ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬೆಲೆಯೇರಿಕೆಗೆ ಕಾರಣ ಹವಾಮಾನ ವೈಪರೀತ್ಯವೇನಲ್ಲ: ಮೋದಿ (Gujarat | Narendra Modi | essential commodities | Manmohan Singh)
Bookmark and Share Feedback Print
 
ಬೆಲೆಯೇರಿಕೆಗೆ ಪ್ರತಿಕೂಲ ಹವಾಮಾನ ಮತ್ತು ಹವಾಮಾನ ಬದಲಾವಣೆ ಕಾರಣವೆಂಬ ಕೇಂದ್ರ ಸರಕಾರದ ಕಾರಣವನ್ನು ತರಾಟೆಗೆ ತೆಗೆದುಕೊಂಡಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರಾವಧಿಯಲ್ಲಿ ಇದೇ ರೀತಿಯ ವಾತಾವರಣವಿತ್ತು, ಆದರೆ ಬೆಲೆಯೇರಿಕೆಯಾಗಿರಲಿಲ್ಲ ಎಂದಿದ್ದಾರಲ್ಲದೆ, ಬೆಲೆ ಏರಿಕೆ ನಿರ್ವಹಣೆಯಲ್ಲಿನ ಸರಕಾರದ ವೈಫಲ್ಯವೇ ಇದಕ್ಕೆ ಕಾರಣ ಎಂದು ಟೀಕಿಸಿದ್ದಾರೆ.

ಪ್ರತಿಕೂಲ ವಾತಾವರಣ ಮತ್ತು ಹವಾಮಾನ ಬದಲಾವಣೆಯಿಂದ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿದೆ ಎಂಬ ಕೇಂದ್ರ ಸರಕಾರದ ಹೇಳಿಕೆ ನನಗೆ ಅಚ್ಚರಿ ತಂದಿದೆ ಎಂದು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಕರೆದಿದ್ದ ಮುಖ್ಯಮಂತ್ರಿಗಳ ಸಮಾವೇಶದಲ್ಲಿ ಮಾತನಾಡುತ್ತಾ ಮೋದಿ ಹೇಳಿದರು.

2000ದಿಂದ 2002ರ ಮೂರು ವರ್ಷಗಳ ಅವಧಿಯಲ್ಲಿ ಇದಕ್ಕಿಂತಲೂ ಹೆಚ್ಚು ಪ್ರತಿಕೂಲ ಹವಾಮಾನವಿತ್ತು, ಆಗ ಕೃಷಿ ಉತ್ಪನ್ನಗಳ ಮೇಲೂ ಅಷ್ಟೇ ದುಷ್ಪರಿಣಾಮವುಂಟಾಗಿತ್ತು. ಆದರೆ ಬೆಲೆಯೇರಿಕೆ ನಿಯಂತ್ರಣದಲ್ಲಿತ್ತು. ಆಗ ವ್ಯವಸ್ಥಿತ ಪೂರೈಕೆಯಿಂದಾಗಿ ಆಹಾರ ವಸ್ತುಗಳ ಹಣದುಬ್ಬರ ದರ ಶೇ.5ರೊಳಗಿತ್ತು ಎಂದು ವಿವರಿಸಿದರು.

1998ರಿಂದ 2004ರ ಅವಧಿಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಕೇಂದ್ರದಲ್ಲಿ ಅಧಿಕಾರದಲ್ಲಿತ್ತು.

ಅದೇ ಹೊತ್ತಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಳವು ಕೂಡ ಬೆಲೆಯೇರಿಕೆಗೆ ಕಾರಣವಾಯಿತು ಎಂಬ ಕೇಂದ್ರದ ವಾದವನ್ನೂ ಇದೇ ಸಂದರ್ಭದಲ್ಲಿ ಮೋದಿ ತಳ್ಳಿ ಹಾಕಿದ್ದಾರೆ.

2009-10ರ ಸಾಲಿನಲ್ಲಿ ಭತ್ತಕ್ಕೆ ಶೇ.16ರ ಕನಿಷ್ಠ ಬೆಂಬಲ ಬೆಲೆ ಮತ್ತು ಕಬ್ಬಿನ ಬೆಂಬಲ ಬೆಲೆ ಶೇ.50ರಷ್ಟು ಹೆಚ್ಚಾಗಿದ್ದರೆ, ಆಹಾರ ವಸ್ತುಗಳ ದರದಲ್ಲಿ ಶೇ.40-60ರಷ್ಟು ಮತ್ತು ಸಕ್ಕರೆ ದರ ಶೇ.150ಕ್ಕಿಂತಲೂ ಹೆಚ್ಚು ಏರಿಕೆಯಾಗುವುದು ಹೇಗೆ? ಇದರ ಹಿಂದಿನ ಆರ್ಥಿಕ ತರ್ಕವೇ ಅರ್ಥವಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಸಗಟು ದರ ಸೂಚ್ಯಂಕವು ತೋರಿಸುತ್ತಿರುವ ಆಹಾರ ಹಣದುಬ್ಬರ ದರವು ಗ್ರಾಹಕರ ಕೈಗೆ ವಸ್ತುಗಳು ಸಿಗುತ್ತಿರುವ ನೈಜ ಬೆಲೆಯನ್ನು ಮತ್ತು ದರ ಪರಿಸ್ಥಿತಿಯನ್ನು ತೋರಿಸುವ ಸೂಕ್ತ ಮಾಪನವಲ್ಲ. ಅಸಲಿಗೆ ಸಾಮಾನ್ಯ ಗ್ರಾಹಕನು ಸಗಟು ವ್ಯಾಪಾರಿಗಿಂತ ಹೆಚ್ಚು ಬೆಲೆ ತೆರುತ್ತಿದ್ದಾನೆ ಎಂದು ಮೋದಿ ತನ್ನ ತರ್ಕ ಮಂಡಿಸಿದ್ದಾರೆ.

ಸೂಕ್ತ ಯೋಜನೆಯ ಕೊರತೆ..
ಕೇಂದ್ರ ಸರಕಾರದ ವ್ಯವಸ್ಥಿತವಾಗಿ ಯೋಜನೆಯ ಕೊರತೆಯಿಂದ ಬೆಲೆಯೇರಿಕೆಯನ್ನು ಬಡಜನರು ಎದುರಿಸಬೇಕಾಯಿತು ಎಂದು ಉತ್ತರಾಂಚಲ ಮುಖ್ಯಮಂತ್ರಿ ರಮೇಶ್ ಪೋಕ್ರಿಯಾಲ್ ಹೇಳಿದ್ದಾರೆ.

ಕೇಂದ್ರ ಸರಕಾರದಲ್ಲಿನ ಸೂಕ್ತ ಪೂರ್ವಸಿದ್ಧತೆ ಮತ್ತು ದೃಢತೆಯ ಕೊರತೆಯಿಂದಾಗಿ ಬೆಲೆ ಹೆಚ್ಚಳವಾಗಿದೆ. ಆಹಾರ ವಸ್ತುಗಳ ದಾಸ್ತಾನು, ಲಭ್ಯತೆ ಮತ್ತು ಮಾರುಕಟ್ಟೆಯ ಬೇಡಿಕೆಗಳನ್ನು ಹತ್ತಿರದಿಂದ ಗಮನಿಸಲು ಕೇಂದ್ರ ಸರಕಾರವು ಹೊಸ ವಿಭಾಗವೊಂದನ್ನು ಅಸ್ತಿತ್ವಕ್ಕೆ ತರಬೇಕು ಎಂದೂ ಅವರು ಒತ್ತಾಯಿಸಿದ್ದಾರೆ.

ಬಿಜೆಪಿ ಸರಕಾರದ ಮುಖ್ಯಸ್ಥರಾಗಿರುವ ಪೋಕ್ರಿಯಾಲ್, ಈಗಿನ ಬೆಲೆಯೇರಿಕೆ ಕೃತಕವಾಗಿ ಸೃಷ್ಟಿಯಾಗಿರುವಂತಹುದು. ಅದು 17 ರೂಪಾಯಿಯಲ್ಲಿ ಒಂದು ಕೇಜಿ ಸಕ್ಕರೆಯನ್ನು ರಫ್ತು ಮಾಡಿ ನಂತರ 44 ರೂಪಾಯಿಗೆ ಆಮದು ಮಾಡಿಕೊಳ್ಳಲಾಗಿದೆ ಎಂಬಲ್ಲಿಯವರೆಗೆ ಕೇಂದ್ರ ಸರಕಾರದ ವೈಫಲ್ಯ ಬಹಿರಂಗವಾಗಿದೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ