ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಯೋಧ್ಯೆ ಬಿಜೆಪಿ ಮನವಿ; ಬಾಬ್ರಿ ಸಮಿತಿಯಿಂದ ತಿರಸ್ಕಾರ (Muslims | Ayodhya | Nitin Gadkari | Ram Temple)
Bookmark and Share Feedback Print
 
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಮುಸ್ಲಿಮರು ಉದಾರ ಮನಸ್ಸಿನಿಂದ ಸಹಕರಿಸಬೇಕು ಎಂದು ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಮಾಡಿರುವ ಮನವಿಯನ್ನು ಬಾಬ್ರಿ ಮಸೀದಿ ಕ್ರಿಯಾ ಸಮಿತಿ ತಿರಸ್ಕರಿಸಿದ್ದು, ಪಕ್ಷದ ಭಾಷೆ ಮಾತ್ರ ಬದಲಾಗಿದೆಯೇ ಹೊರತು ಹೃದಯವಲ್ಲ ಎಂದು ಪ್ರತಿಕ್ರಿಯಿಸಿದೆ.

ಇಂದೋರ್‌ನಲ್ಲಿ ನಡೆದ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಅದರ ಅಧ್ಯಕ್ಷ ನಿತಿನ್ ಗಡ್ಕರಿ ಅವರು ಮುಸ್ಲಿಮರನ್ನು ಮೆಚ್ಚಿಸಲು ಮಾಡಿರುವ ಯತ್ನವನ್ನು ಸ್ವಾಗತಿಸುತ್ತೀರಾ ಎಂಬ ಪ್ರಶ್ನೆಗೆ ಬಾಬ್ರಿ ಮಸೀದಿ ಕ್ರಿಯಾ ಸಮಿತಿ ಸಲಹೆಗಾರ ಝಾಫಾರ್ಯಾಬ್ ಗಿಲಾನಿ ಪ್ರತಿಕ್ರಿಯಿಸುತ್ತಾ, 'ಆ ಪಕ್ಷದಲ್ಲಿ ಯಾವುದೇ ಬದಲಾವಣೆಯಾಗಿದೆ ಎಂದು ನನಗನ್ನಿಸುತ್ತಿಲ್ಲ. ಇಲ್ಲಿ ಬದಲಾವಣೆಯಾಗಿರುವುದು ಭಾಷೆ, ಶಬ್ದಗಳು ಮಾತ್ರ. ಆದರೆ ಅದರ ಮನೋಭಾವ ಅಥವಾ ಹೃದಯದಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ' ಎಂದರು.

ಅಷ್ಟಕ್ಕೂ ಇದೇನೂ ಅವರದ್ದು ಆಹ್ವಾನವೇನಲ್ಲ. ಮಸೀದಿಯಲ್ಲಿ ನಮಾಜ್ ಮಾಡುವುದು ಅಥವಾ ಮಸೀದಿಯ ಕಡೆಗಿರುವ ತಮ್ಮ ಹಕ್ಕುಗಳನ್ನು ಮುಸ್ಲಿಮರು ಬಿಟ್ಟುಕೊಡುವುದಿಲ್ಲ ಎಂಬ ಸತ್ಯ ಅವರಿಗೂ ಗೊತ್ತು ಎಂದು ಖಾಸಗಿ ಚಾನೆಲ್ ಜತೆ ಮಾತನಾಡುತ್ತಿದ್ದ ಗಿಲಾನಿ ತಿಳಿಸಿದ್ದಾರೆ.

ಬಿಜೆಪಿ ಮತ್ತು ಶಿವಸೇನೆಯ ಮನೋಭಾವದಲ್ಲಿ ಯಾವುದೇ ಬದಲಾವಣೆಯಾಗಿದೆ ಎಂದು ನಮಗನ್ನಿಸುತ್ತಿಲ್ಲ. ಅವರ ಹೇಳಿಕೆಯಲ್ಲಿ ಯಾವುದೇ ಸತ್ವ ಅಥವಾ ಮನವಿಯಿಲ್ಲ ಎಂದು ಅವರು ಹೇಳಿದರಲ್ಲದೆ, ನ್ಯಾಯಾಲಯ ಇದರ ತೀರ್ಪು ನೀಡಲಿರುವುದಾಗಿ ಹೇಳಿದ್ದನ್ನು ಉಲ್ಲೇಖಿಸಿದರು.

ಮುಸ್ಲಿಮರು ಉದಾರಿಗಳಾಗುವ ಮೂಲಕ ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಗಡ್ಕರಿಯವರು ಮನವಿ ಮಾಡಿಕೊಂಡಿದ್ದರು. ಆದರೆ ಈ ಮನವಿಯನ್ನು ಶಿವಸೇನೆ ಮುಖ್ಯಸ್ಥ ಬಾಳ ಠಾಕ್ರೆ ತೀವ್ರವಾಗಿ ಟೀಕಿಸಿದ್ದರು.

ರಾಮ ಮಂದಿರ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಮುಸ್ಲಿಮರಿಗೆ ಮನವಿ ಮಾಡಿಕೊಂಡಿರುವುದು ಅಯೋಧ್ಯಾ ಚಳುವಳಿಯಲ್ಲಿ ಬಲಿದಾನಗೈದ ನೂರಾರು ಕರಸೇವಕರಿಗೆ ಮಾಡಲಾದ ಅಪಮಾನ ಎಂದು ಠಾಕ್ರೆ ಗುಡುಗಿದ್ದರು.

ಆದರೆ ಗಡ್ಕರಿ ಹೇಳಿಕೆಯನ್ನು ಬಿಜೆಪಿ ಸಮರ್ಥಿಸಿಕೊಂಡಿದೆ. ಇದೊಂದು ನೂತನ ದೃಷ್ಟಿಕೋನವಾಗಿದ್ದು, ಗಡ್ಕರಿಯವರು ಪ್ರಸ್ತಾಪಿಸಿದ್ದಾರೆ. ನಮ್ಮ ಪ್ರಕಾರ ಈ ಮನವಿಗೆ ಮುಸ್ಲಿಮರು ಧನಾತ್ಮಕವಾಗಿ ಪ್ರತಿಕ್ರಿಯಿಸಿದರೆ ಅದು ಹೊಸ ಅನ್ಯೋನ್ಯತೆ ಸೃಷ್ಟಿಗೆ ಕಾರಣವಾಗುತ್ತದೆ ಎಂದು ಬಿಜೆಪಿ ವಕ್ತಾರ ರವಿ ಶಂಕರ್ ಪ್ರಸಾದ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ