ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪರಾರಿಯಾಗಿ ಎಂದು ಉಗ್ರರ ಕೈಗೆ ಹಣ ತುರುಕಿದ್ದ ರಾಜಕಾರಣಿಗಳು!
(Ex-MLA | Indian Mujahideen | Shahzad | Batla House encounter)
ಪರಾರಿಯಾಗಿ ಎಂದು ಉಗ್ರರ ಕೈಗೆ ಹಣ ತುರುಕಿದ್ದ ರಾಜಕಾರಣಿಗಳು!
ನವದೆಹಲಿ, ಶನಿವಾರ, 6 ಫೆಬ್ರವರಿ 2010( 10:31 IST )
ಬಾಟ್ಲಾ ಹೌಸ್ ಎನ್‌ಕೌಂಟರ್ ಬಂಧಿತ ಭಯೋತ್ಪಾದಕ ತನಗೆ ಸಹಾಯ ಮಾಡಿದವರ ಪುರಾಣಗಳನ್ನು ಒಂದೊಂದಾಗಿಯೇ ಬಿಚ್ಚುತ್ತಿದ್ದು, ಮಾಜಿ ಶಾಸಕರೊಬ್ಬರು 8,000 ರೂಪಾಯಿ ಹಣ ಹಾಗೂ ಮುಂಬೈಯ ಜನಪ್ರಿಯ ರಾಜಕಾರಣಿಯೊಬ್ಬರು 10,000 ರೂಪಾಯಿ ನೀಡಿದ್ದರು ಎಂದಿದ್ದಾನೆ.
ದೆಹಲಿ ಪೊಲೀಸ್ ಅಪರಾಧ ವಿಭಾಗದ ವಶದಲ್ಲಿರುವ ಇಂಡಿಯನ್ ಮುಜಾಹಿದೀನ್ ಉಗ್ರ ಶಾಹ್ಜಾದ್ ಆಲಿಯಾಸ್ ಪಪ್ಪು ಭಾರತದ ರಾಜಕಾರಣಿಗಳ ಬಣ್ಣವನ್ನು ಹಂತಹಂತವಾಗಿ ಬಯಲು ಮಾಡುತ್ತಿದ್ದಾನೆ.
WD
2008ರ ಸೆಪ್ಟೆಂಬರ್ 19ರಂದು ಬಾಟ್ಲಾ ಹೌಸ್ ಎನ್‌ಕೌಂಟರ್ ನಡೆಸಿದ ಬಳಿಕ ಪರಾರಿಯಾಗುವ ಸಂದರ್ಭದಲ್ಲಿ ಉತ್ತರ ಪ್ರದೇಶದ ಮಾಜಿ ಶಾಸಕರೊಬ್ಬರು 8,000 ರೂಪಾಯಿಗಳನ್ನು ನೀಡಿದ್ದರು ಎಂದು ತಿಳಿಸಿದ್ದಾನೆ.
ಬಿಹಾರಕ್ಕೆ ಸೇರಿದ ಕೇಂದ್ರದ ಮಾಜಿ ಜೂನಿಯರ್ ಸಚಿವರೊಬ್ಬರು ಮತ್ತು ಮುಂಬೈಯ ಜನಪ್ರಿಯ ರಾಜಕಾರಣಿಯೊಬ್ಬರಿಂದ ತಾನು ಸಹಾಯ ಪಡೆದಿದ್ದೆ ಎಂಬುದನ್ನೂ ಉಗ್ರ ಬಾಯ್ಬಿಟ್ಟಿದ್ದಾನೆ. ಮುಂಬೈಯ ರಾಜಕಾರಣಿ ಆರ್ಥಿಕ ಸಹಾಯ ಮಾಡುವುದಾಗಿ ಹೇಳಿದ್ದರೆ, ಶಾಹ್ಜಾದ್ ಮತ್ತು ಆತನ ಸಹಚರ ಅರೀಜ್ ಅಥವಾ ಜುನೈದ್ ಶರಣಾಗತಿಯಾಗುವುದಾದರೆ ತಾನು ಸಹಾಯಕ್ಕೆ ಸಿದ್ಧ ಎಂದು ಮಾಜಿ ಸಚಿವರು ತಿಳಿಸಿದ್ದರು ಎಂದು ಪತ್ರಿಕೆಯೊಂದು ವರದಿ ಮಾಡಿದೆ.
ದೆಹಲಿ ಸ್ಫೋಟದ ನಂತರ ಪರಾರಿಯಾಗಲು ಶಾಹ್ಜಾದ್‌ಗೆ ಮುಂಬೈಯ ರಾಜಕಾರಣಿ 10,000 ರೂಪಾಯಿ ನೀಡಿದ್ದರು. ಈ ಸಂದರ್ಭದಲ್ಲಿ ಜುನೈದ್‌ನ ಸಂಬಂಧಿಕರು ಬಿಹಾರದ ಮಾಜಿ ಕೇಂದ್ರ ಸಚಿವರ ಜತೆ ಸಂಪರ್ಕದಲ್ಲಿದ್ದರು ಮತ್ತು ತಾವು ಪೊಲೀಸ್ ಅಥವಾ ನ್ಯಾಯಾಲಯಕ್ಕೆ ಶರಣಾಗತಿಯಾಗುವುದಾದರೆ ತಾನು ಸಹಾಯ ಮಾಡುತ್ತೇನೆ ಎಂದಿದ್ದರು ಎಂದು ಶಾಹ್ಜಾದ್ ತಿಳಿಸಿದ್ದಾನೆ.
ಶಾಹ್ಜಾದ್ ಮತ್ತು ಜುನೈದ್‌ಗೆ 8,000 ರೂಪಾಯಿ ನೀಡುವ ಮೂಲಕ ಮೊದಲ ಬಾರಿ ಸಹಾಯ ಮಾಡಿದ್ದು ಉತ್ತರ ಪ್ರದೇಶದ ಮಾಜಿ ಶಾಸಕ. ನಂತರ ಜುನೈದ್‌ನ ಅಂಕಲ್ ಒಬ್ಬರು ಮಾಜಿ ಕೇಂದ್ರ ಸಚಿವರಿಗೆ ಪರಿಚಯ ಮಾಡಿಸಿ, ಸಹಾಯ ಮಾಡುವಂತೆ ಕೇಳಿಕೊಂಡಿದ್ದರು. ಈ ಎಲ್ಲಾ ರಾಜಕಾರಣಿಗಳ ಹೆಸರುಗಳನ್ನು ಉಗ್ರರು ಬಾಯ್ಬಿಟ್ಟಿದ್ದರೂ ಪೊಲೀಸರು ಸೂಕ್ತ ದಾಖಲೆಗಳನ್ನು ಕಲೆ ಹಾಕದ ಹೊರತು ಬಹಿರಂಗ ಮಾಡುವುದಿಲ್ಲ ಎಂದಿದ್ದಾರೆ.
ಭಯೋತ್ಪಾದಕರಿಗೆ ಸಾಥ್ ನೀಡಿದ್ದ ರಾಜಕಾರಣಿಗಳ ಹೆಸರುಗಳನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ಕಳುಹಿಸಲಾಗಿದೆ. ಅವರು ಯಾವ ಪಕ್ಷದವರು ಎಂಬುದನ್ನೂ ವಿವರವಾಗಿ ತಿಳಿಸಲಾಗಿದೆ. ಈ ಕುರಿತು ಇನ್ನಷ್ಟು ತನಿಖೆ ನಡೆಸಲಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.