇಪವ್ಯಕ್ತಪಡಿಸಿದ ಅವರು, ನನ್ನನ್ನು ಜಸ್ಟ್ ರಾಹುಲ್ ಎಂದಷ್ಟೇ ಕರೆಯಿರಿ ಎಂದರು.
ನನ್ನನ್ನು ಸರ್ ಎಂದು ಕರೆಯಬೇಡಿ, ರಾಹುಲ್ ಎಂದು ಕರೆದರೆ ಸಾಕು. ನಿಜಕ್ಕೂ ಅವರ ಈ ಮಾತುಗಳು ನಮಗೆ ಅಚ್ಚರಿ ತಂದಿದ್ದವು. ಈಗಿನ ರಾಜಕಾರಣಿಗಳು ತಾವೇ ಶ್ರೇಷ್ಠ ಎಂದು ತಲೆಯಲ್ಲಿ ತುಂಬಿಕೊಂಡಿರುತ್ತಾರೆ. ಆದರೆ ರಾಹುಲ್ ಹಾಗಲ್ಲ, ಅವರು ಡೌನ್ ಟು ಅರ್ತ್. ಅವರು ನಮ್ಮನ್ನು ಸ್ನೇಹಿತರಂತೆ ನೋಡಿಕೊಂಡರು. ನಿಜಕ್ಕೂ ಇದೊಂದು ಅಪೂರ್ವ ಕ್ಷಣ ಎಂದು ಸಂವಾದಲ್ಲಿ ಪಾಲ್ಗೊಂಡ ವಿದ್ಯಾರ್ಥಿನಿಯೊಬ್ಬಳು ಹೇಳಿಕೊಂಡಿದ್ದಾಳೆ.
ಸುಮಾರು 45 ನಿಮಿಷಗಳಷ್ಟು ಕಾಲ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಹಲವು ಪ್ರಶ್ನೆಗಳಿಗೆ ರಾಹುಲ್ ಉತ್ತರಿಸಿದ್ದಾರೆ. ಓರ್ವ ಹುಡುಗಿ ರಾಹುಲ್ ಅವರನ್ನು ಗಾಂಧೀಜಿಯವರೊಂದಿಗೆ ಹೋಲಿಸಿದಾಗ ನಿರಾಕರಿಸಿದ ಅವರು, ಗಾಂಧಿಯಂತವರು ನೂರು ವರ್ಷಗಳಲ್ಲಿ ಒಮ್ಮೆ ಮಾತ್ರ ಹುಟ್ಟಲು ಸಾಧ್ಯ. ಅಂತವರು ಮತ್ತೆ ಮತ್ತೆ ಹುಟ್ಟಿ ಬರಲು ಸಾಧ್ಯವಿಲ್ಲ ಎಂದು ಸರಳತೆ ಮೆರೆದರು ಎಂದು ರಿಯಾ ಎನ್ನುವ ಹುಡುಗಿ ಖುಷಿ ಹಂಚಿಕೊಂಡಿದ್ದಾಳೆ.
ಕೆಲವು ಹುಡುಗಿಯರಂತೂ ರಾಹುಲ್ ಅವರನ್ನು ಮುಖಾಮುಖಿಯಾದ ನಂತರ ಅಪಾದಮಸ್ತಕ ಹೊಗಳುತ್ತಿದ್ದರು. 'ಹೋ... ಅವರು ತುಂಬಾ ಕ್ಯೂಟ್ ಆಗಿದ್ದಾರೆ...', 'ನಿಜಕ್ಕೂ ಅತ್ಯುತ್ತಮ ಚಾರ್ಮಿಂಗ್ ಹೊಂದಿದ್ದಾರೆ...', 'ಅವರದ್ದು ಡೆಡ್ಲೀ ಸ್ಮೈಲ್....', 'ನಿಜಕ್ಕೂ ಪುಣ್ಯ ಮಾಡಿದ್ದೆ..' ಎಂಬ ಮಾತುಗಳು ಕಾಲೇಜು ಕ್ಯಾಂಪಸ್ಸಿನಲ್ಲಿ ತೇಲಾಡುತ್ತಿದ್ದವು.
ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿನಿ ಸಮೀರಾ ಫಾತಿಮಾಗಂತೂ ಬ್ರಹ್ಮಚಾರಿಯ ಭವಿಷ್ಯ ತಿಳಿದುಕೊಳ್ಳುವ ಕಾತರವಿತ್ತು. ಅವರ ಮದುವೆ ಯೋಜನೆಗಳು, ಕನಸಿನ ಹುಡುಗಿಯ ಬಗ್ಗೆ.. ಹೀಗೆ ಹಲವು ಪ್ರಶ್ನೆಗಳಿದ್ದುವು. ಆದರೆ ಕಾಲೇಜು ಮೊದಲೇ ವೈಯಕ್ತಿಕ ಪ್ರಶ್ನೆಗಳಿಗೆ ನಿರ್ಬಂಧ ಹೇರಿದ್ದ ಕಾರಣ ಆಕೆಗೆ ತೀರಾ ನಿರಾಸೆಯಾಗಿದೆ.
ಸುಮಾರು ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ರಾಹುಲ್ ಅವರ ಮಾತುಗಳನ್ನು ನೇರವಾಗಿ ಕೇಳಿಸಿಕೊಳ್ಳಲು, ಹತ್ತಿರದಿಂದ ನೋಡಲು ಸಾಧ್ಯವಾಗಿಲ್ಲ ಎಂದು ಪತ್ರಕರ್ತರೊಂದಿಗೆ ಹುಸಿ ಮುನಿಸು ತೋಡಿಕೊಂಡಿದ್ದಾರೆ.