ಹೀಗೆಂದು ಹೇಳಿರುವುದು ಗುಜರಾತ್‌ನ ಡಾಂಗ್ಸ್ ಜಿಲ್ಲೆಯ ಜಿಲ್ಲಾಧಿಕಾರಿ. 'ಗರೀಬ್ ಕಲ್ಯಾಣ್ ಮೇಳ'ದಲ್ಲಿ ಮಾತನಾಡುತ್ತಿದ್ದ ಅವರು, 'ಮುಖ್ಯಮಂತ್ರಿ ನರೇಂದ್ರ ಮೋದಿಯವರು ಗಿರಿಜನರಿಗೆ ಶ್ರೀರಾಮ, ಮುಸ್ಲಿಮರಿಗೆ ರಹೀಂ ಮತ್ತು ಕ್ರಿಶ್ಚಿಯನ್ನರಿಗೆ ಜೀಸಸ್' ಎಂದು ಘಂಟಾಘೋಷವಾಗಿ ಸಾರಿದ್ದಾರೆ.
ಬುಡಕಟ್ಟು ಜಿಲ್ಲೆ ಡಾಂಗ್ಸ್‌ನಲ್ಲಿ 1999-2000ದ ಅವಧಿಯಲ್ಲಿ ಭಾರೀ ಪ್ರಮಾಣದಲ್ಲಿ ಕ್ರೈಸ್ತ ವಿರೋಧಿ ಹಿಂಸಾಚಾರಗಳು ನಡೆದಿದ್ದವು. ಪುರಾಣಗಳ ಪ್ರಕಾರ ರಾಮಾಯಣದ ಶಬರಿ ಡಾಂಗ್ಸ್ ಅರಣ್ಯ ಪ್ರದೇಶದಲ್ಲಿದ್ದಳು ಎಂದು ಹೇಳಲಾಗಿದೆ.
ಮೋದಿಯವರು ಜಿಲ್ಲೆಯ ಅಹ್ವಾ ಎಂಬಲ್ಲಿ ಕಾರ್ಯಕ್ರಮಕ್ಕೆ ಆಗಮಿಸುವ ಮೊದಲು ಭಾಷಣ ಮಾಡುತ್ತಿದ್ದ ಐಎಎಸ್ ಅಧಿಕಾರಿ ಗಿರೀಶ್ ಶಾಹ್, ಬುಡಕಟ್ಟು ಜನರ ಜೀವನ ಸ್ಥಿತಿಯನ್ನು ಅತ್ಯುತ್ತಮಗೊಳಿಸಲು ಸರಕಾರ ಸಾಕಷ್ಟು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ ಎಂದು ಹೇಳುತ್ತಿದ್ದರು. ಮೋದಿ ಬರುತ್ತಿದ್ದಂತೆ ತನ್ನ ಧಾಟಿ ಬದಲಿಸಿದ ಅವರು ನೇರವಾಗಿ ಶ್ರೀರಾಮನಿಗೇ ಹೋಲಿಸಲಾರಂಭಿಸಿದರು.
ಡಾಂಗ್ಸ್‌ನಲ್ಲಿನ ಶಬರಿ ಮಾತೆಯ ಗುಡಿಸಲಿಗೆ ಭಗವಾನ್ ಶ್ರೀರಾಮ ಬಂದದ್ದು ಚರಿತ್ರಾರ್ಹ ದಿನವಾಗಿತ್ತು. ಇಂದು ಡಾಂಗ್ಸ್‌ಗೆ ಮುಖ್ಯಮಂತ್ರಿ ನರೇಂದ್ರ ಮೋದಿ ಭೇಟಿ ನೀಡಿರುವುದು ಕೂಡ ಒಂದು ಐತಿಹಾಸಿಕ ದಿನವಾಗಿ ಮಾರ್ಪಟ್ಟಿದೆ ಎಂದರು.
ಮುಖ್ಯಮಂತ್ರಿಯವರು ಬುಡಕಟ್ಟು ಜನಾಂಗದವರಿಗೆ ರಾಮ, ಮುಸ್ಲಿಮರಿಗೆ ರಹೀಂ ಮತ್ತು ಕ್ರಿಶ್ಚಿಯನ್ನರಿಗೆ ಜೀಸಸ್. ಅವರು ಎಲ್ಲಾ ಸಮುದಾಯದವರಿಗೂ ಸಾಕಷ್ಟು ಸಹಾಯ ಮಾಡಿದ್ದಾರೆ. ಅವರೀಗ ಮತ್ತೆ ಬುಡಕಟ್ಟು ಜನರ ಜೀವನ ಶೈಲಿಯನ್ನು ಉತ್ಕೃಷ್ಟಕತೆಗೇರಿಸಲು ಬಂದಿದ್ದಾರೆ ಎಂದು ತಾನೊಬ್ಬ ಸರಕಾರಿ ಅಧಿಕಾರಿ ಎಂಬುದನ್ನೂ ಮರೆತು ಅಪಾದಮಸ್ತಕ ಬಣ್ಣಿಸಿದರು.
ಮೋದಿಯವರನ್ನು ಹೊಗಳುವುದನ್ನು ಮುಂದುವರಿಸಿದ ಜಿಲ್ಲಾಧಿಕಾರಿ, 'ಕೈಯಲ್ಲಿ ಕೋಲು ಹಿಡಿದುಕೊಂಡು ಮಹಾತ್ಮಾ ಗಾಂಧಿಯವರು ದೇಶಕ್ಕೆ ಸ್ವಾತಂತ್ರ್ರ್ಯ ತರಲು ಹೋರಾಡಿದ್ದರು. ಇಂದು ನಿಮ್ಮ ಬದುಕನ್ನು ಸುಧಾರಣೆ ಮಾಡುವ ಕೋಲಿನೊಂದಿಗೆ ಮುಖ್ಯಮಂತ್ರಿಯವರು ಬಂದಿದ್ದಾರೆ' ಎಂದರು.
ಮುಖ್ಯಮಂತ್ರಿಯವರೊಬ್ಬರನ್ನು ಈ ಪರಿಯಾಗಿ ಹೊಗಳಿರುವ ಮೊತ್ತ ಮೊದಲ ಪ್ರಸಂಗ ಇದಾಗಿದ್ದ ಕಾರಣ ಪತ್ರಿಕೆಯೊಂದು ಅಧಿಕಾರಿಯವರಲ್ಲಿ ಪ್ರತಿಕ್ರಿಯೆಯನ್ನು ಕೇಳಿದಾಗ, ನಿನ್ನೆ ನಾನು ಏನು ಮಾತನಾಡಿದ್ದೆ ಎಂಬುದು ನನಗೀಗ ನೆನಪಿಲ್ಲ. ನಾನು ಹಲವು ವಿಚಾರಗಳನ್ನು ಪ್ರಸ್ತಾಪಿಸಿದ್ದೇನೆ. ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲಾರೆ ಎಂದಿದ್ದಾರೆ.