ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಯೀದ್ ಸೆರೆಗೆ ಆಗ್ರಹ: ಧೈರ್ಯ ಮಾಡಿದ ಭಾರತ (India | Pakistan | Hafiz Saeed | Nirupama Rao)
Bookmark and Share Feedback Print
 
Hafiz Saeed
PTI
ಭಾರತ ಮತ್ತು ಪಾಕಿಸ್ತಾನಗಳ ವಿದೇಶಾಂಗ ಕಾರ್ಯದರ್ಶಿಗಳ ಮಾತುಕತೆ ರಾಷ್ಟ್ರ ರಾಜಧಾನಿಯಲ್ಲಿ ಮುಕ್ತಾಯಗೊಂಡಿದ್ದು, ಮುಂಬೈ ಭಯೋತ್ಪಾದನಾ ದಾಳಿಯ ರೂವಾರಿ ಹಫೀಜ್ ಸಯೀದ್‌ನನ್ನು ಬಂಧಿಸುವಂತೆ ಪಾಕಿಸ್ತಾನಕ್ಕೆ ಕೊನೆಗೂ ಅಧಿಕೃತ ಮಟ್ಟದಲ್ಲಿ ತಾಕೀತು ಮಾಡಿದೆ. ಆ ಮೂಲಕ ಮಾತುಕತೆ ಭಯೋತ್ಪಾದನಾ ವಿಚಾರವನ್ನು ಕೇಂದ್ರೀಕರಿಸಿರುತ್ತದೆ ಎಂಬ ಮಾತನ್ನು ಭಾರತ ಉಳಿಸಿಕೊಂಡಿದೆ.

ಇದಕ್ಕೆ ಸ್ಪಂದಿಸಿರುವ ಪಾಕಿಸ್ತಾನ, ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಎಂದಿನಂತೆ ಭರವಸೆ ನೀಡಿದೆಯಾದರೂ, 'ಸಮಗ್ರ ಮಾತುಕತೆ' ಮುಂದುವರಿಸುವಂತೆ ಭಾರತದ ಮೇಲೆ ಒತ್ತಡ ಹೇರಿದೆ.

ಪಾಕಿಸ್ತಾನದಲ್ಲಿನ ಭಯೋತ್ಪಾದನಾ ನೆಲೆಗಳನ್ನು ಧ್ವಂಸಗೊಳಿಸುವುದು ಮತ್ತು ಅವರಿಗೆ ಯಾವುದೇ ರೀತಿಯಲ್ಲಿ ಸಹಕಾರ ಸಿಗದಂತೆ ನೋಡಿಕೊಳ್ಳುವುದು ಸೇರಿದಂತೆ ಭಾರತಕ್ಕೆ ಈ ಹಿಂದೆ ನೀಡಿದ್ದ ಭರವಸೆಗಳನ್ನು ಈಡೇರಿಸುವಂತೆ ಈ ಸಂದರ್ಭದಲ್ಲಿ ಭಾರತ ಒತ್ತಡ ಹೇರಿದೆ. ಇದೇ ಸಂದರ್ಭದಲ್ಲಿ ಪಾಕಿಸ್ತಾನವು ಬಲೂಚಿಸ್ತಾನದ ಪ್ರಸ್ತಾಪವನ್ನೂ ಮಾಡಿದೆ ಎಂದು ಮೂಲಗಳು ಹೇಳಿವೆ.

ಈ ಮಧ್ಯೆ, ಶರಮ್-ಎಲ್-ಶೇಖ್‌ನಲ್ಲಿ ಮಾತುಕತೆ ಸಂದರ್ಭದಲ್ಲಿ ನಡೆದ ಅಚಾತುರ್ಯದ ಅರಿವಿದ್ದಕ್ಕೋ ಏನೋ, ಉಭಯ ರಾಷ್ಟ್ರಗಳೂ ವಿದೇಶಾಂಗ ಕಾರ್ಯದರ್ಶಿ ಮಟ್ಟದ ಮಾತುಕತೆಯ ಬಳಿಕ ಜಂಟಿ ಹೇಳಿಕೆ ನೀಡದಿರಲು ಒಪ್ಪಿಕೊಂಡಿವೆ.

ಕಳೆದ ಹದಿನಾಲ್ಕು ತಿಂಗಳುಗಳಿಂದ ನನೆಗುದಿಗೆ ಬಿದ್ದಿದ್ದ ಉಭಯ ರಾಷ್ಟ್ರಗಳ ನಡುವಿನ ಸಂಬಂಧಕ್ಕೆ ಇಂದು ಬೆಳಿಗ್ಗೆ 'ಹೈದರಾಬಾದ್ ಹೌಸ್'ನಲ್ಲಿ ಭಾರತದ ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್ ಅವರು ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿ ಸಲ್ಮಾನ್ ಬಶೀರ್ ಅವರನ್ನು ಸ್ವಾಗತಿಸುವ ಮೂಲಕ ಮರು ಜೀವ ನೀಡಿದರು. ಉಭಯ ರಾಷ್ಟ್ರಗಳ ಸಚಿವಾಲಯಗಳ ಅಗ್ರ ಅಧಿಕಾರಿಯಗಳ ನಿಯೋಗವು ಸಭೆಯಲ್ಲಿ ಪಾಲ್ಗೊಂಡಿತ್ತು.

2008ರ ನವೆಂಬರ್ 26ರಂದು ಭಾರತದ ವಾಣಿಜ್ಯ ರಾಜಧಾನಿ ಮುಂಬೈ ಮೇಲೆ ದಾಳಿ ನಡೆಸಿ 260ಕ್ಕೂ ಹೆಚ್ಚು ಅಮಾಯಕರ ಸಾವಿಗೆ ಕಾರಣವಾದ ಘಟನೆಯ ಹಿಂದೆ ಲಷ್ಕರ್ ಇ ತೋಯ್ಬಾ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಪಾತ್ರವಿದೆ ಎಂದು ಭಾರತ ಹೇಳುತ್ತಲೇ ಬಂದಿದ್ದರೂ, ಪಾಕಿಸ್ತಾನ ಆತನನ್ನು ಸ್ವಚ್ಛಂದವಾಗಿ ತಿರುಗಲು ಅವಕಾಶ ನೀಡಿದೆ.

ಇದನ್ನು ಮಾತುಕತೆ ಸಂದರ್ಭದಲ್ಲಿ ಪ್ರಸ್ತಾಪಿಸಲಾಗಿದೆ ಎಂದು ಹೇಳಲಾಗಿದ್ದು, ಆತನನ್ನು ಬಂಧಿಸಿ ನ್ಯಾಯಾಂಗದ ಕಟಕಟೆಗೆ ತರುವಂತೆ ಭಾರತ ಹೇಳಿದೆ ಎಂದು ಮೂಲಗಳು ಹೇಳಿವೆ.

ಸಯೀದ್ ಕಳೆದ ಕೆಲವು ಸಮಯಗಳಿಂದ ಪಾಕಿಸ್ತಾನದ ಭಯೋತ್ಪಾದಕರನ್ನು ಒಟ್ಟು ಹಾಕಿಕೊಂಡು ಭಾರತದ ವಿರುದ್ಧ ಜಿಹಾದ್ ನಡೆಸುವಂತೆ ಪ್ರೋತ್ಸಾಹಿಸುತ್ತಿದ್ದಾನೆ.

ಮಾತುಕತೆಯ ಪ್ರಮುಖ ಅಂಶಗಳು:
* ಭಯೋತ್ಪಾದಕ ನೆಲೆಗಳನ್ನು ಧ್ವಂಸಗೊಳಿಸಬೇಕು ಮತ್ತು ಉಗ್ರರಿಗೆ ಯಾವುದೇ ಮೂಲಭೂತ ಸೌಲಭ್ಯಗಳು ಸಿಗದಂತೆ ನೋಡಿಕೊಳ್ಳಬೇಕು. ಪಾಕಿಸ್ತಾನದ ನೆಲದಿಂದ ಭಾರತದ ವಿರುದ್ಧ ಯಾವುದೇ ಸಂಚು ಅಥವಾ ದಾಳಿ ನಡೆಯಬಾರದು ಎಂದು ಭಾರತವು ಪಾಕಿಸ್ತಾನಕ್ಕೆ ಹೇಳಿದೆ.
* ಮುಂಬೈ ದಾಳಿಯ ರೂವಾರಿ ಹಫೀಜ್ ಸಯೀದ್‌ನನ್ನು ಬಂಧಿಸಬೇಕು ಎಂದೂ ಭಾರತ ಒತ್ತಾಯಿಸಿದೆ.
* ಗಡಿ ಪ್ರದೇಶದಾದ್ಯಂತ ನುಸುಳುವಿಕೆ ಹೆಚ್ಚಾಗುತ್ತಿದ್ದು, ಇದನ್ನು ತಡೆಯಬೇಕು.
* ಮಾತುಕತೆ ಸಂದರ್ಭದಲ್ಲಿ ಮುಂಬೈ ದಾಳಿ ಸಂಬಂಧ ಮತ್ತಷ್ಟು ಸಾಕ್ಷ್ಯಗಳನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸಲಾಯಿತು.
* ಪಾಕಿಸ್ತಾನವು ಬಲೂಚಿಸ್ತಾನ ಮತ್ತು ನೀರಿನ ವಿವಾದದ ಕುರಿತು ಪ್ರಸ್ತಾಪಿಸಿತು.
ಸಂಬಂಧಿತ ಮಾಹಿತಿ ಹುಡುಕಿ