ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 'ಸ್ವಾತಂತ್ರ್ಯ ಯೋಧನ ಪುತ್ರ ಶಾರೂಖ್ ದೇಶದ್ರೋಹಿ ಹೇಗೆ?' (Shiv Sena | freedom fighter's son | Shah Rukh Khan | Trilochan Singh)
Bookmark and Share Feedback Print
 
ಶಾರೂಖ್ ಖಾನ್ ತಂದೆ ಸ್ವಾತಂತ್ರ್ಯ ಹೋರಾಟಗಾರರಾಗಿದ್ದವರು ಮತ್ತು ವಿಭಜನೆಯ ಸಂದರ್ಭದಲ್ಲಿ ಹಿಂದೂಗಳೆಲ್ಲ ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬರುವಾಗ ವಿಶೇಷವಾಗಿ ಅವರ ಕುಟುಂಬ ಭಾರತಕ್ಕೆ ವಲಸೆ ಬಂದಿತ್ತು. ಅವರ ಬಗ್ಗೆ ಮಾತನಾಡುವ ಹಕ್ಕು ಶಿವಸೇನೆಗೆ ಎಲ್ಲಿದೆ ಎಂದು 83ರ ಹರೆಯದ ಸ್ವಾತಂತ್ರ್ಯ ಹೋರಾಟಗಾರರೊಬ್ಬರು ಪ್ರಶ್ನಿಸಿದ್ದಾರೆ.

ಪೇಷಾವರ ಮೂಲದ ಶಾರೂಖ್ ಅವರ ತಂದೆ ತಾಜ್ ಮೊಹಮ್ಮದ್ ಮಿರ್ ಅವರು 'ಕ್ವಿಟ್ ಇಂಡಿಯಾ ಚಳುವಳಿ'ಯಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದ ಸ್ವಾತಂತ್ರ್ಯ ಹೋರಾಟಗಾರರು. ನಂತರ ದೇಶ ವಿಭಜನೆಯ ಸಂದರ್ಭದಲ್ಲೂ ಭಾರತವನ್ನೇ ಆರಿಸಿಕೊಂಡಿದ್ದ ಅವರ ಪುತ್ರನನ್ನು ದೇಶ ತೊರೆಯುವಂತೆ ಆಗ್ರಹಿಸುತ್ತಿರುವ ಶಿವಸೇನೆ ಆಗ ಎಲ್ಲಿ ಹೋಗಿತ್ತು ಎಂದು ತ್ರಿಲೋಚನ್ ಸಿಂಗ್ ವ್ಯಂಗ್ಯವಾಡಿದ್ದಾರೆ.

ನಾವೆಲ್ಲ ಹಿಂದೂಗಳಾಗಿದ್ದ ಕಾರಣ ಪಾಕಿಸ್ತಾನವನ್ನು ತೊರೆಯಲು ನಿರ್ಧರಿಸಿದ್ದೆವು. ಆದರೆ ಓರ್ವ ಮುಸ್ಲಿಂ ಆಗಿದ್ದ ಅವರು ಭಾರತವನ್ನೇ ಆರಿಸಿಕೊಂಡಿದ್ದರು ಎನ್ನುವುದು ಮಹತ್ವದ ವಿಚಾರ. ಯಾರ ಇಡೀ ಕುಟುಂಬವೇ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿತ್ತೋ, ಅಂತವರನ್ನೇ ಪಾಕಿಸ್ತಾನಕ್ಕೆ ಹೋಗಿ ಎಂದು ಶಿವಸೇನೆ ಹೇಗೆ ಹೇಳುತ್ತದೆ ಎಂದು ಸಿಂಗ್ ಮಾಧ್ಯಮವೊಂದರ ಜತೆ ಮಾತನಾಡುತ್ತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾನು ಮತ್ತು ಶಾರೂಖ್ ತಂದೆ ಮೊಹಮ್ಮದ್ ಈಗಿನ ಪಾಕಿಸ್ತಾನದ ಪೇಷಾವರದಲ್ಲಿದ್ದವರು. ನಾವಿಬ್ಬರೂ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಪಾಲ್ಗೊಂಡಿದ್ದೆವು. ಅವರ ಹಿರಿಯ ಸಹೋದರ ಗುಲಾಂ ಮೊಹಮ್ಮದ್ ಗಾಮಾ ಪೇಷಾವರದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದರಿಂದ ಶಾರೂಖ್ ತಂದೆ ಕೂಡ ಹೋರಾಟಕ್ಕೆ ಧುಮುಕಿದ್ದರು ಎಂದು ಅವರು ವಿವರಣೆ ನೀಡಿದ್ದಾರೆ.

ನಾವಿಬ್ಬರೂ ಹೆಚ್ಚು ಕಡಿಮೆ ಒಂದೇ ವಯಸ್ಸಿನವರಾಗಿದ್ದು, ಯುವಜನರ ಸಾರ್ವಜನಿಕ ಸಮಾರಂಭಗಳಲ್ಲಿ ಭಾಷಣಕಾರರಾಗಿದ್ದೆವು. ಇಬ್ಬರೂ ಬ್ರಿಟೀಷರಿಂದ ಬಂಧನಕ್ಕೊಳಗಾದವರು. ಮೆಟ್ರಿಕ್ಯುಲೇಷನ್ ಮುಗಿದ ನಂತರ ನಾನು ಲಾಹೋರ್‌ಗೆ ಹೋಗಿ ವಿದ್ಯಾರ್ಥಿಗಳಲ್ಲಿ ಕ್ವಿಟ್ ಇಂಡಿಯಾ ಚಳುವಳಿಯನ್ನು ಜಾಗೃತಗೊಳಿಸಿದ್ದೆ. ನಂತರ ನನ್ನನ್ನು ಲಾಹೋರ್‌ನಲ್ಲಿ ಬಂಧಿಸಿ ಪಂಜಾಬ್‌ನಿಂದ ಗಡೀಪಾರು ಮಾಡಲಾಯಿತು. ಹಾಗಾಗಿ ನಾನು ಪೇಷಾವರಕ್ಕೆ ಮರಳಿದ್ದೆ ಎಂದು ಈ ಹಿಂದೆ ಕಾಂಗ್ರೆಸ್ ಸದಸ್ಯರಾಗಿದ್ದ ಹಾಗೂ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಆಪ್ತರಾಗಿದ್ದ ಸಿಂಗ್ ತಿಳಿಸಿದ್ದಾರೆ.

ಸ್ವಾತಂತ್ರ್ಯಾನಂತರ ಪಾಕಿಸ್ತಾನವನ್ನು ತೊರೆದು ಭಾರತದಲ್ಲಿ ನೆಲೆಸಬೇಕೆಂದು ನಿರ್ಧರಿಸಿದ ಕೆಲವೇ ಮುಸ್ಲಿಮರಲ್ಲಿ ಶಾರೂಖ್ ತಂದೆ ಕೂಡ ಒಬ್ಬರು. ನಾನು ದೆಹಲಿಗೆ ಬಂದಿದ್ದೆ. ಕಾಕತಾಳೀಯವೆಂದರೆ ಮೊಹಮ್ಮದ್ ಕೂಡ ದೆಹಲಿಗೇ ಬಂದಿದ್ದರು ಎಂದು ಹಳೆಯ ನೆನಪುಗಳನ್ನು ಸಿಂಗ್ ಬಿಚ್ಚಿಟ್ಟಿದ್ದಾರೆ.

ಈ ಶಿವಸೇನೆ ಮತ್ತು ಬಾಳಾ ಠಾಕ್ರೆಯವರು ಸ್ವಾತಂತ್ರ್ಯ ಹೋರಾಟಕ್ಕೆ ಕಿಂಚಿತ್ತೂ ಗಮನಕೊಟ್ಟವರಲ್ಲ. ಆದರೂ ಅವರು ಶಾರೂಖ್ ಪಾಕಿಸ್ತಾನಕ್ಕೆ ವಾಪಸ್ ಹೋಗಬೇಕೆಂದು ಒತ್ತಾಯಿಸುತ್ತಾರೆ. ಇದು ಶಿವಸೇನಾ ನಾಯಕರಿಗೆ ನಾಚಿಕೆ ತರಬೇಕು. ಅಲ್ಲದೆ ಓರ್ವ ಮುಸ್ಲಿಮನಾಗಿರುವುದಕ್ಕೆ ಹೀಗೆ ಹೇಳುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ ಎಂದು ತ್ರಿಲೋಚನ್ ಕಿಡಿ ಕಾರಿದರು.

ಪಾಕಿಸ್ತಾನ ಕ್ರಿಕೆಟ್ ಆಟಗಾರರ ಪರ ಹೇಳಿಕೆ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದ ಶಿವಸೇನೆ, ಶಾರೂಖ್ ಪಾಕಿಸ್ತಾನಕ್ಕೆ ಹೋಗಬೇಕು, ಆತನೊಬ್ಬ ದೇಶದ್ರೋಹಿ ಎಂದು ಜರೆದಿತ್ತು. ಇದಕ್ಕೆ ಹಲವು ರಾಜಕೀಯ ಪಕ್ಷಗಳು ಹಾಗೂ ಉನ್ನತ ವ್ಯಕ್ತಿಗಳು ಈಗಾಗಲೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ