ಪುಣೆ ಜರ್ಮನ್ ಬೇಕರಿ ಸ್ಫೋಟ ನಡೆದ ವಾರ ಕಳೆದರೂ ಮಹತ್ವದ ಸುಳಿವುಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಅಧಿಕಾರಿಗಳು, ಕೃತ್ಯದ ಹಿಂದೆ ಹಿಂದೂ ಬಲಪಂಥೀಯ ಸಂಘಟನೆಗಳ ಕೈವಾಡ ಇಲ್ಲ ಎಂದು ಹೇಳಲಾಗದು ಎಂದು ಹೇಳಿದ್ದಾರೆ.
ಈ ಸಾಧ್ಯಾಸಾಧ್ಯತೆಗಳ ಬಗ್ಗೆ ಮಹಾರಾಷ್ಟ್ರ ಸರಕಾರ ಪರಿಶೀಲನೆ ನಡೆಸುತ್ತಿದೆ. ಪುಣೆ ಸ್ಫೋಟದಲ್ಲಿ ಹಿಂದೂ ಬಲಪಂಥೀಯ ಸಂಘಟನೆಗಳ ಕೈವಾಡದ ಸಾಧ್ಯತೆಗಳನ್ನು ನಾವು ತಳ್ಳಿ ಹಾಕುವುದಿಲ್ಲ ಎಂದು ಗೃಹ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಪತ್ರಕರ್ತರಿಗೆ ತಿಳಿಸಿದ್ದಾರೆ.
ಇತ್ತೀಚಿನ ಕೆಲವು ಮಾಧ್ಯಮ ವರದಿಗಳು ಪುಣೆ ಸ್ಫೋಟಕ್ಕೆ 'ಅಭಿನವ್ ಭಾರತ್' ಎಂಬ ಹಿಂದೂ ಸಂಘಟನೆಯನ್ನು ಲಿಂಕ್ ಮಾಡಿದ್ದವು. ಮಾಲೆಗಾಂವ್ ಸ್ಫೋಟದಲ್ಲಿ ಪಾಲ್ಗೊಂಡಿರುವ ಆರೋಪ ಹೊತ್ತಿರುವ ಈ ಹಿಂದೂ ಬಲಪಂಥೀಯ ಸಂಘಟನೆ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಹಂತಕ ನಾಥೂರಾಮ್ ಗೋಡ್ಸೆಯ ಸಹೋದರ ಗೋಪಾಲ ವಿನಾಯಕ ಗೋಡ್ಸೆಯವರ ಪುತ್ರಿಯ ಮುಂದಾಳುತ್ವದಲ್ಲಿದ್ದು, ಪುಣೆ ಸ್ಫೋಟದಲ್ಲೂ ಪಾಲ್ಗೊಂಡಿರುವ ಸಾಧ್ಯತೆಗಳಿವೆ ಎಂದು ವರದಿಗಳು ಹೇಳಿದ್ದವು.
ಪುಣೆ ಸ್ಫೋಟದ ಸಂಬಂಧ 15ಕ್ಕೂ ಹೆಚ್ಚು ಮಂದಿ ಮುಸ್ಲಿಮರನ್ನು ವಶಕ್ಕೆ ತೆಗೆದುಕೊಂಡು ಮಹಾರಾಷ್ಟ್ರ ಉಗ್ರ ನಿಗ್ರಹ ದಳದ ಪೊಲೀಸರು ವಿಚಾರಣೆ ನಡೆಸುತ್ತಿರುವ ಹೊತ್ತಿನಲ್ಲೇ, ಪುಣೆ ಸ್ಫೋಟವನ್ನು ಹಿಂದೂ ಸಂಘಟನೆಗಳು ಮಾತ್ರ ಸುಲಭವಾಗಿ ನಡೆಸಲು ಸಾಧ್ಯ ಎಂದು ಕೆಲವು ಸಮುದಾಯಗಳ ನಾಯಕರು ವಾದಿಸುತ್ತಿದ್ದಾರೆ.
ಇದಕ್ಕೆ ಪೂರಕವೆನ್ನುವಂತೆ ಮಾಲೆಗಾಂವ್ ಸೇರಿದಂತೆ ಕೆಲವು ಸ್ಫೋಟಗಳಲ್ಲಿ 'ಅಭಿನವ್ ಭಾರತ್' ನೆರಳು ಕೂಡ ಕಾಣಿಸಿಕೊಂಡಿರುವುದು. ಇದೇ ಸಂಘಟನೆಗೆ ಸೇರಿದ ಜತಿನ್ ಚಟರ್ಜಿ ಎಂಬ ವ್ಯಕ್ತಿ ಹಿಂದೂ ಮತಾಂತರ ಕಾರ್ಯಾಚರಣೆ ನಡೆಸುತ್ತಿದ್ದು, ಗುಜರಾತಿನ ಆದಿವಾಸಿ ಪ್ರದೇಶದಲ್ಲಿ ಅಡಗಿಕೊಂಡಿದ್ದಾನೆ. ಈತನನ್ನು ಸೆರೆ ಹಿಡಿಯಲು ಪೊಲೀಸರಿಗೆ ಇನ್ನೂ ಸಾಧ್ಯವಾಗಿಲ್ಲ. 'ಅಭಿನವ್ ಭಾರತ್'ಗೆ ಬಾಂಬ್ ತಯಾರಿಸಿ ಕೊಡುತ್ತಿದ್ದಾನೆ ಎಂದು ಹೇಳಲಾಗಿರುವ ರಾಮನಾರಾಯಣ್ ಕಾಲ್ಸಂಗ್ರ ಎಂಬಾತ ಕೂಡ ಇನ್ನೂ ಭೂಗತ.
ಕಳೆದ ವರ್ಷದ ಗೋವಾದ ಮಡ್ಗಾಂವ್ ಸ್ಫೋಟದ ಹಿಂದೆ 'ಸನಾತನ ಸಂಸ್ಥೆ' ಪಾತ್ರವಿರುವ ಬಗ್ಗೆ ಇನ್ನೂ ತನಿಖೆಗಳು ನಡೆಯುತ್ತಿದ್ದು, ಗೋವಾ ಸರಕಾರದ ಪ್ರಕಾರ ಇದು ಈ ಸಂಘಟನೆಯದ್ದೇ ಕೃತ್ಯ. ಈ ಸಂಘಟನೆ ಕೂಡ ಮಾಲೆಗಾಂವ್ ಸ್ಫೋಟದ ಆರೋಪಿಗಳ ಜತೆ ಸಂಬಂಧ ಹೊಂದಿತ್ತು ಎಂದು ಆ ಸಂದರ್ಭದಲ್ಲಿ ಅಧಿಕಾರಿಗಳು ತಿಳಿಸಿದ್ದರು.
ಈ ಎಲ್ಲಾ ಕಾರಣಗಳಿಂದ ಪುಣೆ ಸ್ಫೋಟದಲ್ಲಿ ಹಿಂದೂ ಸಂಘಟನೆಗಳ ಕೈವಾಡವಿದೆ ಎಂದು ಹೇಳಲು ಸಾಧ್ಯವಿಲ್ಲದೇ ಇದ್ದರೂ, ಇಲ್ಲ ಎಂದು ಖಚಿತವಾಗಿ ಹೇಳಲಾಗದು ಎಂದು ಎಟಿಎಸ್ ಪ್ರತಿಕ್ರಿಯೆ ನೀಡಿದೆ. ಹಾಗಾಗಿ ಬಂಧನದಲ್ಲಿರುವ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಶ್ರೀಕಾಂತ್ ಪುರೋಹಿತ್, ಪ್ರಗ್ಯಾ ಸಿಂಗ್ ಠಾಕೂರ್, ಸುಧಾಕರ್ ದ್ವಿವೇದಿ ಮುಂತಾದವರನ್ನು ಪುಣೆ ಸ್ಫೋಟ ಸಂಬಂಧ ತನಿಖೆಗೊಳಪಡಿಸುವ ಸಾಧ್ಯತೆಗಳಿವೆ.
ತನಿಖೆಯನ್ನು ಎಟಿಎಸ್‌ನಿಂದ ರಾಷ್ಟ್ರೀಯ ತನಿಖಾ ದಳಕ್ಕೆ (ಎನ್ಐಎ) ವರ್ಗಾಯಿಸುವ ಸಾಧ್ಯತೆಗಳಿವೆ. ಈ ಬಗ್ಗೆ ಕೇಂದ್ರದಿಂದ ಯಾವುದೇ ಸೂಚನೆ ಬಂದಿಲ್ಲವಾದರೂ, ಪ್ರಕರಣವನ್ನು ವರ್ಗಾಯಿಸುವ ಆಸಕ್ತಿ ಅವರಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಫೆಬ್ರವರಿ 13ರ ಶನಿವಾರ ರಾತ್ರಿ ನಡೆದಿದ್ದ ಈ ಸ್ಫೋಟಕ್ಕೆ ಬಲಿಯಾದವರ ಸಂಖ್ಯೆ 15ಕ್ಕೇರಿದೆ. ಕಳೆದ ಐದು ದಿನಗಳಲ್ಲಿ ನಾಲ್ವರು ಮೃತರಾಗುವುದರೊಂದಿಗೆ 11ರಲ್ಲಿದ್ದ ಸಾವಿನ ಸಂಖ್ಯೆಯೀಗ 15ನ್ನು ತಲುಪಿದೆ.