ಪಾಕಿಸ್ತಾನದ ಬಗ್ಗೆ ಮೃದುಧೋರಣೆ ತಳೆದಿರುವ ಪಿ. ಚಿದಂಬರಂ ಭಾರತದ ಗೃಹಸಚಿವರೋ ಅಥವಾ ಪಾಕಿಸ್ತಾನದ ಗೃಹಸಚಿವರೋ ಎಂದು ಶಿವಸೇನೆ ಕಾರ್ಯನಿರ್ವಾಹಕ ಅಧ್ಯಕ್ಷ ಉದ್ಧವ್ ಠಾಕ್ರೆ ಪ್ರಶ್ನಿಸಿದ್ದಾರೆ.
ಭಾರತದ ಶಕ್ತಿಕೇಂದ್ರ ಸಂಸತ್ತಿಗೆ ದಾಳಿ ನಡೆಸಿ ದೋಷಿಯೆಂದು ಸಾಬೀತಾಗಿರುವ ಭಯೋತ್ಪಾದಕ ಅಫ್ಜಲ್ ಗುರುವಿಗೆ ಮರಣದಂಡನೆ ನೀಡಬೇಕೆಂದು ನ್ಯಾಯಾಲಯ ಆದೇಶ ನೀಡಿರುವ ಹೊರತಾಗಿಯೂ ಆತನನ್ನು ಇನ್ನೂ ನೇಣಿಗೆ ಹಾಕಲಾಗಿಲ್ಲ. ಚಿದಂಬರಂ ನಮ್ಮ ದೇಶದವರೋ ಅಥವಾ ಪಾಕಿಸ್ತಾನದ ಗೃಹಸಚಿವರೋ ಎಂಬುದು ನನಗೆ ಅರ್ಥವಾಗುತ್ತಿಲ್ಲ ಎಂದು ಉದ್ಧವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಪಾಲ್ಗೊಳ್ಳುವ ಪಾಕಿಸ್ತಾನಿ ಕ್ರಿಕೆಟ್ ಆಟಗಾರರಿಗೆ ಸಂಪೂರ್ಣ ಭದ್ರತೆ ನೀಡುವ ಜವಾಬ್ದಾರಿ ನನ್ನದು ಎಂದು ಹೇಳಿರುವ ಚಿದಂಬರಂ ಹೇಳಿಕೆ ಅಪಮಾನಕಾರಿ. ಅವರಿಗೆ ಪಾಕಿಸ್ತಾನಿ ಕ್ರಿಕೆಟಿಗರನ್ನು ರಕ್ಷಿಸಬೇಕೆಂಬ ಬಯಕೆಯಿದ್ದರೆ ಅವರು ಪಾಕಿಸ್ತಾನಕ್ಕೇ ಹೋಗಲಿ ಎಂದು ಈ ಹಿಂದೆ ಶಾರೂಖ್ ಖಾನ್ ಅವರಿಗೆ ಹೇಳಿದ್ದ ಮಾತನ್ನೇ ಶಿವಸೇನೆ ಗೃಹಸಚಿವರಿಗೂ ಹೇಳಿದೆ.
ಮುಂಬೈಯ ಸುರಕ್ಷತೆ ಬಗ್ಗೆ ನಮಗೆ ಯಾರು ಕೂಡ ಪಾಠ ಹೇಳಿಕೊಡಬೇಕಾದ ಅಗತ್ಯವಿಲ್ಲ. ರಾಹುಲ್ ಗಾಂಧಿ ಏನು ಮಾಡಬೇಕು ಮತ್ತು ಮಾಡಬಾರದು ಎಂಬುದನ್ನು ಕಾಂಗ್ರೆಸ್ ಹೇಳಿಕೊಟ್ಟರೆ ಸಾಕು ಎಂದು ಇದೇ ಸಂದರ್ಭದಲ್ಲಿ ಅವರು ಮತ್ತೊಮ್ಮೆ ಕುಟುಕಿದರು.
ಮುಂಬೈಯನ್ನು ಉಳಿಸಿದ್ದು ಇಡೀ ಭಾರತಕ್ಕೆ ಸೇರಿದ ಎನ್‌ಎಸ್‌ಜಿ ಕಮಾಂಡೋಗಳು ಎಂದು ಹೇಳಿಕೆ ನೀಡಿ ಶಿವಸೇನೆ ಕಿಡಿಗೆ ತುತ್ತಾಗಿದ್ದ ರಾಹುಲ್‌ರನ್ನು ಮತ್ತೆ ಕೆದಕಿದ ಉದ್ಧವ್, ರಾಹುಲ್ ಹೇಗೆ ಮಾತನಾಡಬೇಕೆಂದು ಕಾಂಗ್ರೆಸ್ ನಿರ್ದೇಶನ ನೀಡಲಿ. ಕೇವಲ ಬಿಹಾರ ಮತ್ತು ಉತ್ತರ ಪ್ರದೇಶದ ಕಮಾಂಡೋಗಳು ಮುಂಬೈ ರಕ್ಷಣೆಯಲ್ಲಿ ತೊಡಗಿಸಿಕೊಂಡದ್ದಲ್ಲ. ಶಿವಸೇನೆಗೆ ಏನು ಮಾಡಬೇಕೆಂದು ಗೊತ್ತು. ಯಾರೂ ಹೇಳಿ ಕೊಡಬೇಕಾಗಿಲ್ಲ ಎಂದರು.
ಇದಕ್ಕೂ ಮೊದಲು ಶಿವಸೇನೆ ನಾಯಕ ಸಂಜಯ್ ರಾವುತ್ ಬಾಲಿವುಡ್ ನಟ ಶಾರೂಖ್ ಖಾನ್‌ರ ಮೇಲೆ ವಾಗ್ದಾಳಿ ನಡೆಸಿ, ಅವರ ಮನೆ ಇರುವುದು ಮುಂಬೈಯಲ್ಲಿ, ಪಾಕಿಸ್ತಾನದಲ್ಲಲ್ಲ ಎಂದಿದ್ದರು.
ಅವರೆಲ್ಲ ಮುಂಬೈಯಲ್ಲಿ ಮತ್ತು ಈ ದೇಶದಲ್ಲಿದ್ದುಕೊಂಡು ಪಾಕಿಸ್ತಾನದ ಪರ ಮಾತನಾಡುತ್ತಿದ್ದಾರೆ. ಇದನ್ನು ಮತ್ತೆ ಕಾಣಲು ನಾವು ಇಷ್ಟಪಡುವುದಿಲ್ಲ ಮತ್ತು ಬಿಡುವುದಿಲ್ಲ. ಶಾರೂಖ್ ಹೇಳುತ್ತಿರುವುದು ಕಾಂಗ್ರೆಸ್ ಅಭಿಪ್ರಾಯವನ್ನು. ಆದರೆ ಶಾರೂಖ್ ಮನೆ 'ಮನ್ನತ್' ಇರೋದು ಮುಂಬೈಯಲ್ಲಿ, ಪಾಕಿಸ್ತಾನದಲ್ಲಿ ಅಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಲಿ ಎಂದು ರಾವುತ್ ಎಚ್ಚರಿಕೆ ನೀಡಿದ್ದಾರೆ.