ಉಗ್ರರು, ನಕ್ಸಲರನ್ನು ಮಟ್ಟಹಾಕಲು ಕೇಂದ್ರ ವಿಫಲ: ಆರೆಸ್ಸೆಸ್
ಕೊಲ್ಲಂ, ಗುರುವಾರ, 25 ಫೆಬ್ರವರಿ 2010( 13:23 IST )
ಪಾಕಿಸ್ತಾನದಿಂದ ಎದುರಾಗುತ್ತಿರುವ ಭಯೋತ್ಪಾದನೆ ಮತ್ತು ನಕ್ಸಲ್ ಬೆದರಿಕೆಗಳನ್ನು ಮಟ್ಟ ಹಾಕಲು ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿರುವ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್, ಈ ಸವಾಲುಗಳ ಕುರಿತ ಸರಕಾರದ ಅನಿಶ್ಚಿತತೆಯು ದೇಶಕ್ಕೆ ಪ್ರಮುಖ ಬೆದರಿಕೆಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೇರಳದ ಕೊಲ್ಲಂನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಆರೆಸ್ಸೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಭಯೋತ್ಪಾದಕರಿಂದ ಅಮಾನವೀಯ ಬೆದರಿಕೆಗಳನ್ನು ಭಾರತ ಎದುರಿಸುತ್ತಿರುವ ಹೊರತಾಗಿಯೂ ಅದನ್ನು ಸ್ಪಷ್ಟವಾಗಿ ನಿರ್ಲಕ್ಷಿಸಿ ಈ ವಿಚಾರಗಳಲ್ಲಿ ಮಾನವೀಯ ಕ್ರಮಗಳನ್ನು ಸರಕಾರ ಕೈಗೊಳ್ಳುತ್ತದೆ ಎಂದು ಸರಕಾರ ಹೇಳುತ್ತಿದೆ ಎಂದು ವ್ಯಂಗ್ಯವಾಡಿದರು.
PTI
ಕಳೆದ ಮೂರು ಪೀಳಿಗೆಗಳ ಅವಧಿಯಲ್ಲಿ ತಮ್ಮ ಸ್ವಂತ ರಾಜ್ಯದಿಂದ ಮೂರು ಲಕ್ಷಕ್ಕೂ ಹೆಚ್ಚು ಕಾಶ್ಮೀರಿ ಪಂಡಿತರನ್ನು ಸ್ಥಳಾಂತರಗೊಳಿಸಲಾಗಿದೆ. ಭಯೋತ್ಪಾದಕರೆಡೆಗೆ ಮೃದು ಧೋರಣೆ ತಳೆಯುವ ಸರಕಾರ ಕಾಶ್ಮೀರಿ ಪಂಡಿತರತ್ತ ಯಾಕೆ ಮಾನವೀಯ ಕ್ರಮಗಳನ್ನು ತೋರಿಸುವುದಿಲ್ಲ ಎಂಬುದು ನಮಗೆ ಅರ್ಥವಾಗುತ್ತಿಲ್ಲ ಎಂದರು.
ನಕ್ಸಲ್ ಸಮಸ್ಯೆಯನ್ನು ನಿಶ್ಚಿತ ಹಾದಿಯಲ್ಲಿ ಬಗೆಹರಿಸಲು ಸರಕಾರ ವಿಫಲವಾಗಿದೆ. ಇದು ದೇಶದ ಹಲವು ಭಾಗಗಳಲ್ಲಿ ಗಂಭೀರ ಬೆದರಿಕೆಯಾಗಿ ಪರಿಣಮಿಸಿದೆ. ಆದರೆ ಕೇಂದ್ರ ಸರಕಾರವು ರಾಜ್ಯ ಸರಕಾರಗಳನ್ನು ಇದಕ್ಕೆ ಹೊಣೆಗಾರನನ್ನಾಗಿ ಮಾಡುತ್ತಿದೆ ಎಂದರು.
ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಲ ಸರಕಾರಗಳು ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಲು ಮುಂದಾಗಿರುವುದನ್ನು ಖಂಡಿಸಿದ ಭಾಗ್ವತ್, ಇದೊಂದು ಅಪಾಯಕಾರಿ ಬೆಳವಣಿಗೆ ಎಂದರು.
ಈ ಸಂದರ್ಭದಲ್ಲಿ ಭಾಗ್ವತ್ ರಾಮಮಂದಿರ ವಿವಾದಕ್ಕೆ ಸಂಬಂಧಪಟ್ಟಂತೆ ಮಾತಿಗಿಳಿದರು. ರಾಮಜನ್ಮಭೂಮಿಯಲ್ಲಿ ರಾಮಮಂದಿರ ನಿರ್ಮಾಣ ಮಾಡಬೇಕೆಂಬ ಗುರಿ, ಧ್ಯೇಯ ಎಲ್ಲಾ ಹಿಂದೂಗಳಲ್ಲಿ ಇಲ್ಲ. ಹಿಂದೂಗಳೊಳಗೆ ಒಗ್ಗಟ್ಟಿನ ಕೊರತೆಯಿದೆ. ಇದೇ ಕಾರಣದಿಂದ ಇನ್ನೂ ಮಂದಿರ ಕಟ್ಟಲು ಸಾಧ್ಯವಾಗಿಲ್ಲ ಎಂದರು.