ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ದೆಹಲಿಯಲ್ಲಿ ಖಾಲಿಸ್ತಾನ ಪರ ಭಿತ್ತಿಪತ್ರ; ತೀವ್ರ ಕಳವಳ
(Khalistan | New Delhi | pro-Khalistan posters | Gurudwara Bangla Sahib)
ರಾಷ್ಟ್ರೀಯ ರಾಜಧಾನಿಯ ಜನಪ್ರಿಯ ಗುರುದ್ವಾರ ಬಾಂಗ್ಲಾ ಸಾಹಿಬ್ ಸಮೀಪ ಇದ್ದಕ್ಕಿದ್ದಂತೆ ಖಾಲಿಸ್ತಾನ ಪರ ಭಿತ್ತಿಪತ್ರಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಭಾರೀ ಕಳವಳ ವ್ಯಕ್ತವಾಗಿದ್ದು, ರಾಜಕೀಯ ಪಕ್ಷಗಳು ತೀವ್ರ ಆತಂಕ ವ್ಯಕ್ತಪಡಿಸಿವೆ.
ಶನಿವಾರ ಗುರುದ್ವಾರ ಬಾಂಗ್ಲಾ ಸಾಹಿಬ್‌ನಲ್ಲಿ ಖಾಲಿಸ್ತಾನವನ್ನು ಬೆಂಬಲಿಸುವ ಕೆಲವು ಪೋಸ್ಟರುಗಳು ಪತ್ತೆಯಾದ ತಕ್ಷಣವೇ ಅವುಗಳನ್ನು ತೆಗೆಯಲಾಗಿದ್ದರೂ, ಕಾಂಗ್ರೆಸ್ ಮತ್ತು ಬಿಜೆಪಿಗಳು ತೀವ್ರ ಕಳವಳ ವ್ಯಕ್ತಪಡಿಸಿವೆ.
ಗುರುದ್ವಾರದ ಪ್ರಮುಖ ದ್ವಾರದಲ್ಲಿ ಈ ಭಿತ್ತಿಪತ್ರಗಳನ್ನು ಅಂಟಿಸಲಾಗಿತ್ತು. ಈ ಬಗ್ಗೆ ದೂರುಗಳು ಬಂದ ಕೂಡಲೇ ದೆಹಲಿ ಪೊಲೀಸರು ಕಾರ್ಯಪ್ರವೃತ್ತರಾಗಿ ಅವುಗಳನ್ನು ತೆರವುಗೊಳಿಸಿದ್ದಾರೆ ಎಂದು ವರದಿಗಳು ಹೇಳಿವೆ.
'ಖಾಲಿಸ್ತಾನ' ಎಂಬ ಪ್ರತ್ಯೇಕ ಸ್ವತಂತ್ರ ರಾಷ್ಟ್ರ ಸ್ಥಾಪನೆಯ ಚಳುವಳಿಯನ್ನು ಆರಂಭಿಸಿದ್ದ ಜರ್ನೈಲ್ ಸಿಂಗ್ ಬಿಂದ್ರನ್‌ವಾಲೆಯ ಹುಟ್ಟುಹಬ್ಬದ ಸಂಭ್ರಮಾಚರಣೆಯನ್ನು ಫೆಬ್ರವರಿ 12ರಂದು ಪಂಜಾಬ್‌ನ ಗುರುದ್ವಾರ ಫತೇಘರ್ ಸಾಹಿಬ್‌ನಲ್ಲಿ ನಡೆಸಲಾಗುತ್ತದೆ, ಇದಕ್ಕೆ ಖಾಲಿಸ್ತಾನ ಬೆಂಬಲಿಗರು ಬರಬೇಕು ಎಂದು ಭಿತ್ತಿಪತ್ರಗಳಲ್ಲಿ ಬರೆಯಲಾಗಿತ್ತು ಎಂದು ಮೂಲಗಳು ಹೇಳಿವೆ.
ಜರ್ನೈಲ್ ಸಿಂಗ್‌ರನ್ನು 1984ರಲ್ಲಿ 'ಆಪರೇಷನ್ ಬ್ಲೂ ಸ್ಟಾರ್' ಮೂಲಕ ಕೊಂದು ಹಾಕಲಾಗಿತ್ತು.
ಪ್ರತ್ಯೇಕ ರಾಷ್ಟ್ರದ ಬೇಡಿಕೆಯು ಇನ್ನೂ ಈಡೇರದ ಹಿನ್ನೆಲೆಯಲ್ಲಿ ಅದನ್ನು ಸಾಧ್ಯವಾಗಿಸುವ ಯತ್ನ ಮುಂದುವರಿಸಬೇಕು ಎಂದು ಕರೆ ಕೊಡುವ ಭಿತ್ತಿ ಪತ್ರಗಳು ಮತ್ತೆ ಕಾಣಿಸಿಕೊಂಡಿರುವುದರಿಂದ ತೀವ್ರ ಆತಂಕ ಮನೆ ಮಾಡಿದೆ.
ಶಿರೋಮಣಿ ಅಕಾಲಿ ದಳ ಅಮೃತಸರದ ಅಧ್ಯಕ್ಷ ಸಿಮ್ರಾಂಜಿತ್ ಸಿಂಗ್ ಮನ್ ಅವರ ಬೆಂಬಲವನ್ನು ಪಡೆಯುವ ಉದ್ದೇಶದಿಂದ ಈ ಭಿತ್ತಿಪತ್ರಗಳನ್ನು ಅಂಟಿಸಲಾಗಿತ್ತು ಎಂದೂ ಹೇಳಲಾಗುತ್ತಿದೆ.
ಈ ಹಠಾತ್ ಬೆಳವಣಿಗೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ರಾಜೀವ್ ಪ್ರತಾಪ್ ರೂಢಿ, ಈ ವಿಚಾರವು ಕಳವಳಕಾರಿಯಾಗಿದ್ದು, ಮತ್ತೆ ಹುಟ್ಟಿಕೊಳ್ಳಲು ಯತ್ನಿಸುತ್ತಿರುವ ಪ್ರತ್ಯೇಕತಾವಾದಿ ಶಕ್ತಿಗಳ ವಿರುದ್ಧ ಕಠಿಣ ಕ್ರಮಗಳನ್ನು ಕೇಂದ್ರ ಸರಕಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.