ಬಾರಾಮುಲ್ಲಾ, ಮಂಗಳವಾರ, 23 ಫೆಬ್ರವರಿ 2010( 09:43 IST )
ಸರಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದ ಪ್ರತ್ಯೇಕತಾವಾದಿಗಳ ಗುಂಪೊಂದು, ಕೇವಲ 11 ತಿಂಗಳ ಎಳೆಯ ಕೂಸೊಂದನ್ನು ತಾಯಿಯ ಮಡಿಲಿನಿಂದ ಸೆಳೆದುಕೊಂಡು ಬಿಗಿ ಮುಷ್ಟಿಯಿಂದ ಸಾಯಿಸಿದ ಅಮಾನವೀಯ, ಹೃದಯ ವಿದ್ರಾವಕ ಘಟನೆಯೊಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಸೋಮವಾರ ನಡೆದಿದೆ.
ಸಾಮಾನ್ಯ ಪರೀಕ್ಷೆಗಾಗಿ ಆಸ್ಪತ್ರೆಗೆ ಈ ಇರ್ಫಾನ್ ಎಂಬ ಪುಟಾಣಿ ಕಂದಮ್ಮನನ್ನು ಕರೆದೊಯ್ಯಲಾಗುತ್ತಿತ್ತು. ಪ್ರತಿಭಟನೆ ಜೊತೆಗೆ ಸೇರುವಂತೆ ಪ್ರತಿಭಟನಾಕಾರರು ವಾಹನದೊಳಗಿದ್ದವರ ಮೇಲೆ ಬಲವಂತ ಮಾಡತೊಡಗಿತು. ಈ ಹಸುಳೆಯ ತಂದೆ-ತಾಯಿ ಇದಕ್ಕೆ ನಿರಾಕರಿಸಿದಾಗ, ಪ್ರತಿಭಟನಾಕಾರರು ಮಗುವನ್ನು ತಮ್ಮ ಕಪಿಮುಷ್ಟಿಯಿಂದ ಜೋರಾಗಿ ಸೆಳೆದುಕೊಂಡರು.
ತಂದೆ ತಾಯಿ ಪ್ರತಿರೋಧಿಸಿದರು. ಆದರೆ ಈ ಪ್ರತ್ಯೇಕತಾವಾದಿ ಗೂಂಡಾಗಳು ಬಿಗಿಯಾಗಿ ಮಗುವನ್ನು ಎಳೆದ ಕಾರಣ, ಈ 11 ತಿಂಗಳ ಕೂಸಿನ ತಲೆಗೆ ತೀವ್ರ ಏಟು ತಗುಲಿತು ಮತ್ತು ಮೂಗಿನಲ್ಲಿ ರಕ್ತ ಸುರಿಯಲಾರಂಭಿಸಿತು. ಕೂಡಲೇ ಮಗುವನ್ನು ಆಸ್ಪತ್ರೆಗೆ ಒಯ್ಯಲಾಯಿತಾದರೂ, ಅದು ಲೋಕದ ಅರಿವು ತಿಳಿಯುವ ಮುನ್ನವೇ ಪರಲೋಕ ಸೇರಿತು.
ವಿಶೇಷೆಂದರೆ, ರಾಜ್ಯದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದವರ ಬಿಡುಗಡೆಗೆ ಆಗ್ರಹಿಸಿ ಈ ಗುಂಪು ಪ್ರತಿಭಟನಾ ಕಾರ್ಯಕ್ರಮ ಏರ್ಪಡಿಸಿತ್ತು. ಆದರೆ ಈ ಮಗುವಿನ ಮಾನವ ಹಕ್ಕುಗಳನ್ನು ಅಮಾನವೀಯವಾಗಿ ಕಿತ್ತುಕೊಂಡ ಈ ಪುಂಡರ ಕೃತ್ಯವು, ಕಾಶ್ಮೀರದಲ್ಲಿನ ಪರಿಸ್ಥಿತಿಯ ಕರಾಳತೆಗೆ ಹಿಡಿದ ಕೈಗನ್ನಡಿ.
ಮಾನವ ಹಕ್ಕುಗಳ ಪ್ರತಿಪಾದನೆ ಹೆಸರಲ್ಲಿ ಪ್ರತಿಭಟನೆ ಮಾಡುತ್ತಿದ್ದವರು ಬಾರಾಮುಲ್ಲಾ ಪಟ್ಟಣದಲ್ಲಿ ಭದ್ರತಾ ಪಡೆಗಳ ಮೇಲೂ ಕಲ್ಲು ತೂರಾಟ ನಡೆಸಿವೆ.
ಮಗುವನ್ನು ಕೊಂದಿರುವ ಈ ಪ್ರಕರಣವನ್ನು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಫಾರೂಕ್ ಕಟುವಾಗಿ ಖಂಡಿಸಿದ್ದಾರೆ.