ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಿಮಿ ನಿಷೇಧವನ್ನು ಎರಡು ವರ್ಷಗಳಿಗೆ ವಿಸ್ತರಿಸಿದ ಕೇಂದ್ರ (Ban on SIMI | Centre govt | Students Islamic Movement of India | India)
Bookmark and Share Feedback Print
 
ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳಿಗೆ ಸಹಕಾರ ನೀಡಿರುವ ಮತ್ತು ಭಾರತದಾದ್ಯಂತ ವಿಧ್ವಂಸಕ ಕೃತ್ಯಗಳನ್ನು ನಡೆಸಿರುವ ಆರೋಪ ಹೊತ್ತಿರುವ ಭಾರತೀಯ ಇಸ್ಲಾಮಿಕ್ ವಿದ್ಯಾರ್ಥಿ ಚಳುವಳಿ (ಸಿಮಿ) ನಿಷೇಧವನ್ನು ಸೋಮವಾರದಿಂದ ಅನ್ವಯವಾಗುವಂತೆ ಎರಡು ವರ್ಷಗಳಿಗೆ ಕೇಂದ್ರ ಸರಕಾರ ವಿಸ್ತರಿಸಿದೆ.

ಜಮ್ಮು-ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳನ್ನು ಹೊರತುಪಡಿಸಿ ಉಳಿದೆಲ್ಲಾ ಕಡೆ ನಡೆದ ಭಯೋತ್ಪಾದನಾ ದಾಳಿಗಳಲ್ಲಿ ಭಾಗವಹಿಸಿರುವ ಮತ್ತು ಪಾಕಿಸ್ತಾನ ಮೂಲದ ಉಗ್ರಗಾಮಿ ಗುಂಪುಗಳಿಗೆ ನೆಲೆ ಮತ್ತು ತಳಮಟ್ಟದ ಸದಸ್ಯರನ್ನು ಪೂರೈಸಿರುವ ಆರೋಪಗಳನ್ನು ಹೊತ್ತಿರುವ ಸಿಮಿ ಮೇಲೆ 2001ರ ಸೆಪ್ಟೆಂಬರ್ ತಿಂಗಳಿನಿಂದ ನಿಷೇಧ ಹೇರುತ್ತಾ ಬರಲಾಗಿದೆ.

2007-08ರ ಅವಧಿಯಲ್ಲಿ ಜೈಪುರ, ಬೆಂಗಳೂರು, ಹೈದರಾಬಾದ್, ಸೂರತ್, ಅಹಮದಾಬಾದ್ ಮತ್ತು ದೆಹಲಿಗಳಲ್ಲಿ ಸರಣಿ ದಾಳಿಗಳನ್ನು ನಡೆಸಿರುವ ಇಂಡಿಯನ್ ಮುಜಾಹಿದೀನ್ ಉಗ್ರಗಾಮಿ ಸಂಘಟನೆಯ ಉಪಶಾಖೆಯಾಗಿರುವ ಸಿಮಿ ಸಂಘಟನೆಯ ಮೇಲಿನ ನಿಷೇಧ 2012ರ ಫೆಬ್ರವರಿ 7ರವರೆಗೆ ಮುಂದುವರಿಯಲಿದೆ ಎಂದು ಗೃಹ ಸಚಿವಾಲಯದ ಮೂಲಗಳು ಹೇಳಿವೆ.

ಸಿಮಿ ತನ್ನ ವಿವಿಧ ಸಂಘಟನೆಗಳ ಮೂಲಕ ಕಾನೂನು ವಿರೋಧಿ ಚಟುವಟಿಕೆಗಳನ್ನು ಮುಂದುವರಿಸುತ್ತಿರುವ ಕಾರಣ ಅದರ ಮೇಲಿನ ನಿಷೇಧವನ್ನು ಎರಡು ವರ್ಷಗಳಿಗೆ ವಿಸ್ತರಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ದೇಶದಾದ್ಯಂತ ಸಿಮಿ ಹೊಂದಿರುವ ಅಂಗ ಸಂಸ್ಥೆಗಳ ಕಾರ್ಯ ಚಟುವಟಿಕೆಗಳ ಕುರಿತು ಪುರಾವೆಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಗೃಹ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಿಮಿ ಮೇಲಿನ ನಿಷೇಧ ಭಾನುವಾರ ಅಂತ್ಯಗೊಂಡಿದ್ದನ್ನು ವಿಸ್ತರಿಸಿರುವ ಕೇಂದ್ರದ ನಿರ್ಧಾರವನ್ನು ಸಂಘಟನೆಯು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದಾಗಿದೆ. ಆದರೆ ಸರಕಾರದ ತೀರ್ಮಾನವನ್ನು ಕೋರ್ಟಿನಲ್ಲಿ ಸಮರ್ಥಿಸಿಕೊಳ್ಳಬಹುದಾದ ಸಿಮಿ ವಿರುದ್ಧದ ಸಾಕಷ್ಟು ಪುರಾವೆಗಳು ಇರುವುದರಿಂದ ನಾವು ಧೃತಿಗೆಡಬೇಕಾದ ಅಗತ್ಯವಿಲ್ಲ ಎಂದು ಸಚಿವಾಲಯ ಹೇಳಿದೆ.

ನಿಷೇಧವನ್ನು ವಿಸ್ತರಿಸುವ ಸರಕಾರ ಇದೀಗ ನಿರ್ಧಾರವನ್ನು ಕಾನೂನು ದೃಷ್ಟಿಯಿಂದ ಪರಿಶೀಲನೆ ನಡೆಸುವ ಏಕಸದಸ್ಯ ಪೀಠದ ನ್ಯಾಯಾಧಿಕರಣವನ್ನು ತಿಂಗಳೊಳಗೆ ಸ್ಥಾಪಿಸಲಿದೆ. ಇದು ನಿಷೇಧವನ್ನು ಖಚಿತಪಡಿಸುವುದು ಅಥವಾ ರದ್ದುಪಡಿಸುವ ಅಧಿಕಾರವನ್ನು ಹೊಂದಿದ್ದು, ಆರು ತಿಂಗಳಳೊಳಗೆ ತನ್ನ ನಿರ್ಧಾರವನ್ನು ಪ್ರಕಟಿಸಲಿದೆ.
ಸಂಬಂಧಿತ ಮಾಹಿತಿ ಹುಡುಕಿ