ಬಿಎಸ್‌ಪಿ ಶಾಸಕನಿಂದ ಬೆದರಿಕೆ; ಯುಪಿ ಇಂಜಿನಿಯರ್ ರಾಜೀನಾಮೆ
ಇಟಾ, ಭಾನುವಾರ, 21 ಫೆಬ್ರವರಿ 2010( 17:05 IST )
ಬಿಎಸ್‌ಪಿ ಶಾಸಕರೊಬ್ಬರು ತನಗೆ ಜೀವ ಬೆದರಿಕೆಯನ್ನೊಡ್ಡುತ್ತಿದ್ದಾರೆ ಎಂದು ಆರೋಪಿಸಿರುವ ಉತ್ತರ ಪ್ರದೇಶ ಇಟಾದಲ್ಲಿನ ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಒಬ್ಬರು ಮುಖ್ಯಮಂತ್ರಿ ಮಾಯಾವತಿ ಅವರಿಗೆ ತನ್ನ ರಾಜೀನಾಮೆ ಸಲ್ಲಿಸಿದ್ದಾರೆ. ಇದರ ಬೆನ್ನಿಗೆ ಮಾಯಾವತಿ ತನಿಖೆಗೆ ಆದೇಶಿಸಿದ್ದಾರೆ.
ಶಿವದಾಸ್ ಎಂಬ ಇಂಜಿನಿಯರ್‌ಗೆ ಲಖ್ನಾ ವಿಧಾನಸಭಾ ಕ್ಷೇತ್ರದ ಬಿಎಸ್‌ಪಿ ಶಾಸಕ ಭೀಮರಾವ್ ಅಂಬೇಡ್ಕರ್ ಎಂಬವರು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರು ನೀಡಲಾಗಿದೆ ಎಂದು ಮೂಲಗಳು ಹೇಳಿವೆ.
ಇಂಜಿನಿಯರ್ ತನ್ನ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿ, ರಾಜ್ಯ ಕಾರ್ಯದರ್ಶಿ, ಜಿಲ್ಲಾ ಮ್ಯಾಜಿಸ್ಟ್ರೇಟ್, ಇಟಾ ಮತ್ತು ಇತರ ಕೆಲವು ಶಾಸಕರಿಗೆ ಕೂಡ ರವಾನಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ ಇವೆಲ್ಲಾ ಆರೋಪಗಳನ್ನು ಶಾಸಕ ಅಂಬೇಡ್ಕರ್ ನಿರಾಕರಿಸಿದ್ದಾರೆ. ತಾನು ಶಿವದಾಸ್ ಅವರಿಗೆ ಯಾವುದೇ ಬೆದರಿಕೆಯನ್ನು ಹಾಕಿಲ್ಲ ಎಂದು ಅವರು ತಿಳಿಸಿದ್ದಾರೆ.
ಚೌದರಿ ಚರಣ್ ಸಿಂಗ್ ಬೋರ್‌ವೆಲ್ ಯೋಜನೆಯ ಸಂಬಂಧ ಶಾಸಕ ಮತ್ತು ಇಂಜಿನಿಯರ್ ನಡುವೆ ವಾಗ್ವಾದಗಳು ನಡೆದಿದ್ದವು. ಇದೇ ಸಂಬಂಧ ಶಾಸಕರು ಇಂಜಿನಿಯರ್‌ಗೆ ಬೆದರಿಕೆ ಹಾಕಿದ್ದರು ಎಂದು ವರದಿಗಳು ಹೇಳಿವೆ.
ಸರಕಾರದ ಯೋಜನೆಯಡಿಯಲ್ಲಿ ಲಖ್ನಾ ವಿಧಾನಸಭಾ ಕ್ಷೇತ್ರಕ್ಕೆ 24 ಬೋರ್‌ವೆಲ್‌ಗಳನ್ನು ಹಾಕಬೇಕಿತ್ತು. ಆದರೆ ಶಾಸಕ ತನ್ನ ಜಮೀನಿನಲ್ಲೇ ಕೆಲವು ಬೋರ್‌ವೆಲ್‌ಗಳನ್ನ ಹಾಕುವಂತೆ ಇಂಜಿನಿಯರ್ ಮೇಲೆ ಒತ್ತಡ ಹೇರಿದ್ದರು. ಇದನ್ನು ವಿರೋಧಿಸಿದ್ದ ಇಂಜಿನಿಯರ್, ಸರಕಾರಿ ಯೋಜನೆಯಲ್ಲಿ ಇದು ಸಾಧ್ಯವಿಲ್ಲ. ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರ ನೇತೃತ್ವದ ಸಮಿತಿಯಿಂದ ಶಿಫಾರಸು ತನ್ನಿ, ಹಾಗಾದರೆ ಹಾಕಲು ಒಪ್ಪಿಗೆ ಸೂಚಿಸುತ್ತೇನೆ ಎಂದಿದ್ದರು ಎಂದು ಇಂಜಿನಿಯರ್ ತನ್ನ ರಾಜೀನಾಮೆ ಪತ್ರದಲ್ಲಿ ಹೇಳಿದ್ದಾರೆ.