ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪುಣೆ ಸ್ಫೋಟದಲ್ಲಿ ನಾವಿಲ್ಲ, 'ಕಾಂ' ಷಡ್ಯಂತ್ರ: ಅಭಿನವ್ ಭಾರತ್
(Pune blast | Hindu outfit | Himani Savarkar | Abhinav Bharat)
ಪುಣೆ ಸ್ಫೋಟದಲ್ಲಿ ನಾವಿಲ್ಲ, 'ಕಾಂ' ಷಡ್ಯಂತ್ರ: ಅಭಿನವ್ ಭಾರತ್
ಪುಣೆ, ಬುಧವಾರ, 24 ಫೆಬ್ರವರಿ 2010( 10:30 IST )
ಪುಣೆಯ ಜರ್ಮನ್ ಬೇಕರಿ ಪ್ರಕರಣದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಲು ವಿಫಲವಾಗಿರುವ ಕಾಂಗ್ರೆಸ್ ಸರಕಾರವು ಜನರ ಕಣ್ಣಿಗೆ ಮಣ್ಣೆರಚಲು ನಮ್ಮ ಮೇಲೆ ಆರೋಪ ಹೊರಿಸುತ್ತಿದೆ. ನಾವು ಯಾವತ್ತೂ ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರಲ್ಲ ಎಂದು ಹಿಂದೂ ಸಂಘಟನೆ 'ಅಭಿನವ್ ಭಾರತ್' ಸರಕಾರಗಳ ಮೇಲೆ ಕಿಡಿ ಕಾರಿದೆ.
ಪುಣೆ ಸ್ಫೋಟದಲ್ಲಿ 'ಅಭಿನವ್ ಭಾರತ್' ಕೈವಾಡವಿದೆ ಎಂಬ ಆರೋಪಗಳನ್ನು ನಿರಾಕರಿಸುತ್ತಾ, ಇಂತಹ ಆರೋಪಗಳನ್ನು ಮಾಡುವ ಮೂಲಕ ಕಾಂಗ್ರೆಸ್ ಪಕ್ಷವು ಜನರಿಗೆ ಮೋಸ ಮಾಡುತ್ತಿದೆ ಎಂದು ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅವರ ಸಂಬಂಧಿ ಹಾಗೂ ಹಿಂದೂ ಬಲಪಂಥೀಯ ಸಂಘಟನೆ ಅಭಿನವ್ ಭಾರತ್ ಅಧ್ಯಕ್ಷೆ ಹಿಮಾನಿ ಸಾವರ್ಕರ್ ತಿಳಿಸಿದ್ದಾರೆ.
ನಮ್ಮ ಸಂಘಟನೆಯ ಹೆಸರನ್ನು ಸ್ಫೋಟದ ತನಿಖೆಯ ಪಟ್ಟಿಯಲ್ಲಿ ಸೇರಿಸಿರುವುದು ಷಡ್ಯಂತ್ರವಾಗಿದ್ದು, ಆಡಳಿತಾರೂಢ ಕಾಂಗ್ರೆಸ್ ಪಕ್ಷವು ನಮ್ಮ ಸಂಘಟನೆಯ ಹೆಸರು ಕೆಡಿಸಲು ಯತ್ನಿಸುತ್ತಿದೆ. ತನ್ನ ವೈಫಲ್ಯವನ್ನು ಮುಚ್ಚಿಡಲು ಸರಕಾರವು ಹೀಗೆ ನಡೆದುಕೊಳ್ಳುತ್ತಿದೆ. ಕಾಂಗ್ರೆಸ್ ಜನರನ್ನು ತಪ್ಪು ಹಾದಿಗೆಳೆಯುತ್ತಿದೆ. ಅಭಿನವ್ ಭಾರತ್ ಯಾವತ್ತೂ ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿಲ್ಲ. ಇದು ರಾಷ್ಟ್ರೀಯ ಸೇವೆಗೆಂದು ಅಸ್ತಿತ್ವಕ್ಕೆ ಬಂದಿರುವ ಸಂಘಟನೆ. ಅಭಿನವ್ ಭಾರತ್‌ಗೆ ಯಾವುದೇ ಸ್ಫೋಟವನ್ನು ನಡೆಸುವ ಅಗತ್ಯವಿಲ್ಲ ಎಂದು ಸಾವರ್ಕರ್ ಸ್ಪಷ್ಟನೆ ನೀಡಿದ್ದಾರೆ.
ರಾಷ್ಟ್ರೀಯ ಹೋರಾಟದಲ್ಲಿ 'ಅಭಿನವ್ ಭಾರತ್' ಸಂಘಟನೆಯು ಕ್ರಾಂತಿಕಾರಿ ಸಂಘಟನೆಯಾಗಿದ್ದು, ಇದರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುವವರ ಮೇಲೆ ಮಾನನಷ್ಟ ಪ್ರಕರಣ ಹೂಡುವುದಾಗಿ ಸಾವರ್ಕರ್ ಬೆದರಿಕೆ ಹಾಕಿದ್ದಾರೆ.
ಈ ವಿಚಾರದಲ್ಲಿ ನಾನು ನ್ಯಾಯಾಲಯಕ್ಕೆ ಹೋಗಲಿದ್ದೇನೆ. ಅಭಿನವ್ ಭಾರತ್ ಸಂಘಟನೆಯನ್ನು ಕೆಲವು ವ್ಯಕ್ತಿಗಳು ಉದ್ದೇಶಪೂರ್ವಕವಾಗಿ ಹಣಿಯಲು ನೋಡುತ್ತಿದ್ದಾರೆ. ಅವರ ವಿರುದ್ಧ ನಾವು ಮಾನನಷ್ಟ ಮೊಕದ್ದಮೆ ಹೂಡಲಿದ್ದೇವೆ ಎಂದು ಆಕೆ ತಿಳಿಸಿದ್ದಾರೆ.
ಮಹಾತ್ಮಾ ಗಾಂಧೀಜಿಯವರ ಹಂತಕ ನಾಥೂರಾಮ್ ಗೋಡ್ಸೆಯ ಸಹೋದರ ಗೋಪಾಲ ವಿನಾಯಕ ಗೋಡ್ಸೆಯವರ ಪುತ್ರಿಯ ನೇತೃತ್ವದ ಈ ಸಂಘಟನೆಯನ್ನು ಶೈಕ್ಷಣಿಕ ಉದ್ದೇಶದಿಂದ 2006ರಲ್ಲಿ ಸ್ಥಾಪಿಸಲಾಗಿತ್ತು.
2008ರ ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲೂ ಅಭಿನವ್ ಭಾರತ್ ಹೆಸರು ಕೇಳಿ ಬಂದಿತ್ತು.