ಐದು ರಾಜ್ಯಗಳಲ್ಲಿ ನಕ್ಸಲರ ಬಂದ್; ಹಲವೆಡೆ ರೈಲು ಹಳಿ ಧ್ವಂಸ
ನವದೆಹಲಿ, ಭಾನುವಾರ, 7 ಫೆಬ್ರವರಿ 2010( 10:41 IST )
ಪಶ್ಚಿಮ ಬಂಗಾಲ, ಬಿಹಾರ, ಜಾರ್ಖಂಡ್, ಛತ್ತೀಸಗಢ ಮತ್ತು ಒರಿಸ್ಸಾಗಳಲ್ಲಿ 72 ಗಂಟೆಗಳ ಬಂದ್ ಘೋಷಿಸಿರುವ ನಕ್ಸಲರು ಭಾರೀ ಹಿಂಸಾಚಾರ ಆರಂಭಿಸಿದ್ದು, ಹಲವು ಕಡೆ ಹಳಿಗಳನ್ನು ಧ್ವಂಸಗೊಳಿಸುವ ಮೂಲಕ ರೈಲು ಸಂಚಾರಕ್ಕೆ ತಡೆಯೊಡ್ಡಿದ್ದಾರೆ. ಮಾವೋವಾದಿಗಳ ಅಟ್ಟಹಾಸದಿಂದಾಗಿ ಐದು ರಾಜ್ಯಗಳ ನಕ್ಸಲ್ ಬಾಧಿತ ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ ಎಂದು ವರದಿಗಳು ಹೇಳಿವೆ.
ಬಿಹಾರದಲ್ಲಿನ ಜಾಮೈ ಎಂಬಲ್ಲಿ ರೈಲ್ವೇ ಹಳಿಯನ್ನು ನಕ್ಸಲರು ಧ್ವಂಸಗೊಳಿಸಿದ ಪರಿಣಾಮ ಉತ್ತರ ಭಾರತದಿಂದ ಪಶ್ಚಿಮ ಬಂಗಾಲದ ಹೌರಾಕ್ಕೆ ತೆರಳುವ ರೈಲುಗಳ ಪ್ರಯಾಣಕ್ಕೆ ತಡೆಯುಂಟಾಗಿದೆ.
ಐದು ರಾಜ್ಯಗಳಲ್ಲಿ 72 ಗಂಟೆಗಳ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಹಲವು ರೈಲುಗಳನ್ನು ಈಗಾಗಲೇ ರದ್ದುಗೊಳಿಸಲಾಗಿದೆ. ಕೆಲವು ರೈಲುಗಳನ್ನು ಮಾರ್ಗ ಬದಲಿಸಿ ಬೇರೆಡೆಯಿಂದ ಓಡಿಸಲಾಗುತ್ತಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
ನಕ್ಸಲ್ ಬಾಧಿತ ಜಿಲ್ಲೆಗಳ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಗರಿಷ್ಠ ಕಟ್ಟೆಚ್ಚರ ಘೋಷಿಸಲಾಗಿದೆ. ಅಲ್ಲದೆ ಹೆಚ್ಚುವರಿ ಪೊಲೀಸ್ ಪಡೆಗಳು, ಅರೆ ಮಿಲಿಟರಿ ಪಡೆಗಳು ಹಾಗೂ ರಾಜ್ಯದ ಇತರ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಮೂಲಗಳು ಹೇಳಿವೆ.
ನಾಲ್ಕು ರಾಜ್ಯಗಳಲ್ಲಿ ನಕ್ಸಲ ವಿರುದ್ಧ ಪೊಲೀಸರು ಜಂಟಿ ಕಾರ್ಯಾಚರಣೆ ಆರಂಭಿಸಲಿರುವ ಹಿನ್ನೆಲೆಯಲ್ಲಿ ಪ್ರತಿಭಟನಾರ್ಥವಾಗಿ ಮಾವೋವಾದಿಗಳು ಬಂದ್‌ಗೆ ಕರೆ ನೀಡಿದ್ದರು.
ಸುಮಾರು 40ರಷ್ಟಿದ್ದ ಮಾವೋವಾದಿ ಗೆರಿಲ್ಲಾಗಳು ಕಳೆದ ರಾತ್ರಿ ರಾಜ್ಲಾ ಮತ್ತು ನರ್ಗಾಂಜೋ ರೈಲ್ವೇ ವಲಯದ ಸೇತುವೆಯಲ್ಲಿ ರೈಲ್ವೇ ಹಳಿಗಳನ್ನು ಧ್ವಂಸಗೊಳಿಸಿದ್ದಾರೆ. ಇದರಿಂದ ಸುದೀರ್ಘ ಪ್ರಯಾಣದ ಹಾಗೂ ಸ್ಥಳೀಯ ರೈಲುಗಳ ಓಡಾಟಕ್ಕೆ ತಡೆಯುಂಟಾಗಿದೆ ಎಂದು ಬಿಹಾರ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಯುಎಸ್ ದತ್ ತಿಳಿಸಿದ್ದಾರೆ.
ಪೊಲೀಸ್ ಮಾಹಿತಿದಾರನನ್ನು ಕೊಂದರು... ಈ ನಡುವೆ ಪೊಲೀಸರಿಗೆ ನಿರಂತರ ಮಾಹಿತಿ ನೀಡುತ್ತಿದ್ದಾನೆ ಎಂದು ಆರೋಪಿಸಿ ಒರಿಸ್ಸಾದ ವ್ಯಕ್ತಿಯೊಬ್ಬನನ್ನು ಮಾವೋವಾದಿಗಳು ಕತ್ತು ಸೀಳಿ ಕೊಂದು ಹಾಕಿದ್ದಾರೆ.
ಸುಂದರಗಢ ಜಿಲ್ಲೆಯ ಚಂಡಿಪೋಸ್ ಪೊಲೀಸ್ ಠಾಣಾ ವ್ಯಾಪ್ತಿಯ ಕುಮಾಕೇಳ ಗ್ರಾಮದಲ್ಲಿನ ಸುಕರಾ ಓರಂ ಎಂಬಾತನನ್ನು ಆತನ ಸಹೋದರಿಯ ಮದುವೆಯ ದಿನ ರಾತ್ರಿಯೇ ಕೊಂದು ಹಾಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮದುವೆ ಗಡಿಬಿಡಿಯಲ್ಲಿ ವ್ಯಸ್ತನಾಗಿದ್ದ ಓರಂನನ್ನು ಕಳೆದ ರಾತ್ರಿ ಅಪಹರಿಸಿದ ನಕ್ಸಲರು ನಂತರ ಅವನನ್ನು ಕೊಂದು ಹಾಕಿ ಪಕ್ಕದ ಮೇಲ್ಸೇತುವೆಯೊಂದರ ಪಕ್ಕ ಶವವನ್ನು ಎಸೆದು ಹೋಗಿದ್ದರು.