ಶಾರೂಖ್ ದೇಶದ್ರೋಹಿ; ಚಿತ್ರ ಬಿಡುಗಡೆಗೆ ಅಡ್ಡಿಯಿಲ್ಲ: ಠಾಕ್ರೆ
ಮುಂಬೈ, ಶನಿವಾರ, 6 ಫೆಬ್ರವರಿ 2010( 14:46 IST )
ಪಾಕಿಸ್ತಾನಿ ಕ್ರಿಕೆಟ್ ಆಟಗಾರರನ್ನು ಬೆಂಬಲಿಸಿದ್ದ ಶಾರೂಖ್ ಖಾನ್ 'ದೇಶದ್ರೋಹಿ' ಎಂದು ಕಟುವಾಗಿ ಟೀಕಿಸಿರುವ ಶಿವಸೇನೆ, ಅವರ ನೂತನ ಚಿತ್ರ 'ಮೈ ನೇಮ್ ಈಸ್ ಖಾನ್' ಬಿಡುಗಡೆಗೆ ಅಡ್ಡಿ ಮಾಡುವುದಿಲ್ಲ ಎಂದು ನಿಲುವು ಬದಲಾಯಿಸಿಕೊಂಡಿದೆ.
ಇಟಲಿ ಮಹಿಳೆ (ಸೋನಿಯಾ ಗಾಂಧಿ) ಮತ್ತು ಯುವರಾಜ (ರಾಹುಲ್ ಗಾಂಧಿ) ಕೃಪೆಯಿಂದ ಶಾರೂಖ್ ತನ್ನ ಚಿತ್ರವನ್ನು ಇಡೀ ದೇಶದಲ್ಲಿ ಯಾವುದೇ ಭದ್ರತೆಯಿಲ್ಲದೆ ಬಿಡುಗಡೆ ಮಾಡಲಿ. ಶಿವಸೇನೆಯು ಇದನ್ನು ವಿರೋಧಿಸುವುದಿಲ್ಲ ಎಂದು ಪಕ್ಷದ ವರಿಷ್ಠ ಬಾಳ್ ಠಾಕ್ರೆ 'ಸಾಮ್ನಾ'ದ ಸಂಪಾದಕೀಯದಲ್ಲಿ ತಿಳಿಸಿದ್ದಾರೆ.
ಖಾನ್ ಎಂಬ ಶಾರೂಖ್ ಪಾಕಿಸ್ತಾನೀಯರನ್ನು ಪ್ರೀತಿಸಬೇಕೆಂದು ಹೇಳುತ್ತಿದ್ದಾರೆ. ಆದರೆ ಅವರ ನಂಬಿಕೆ ದ್ರೋಹತನದಿಂದ ಉಸಿರುಗಟ್ಟಿ ಸಾಯುತ್ತಾರೆ ಎಂದು ಯಾರೂ ಭಾವಿಸಿಲ್ಲ. ಕಾಂಗ್ರೆಸ್‌ನ ಆಶೀರ್ವಾದದೊಂದಿಗೆ ದೇಶದ್ರೋಹಿಗಳು ತಮಗೆ ಏನು ಬೇಕೋ ಅದನ್ನು ಮಾಡುತ್ತಾರೆ. ಸೇನೆಯು ನಿಮ್ಮನ್ನು ತಡೆಯುವುದಿಲ್ಲ. ಯಾವುದೇ ಕಾರಣವಿಲ್ಲದೆ ಶಿವಸೈನಿಕರ ತಲೆ ಒಡೆಸಿಕೊಂಡು ಜೈಲಿಗೆ ಹೋಗಬೇಕು ಎಂದು ಠಾಕ್ರೆ ತೀಕ್ಷ್ಣವಾಗಿ ಬರೆದಿದ್ದಾರೆ.
ನಾವು ಕ್ರಿಕೆಟ್ ಪ್ರೇಮಿಗಳಾಗಿದ್ದ ಹೊರತಾಗಿಯೂ ಪಾಕಿಸ್ತಾನಿ ಕ್ರಿಕೆಟಿಗರನ್ನು ನಾವು ನಿಷೇಧಿಸಿದ್ದೆವು. 2008ರ ಮುಂಬೈ ದಾಳಿಗೆ ಪಾಕಿಸ್ತಾನ ಸಹಕರಿಸಿತ್ತು ಎಂಬ ಕಾರಣಕ್ಕಾಗಿ ಈ ನಿಷೇಧ ಹೇರಲಾಗಿತ್ತು. ಆದರೆ ಪಾಕಿಸ್ತಾನವನ್ನು ಬೆಂಬಲಿಸುವ ಶಾರೂಖ್‌ಗೆ ರಕ್ಷಣೆ ನೀಡಲಾಗುತ್ತಿದೆ ಎಂದು ಅಸಮಾಧಾನ ತೋಡಿಕೊಂಡಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ ಮೂರನೇ ಆವೃತ್ತಿಯಲ್ಲಿ ಪಾಕಿಸ್ತಾನಿ ಆಟಗಾರರನ್ನು ಸೇರಿಸಿಕೊಳ್ಳಬೇಕೆಂದು ಹೇಳಿದ್ದ ಶಾರೂಖ್ ವಿರುದ್ಧ ಕತ್ತಿ ಮಸೆದಿದ್ದ ಶಿವಸೇನೆ, ನಟ ಕ್ಷಮೆ ಯಾಚಿಸದ ಹೊರತು ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದು ಬೆದರಿಕೆ ಹಾಕಿತ್ತು.
ಶಿವಸೇನೆ ಬೇಡಿಕೆಯನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ದ ಖಾನ್, ತಾನೇನೂ ಹೇಳಬಾರದಂತಹ ಮಾತುಗಳನ್ನು ಹೇಳಿಲ್ಲ; ನನಗೆ ರಾಷ್ಟ್ರಪ್ರೇಮದ ಬಗ್ಗೆ ಯಾರೂ ಹೇಳಿಕೊಡಬೇಕಾಗಿಲ್ಲ ಎಂದು ತಿರುಗೇಟು ನೀಡಿದ್ದರು. ಬಳಿಕ ಹೇಳಿಕೆ ನೀಡಿದ್ದ ಸೇನೆ, ಯಾವ ಬೆಲೆ ತೆತ್ತಾದರೂ ಸರಿಯೇ, ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದಿತ್ತು.
ಸಿನಿಮಾ ನೋಡಿದ ಬಿಜೆಪಿ ಮುಖಂಡರು... ಮಿತ್ರ ಪಕ್ಷ ಶಿವಸೇನೆ ಮತ್ತು ವಿಶ್ವ ಹಿಂದೂ ಪರಿಷತ್‌ಗಳು ಶಾರೂಖ್ ವಿರುದ್ಧ ಕತ್ತಿ ಮಸೆಯುತ್ತಿದ್ದ ಹೊರತಾಗಿಯೂ ಗಣನೆಗೆ ತೆಗೆದುಕೊಳ್ಳದ ಬಿಜೆಪಿ ಮುಖಂಡರು ನಿನ್ನೆ ದೆಹಲಿಯಲ್ಲಿ 'ಮೈ ನೇಮ್ ಈಸ್ ಖಾನ್' ಚಿತ್ರವನ್ನು ವೀಕ್ಷಿಸಿದ್ದಾರೆ.
ಕೇವಲ ಬಿಜೆಪಿ ನಾಯಕರು ಮಾತ್ರವಲ್ಲ ಇತರ ಹಲವು ಪಕ್ಷಗಳ ನಾಯಕರೂ ಈ ವಿಶೇಷ ಪ್ರದರ್ಶನಕ್ಕೆ ಬಂದಿದ್ದರು.
ಟೀಕೆ ಮುಂದುವರಿಸಿದ ಸೇನೆ... ಇತ್ತ ಠಾಕ್ರೆ ಪಕ್ಷದ ನಿಲುವು ಬದಲಾಯಿಸಿರುವುದರ ಹೊರತಾಗಿಯೂ ಪಕ್ಷದ ವಕ್ತಾರ ಸಂಜಯ್ ರಾವುತ್ ಶಾರೂಖ್ ವಿರುದ್ಧ ಟೀಕೆ ಮುಂದುವರಿಸಿದ್ದಾರೆ.
ಶಾರೂಖ್ ಭಾರತದ ಹೊರಗೆ ವಿವಾದಿತ ಹೇಳಿಕೆ ನೀಡುವುದನ್ನು ಬಿಟ್ಟು ಭಾರತದಲ್ಲೇ ಅಂತಹ ಹೇಳಿಕೆಗಳನ್ನು ನೀಡಲಿ ಎಂದು ಅವರು ಸವಾಲು ಹಾಕಿದ್ದಾರೆ. ಅಲ್ಲದೆ ಮುಂಬೈ ದಾಳಿಯಲ್ಲಿ ಹತರಾದ ಕುಟುಂಬಸ್ಥರನ್ನು ಭೇಟಿ ಮಾಡಿದ ನಂತರ ಪಾಕಿಸ್ತಾನೀಯರ ಪರವಾಗಿ ಮಾತನಾಡಿ ಎಂದು ಅವರು ಸಲಹೆ ಮಾಡಿದ್ದಾರೆ.
ಶಾರೂಖ್‌ಗೆ ಭಾರೀ ಬೆಂಬಲ... ಜನಪ್ರಿಯ ನಟರಾದ ಸಲ್ಮಾನ್ ಖಾನ್, ಅಭಿಷೇಕ್ ಬಚ್ಚನ್ ಮತ್ತು ನಾನಾ ಪಾಟೇಕರ್ ಸೇರಿದಂತೆ ಹೆಚ್ಚಿನವರು ಶಾರೂಖ್‌ಗೆ ಬೆಂಬಲ ಘೋಷಿಸಿದ್ದಾರೆ.
ನಾವು ಕ್ರಿಕೆಟ್ ಮತ್ತು ರಾಜಕೀಯವನ್ನು ಸಮ್ಮಿಲಿತಗೊಳಿಸಬಾರದು. ಇಲ್ಲಿ ಶಾರೂಖ್, ಸಲ್ಮಾನ್ ಅಥವಾ ಅಮೀರ್ ಸಿನಿಮಾಗಳೆಂಬುದು ಪ್ರಶ್ನೆಯಲ್ಲ. ಇದು ಎಲ್ಲರ ಚಿತ್ರ, ದೇಶದ ಚಿತ್ರ. ಒಬ್ಬ ನಟ ಯಾವುದೇ ಪಕ್ಷಕ್ಕೆ ಮತ ಹಾಕಬೇಡಿ ಅಥವಾ ಈ ಪಕ್ಷಕ್ಕೆ ಮತ ಹಾಕಬೇಡಿ ಎಂದು ಹೋದವರಲ್ಲ ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ.
ಮರಾಠಿಗನೇ ಆಗಿರುವ ನಾನಾ ಪಾಟೇಕರ್ ಶಿವಸೇನೆಯನ್ನು ನಿಯಂತ್ರಣ ಮುಕ್ತವಾಗಿ ಬಿಟ್ಟಿರುವುದಕ್ಕೆ ಸರಕಾರ ಮತ್ತು ಸಮಾಜವನ್ನೇ ದೂಷಿಸಿದ್ದಾರೆ.
ಮರಾಠಿ ಮಾನೂಗಳು ಯಾವತ್ತೂ ಈ ರೀತಿ ವರ್ತಿಸಿದವರಲ್ಲ. ನಾವು ಯಾರ ವಿರುದ್ಧವೂ ಅಲ್ಲ. ನನಗೆ ಯಾವತ್ತೂ ಅಂತಹ ಭೀತಿ ಎದುರಾಗಿಲ್ಲ. ಮುಂಬೈಯಲ್ಲಿ ಇಂದು ಏನು ನಡೆಯುತ್ತಿದೆಯೋ ಅದಕ್ಕೆ ಈ ಸಮಾಜ ಮತ್ತು ಸರಕಾರವೇ ಕಾರಣ ಎಂದು ಪಾಟೇಕರ್ ತಿಳಿಸಿದ್ದಾರೆ.