ಮುಂಬೈ ಭಯೋತ್ಪಾದನಾ ದಾಳಿಗೆ ಇಬ್ಬರು ಪಾಕಿಸ್ತಾನಿ ಸೇನಾಧಿಕಾರಿಗಳೂ ಸಹಕಾರ ನೀಡಿದ್ದಾರೆ ಎಂದು ಆರೋಪಿಸಿರುವ ಭಾರತ, 33 ಭಯೋತ್ಪಾದಕರನ್ನು ಹಸ್ತಾಂತರಿಸುವಂತೆ ಪಾಕಿಸ್ತಾನದಲ್ಲಿ ಕೇಳಿಕೊಂಡಿದೆ.
ನಿನ್ನೆ ನವದೆಹಲಿಯಲ್ಲಿ ನಡೆದ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮಾತುಕತೆ ಸಂದರ್ಭದಲ್ಲಿ ಈ ಸಂಬಂಧ ಪುರಾವೆಗಳನ್ನು ಹಸ್ತಾಂತರಿಸಿರುವ ಭಾರತ, ಲಷ್ಕರ್ ಇ ತೋಯ್ಬಾ ನಾಯಕ ಹಫೀಜ್ ಸಯೀದ್‌ನನ್ನು ಬಂಧಿಸಿ ಭಾರತಕ್ಕೆ ಹಸ್ತಾಂತರಿಸಬೇಕು ಎಂದು ಮನವಿ ಮಾಡಿದೆ.
ಪಾಕಿಸ್ತಾನದ ಇಬ್ಬರು ಸೇನಾಧಿಕಾರಿಗಳಾದ ಮೇಜರ್ ಇಕ್ಬಾಲ್ ಮತ್ತು ಮೇಜರ್ ಸಮೀರ್ ಆಲಿ, ಇತರೆ ಪಾಕಿಸ್ತಾನಿ ಪ್ರಜೆಗಳು ಹಾಗೂ ತಲೆ ಮರೆಸಿಕೊಂಡಿರುವ ಭಾರತೀಯರು ಸೇರಿದಂತೆ 33 ಭಯೋತ್ಪಾದಕರನ್ನು ಭಾರತಕ್ಕೆ ಹಸ್ತಾಂತರಿಸಬೇಕು. ಇವರೆಲ್ಲರೂ 2008ರ ಮುಂಬೈ ಹತ್ಯಾಕಾಂಡದಲ್ಲಿ ಪಿತೂರಿ ನಡೆಸಿದ್ದಾರೆ ಎಂಬುದಕ್ಕೆ ಪೂರಕವಾಗಿ ಮೂರು ಮಹತ್ವದ ಪುರಾವೆಗಳನ್ನು ಭಾರತದ ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್ ಅವರು ಪಾಕಿಸ್ತಾನಕ್ಕೆ ಹಸ್ತಾಂತರಿಸಿದರು.
ಆದರೆ ಮಾತುಕತೆ ಮುಕ್ತಾಯಗೊಂಡ ಕೆಲವೇ ಗಂಟೆಗಳೊಳಗೆ ಪ್ರತಿಕ್ರಿಯೆ ನೀಡಿದ ಪಾಕಿಸ್ತಾನ ವಿದೇಶಾಂಗ ಕಾರ್ಯದರ್ಶಿ ಸಲ್ಮಾನ್ ಬಶೀರ್, ಭಾರತ ನೀಡಿರುವ ಸಾಕ್ಷ್ಯಗಳು ಪಠ್ಯ ಪುಸ್ತಕದ ಭಾಗದಂತಿವೆ ಎಂದು ಲೇವಡಿ ಮಾಡಿದ್ದರು.
ಅಲ್ಲದೆ ಭಾರತವು ನಮಗೆ ಹೀಗೆ ಮಾಡಿ, ಹಾಗೆ ಮಾಡಿ ಎಂದು ನಿರ್ದೇಶಿಸುವುದು ಅಥವಾ ಪಾಠ ಮಾಡುವುದು ಬೇಡ. ನಮಗೇನು ಮಾಡಬೇಕೆಂದು ಗೊತ್ತು ಎಂದು ಶಾಂತಿಯ ಕೈ ಚಾಚಿದ್ದ ಭಾರತಕ್ಕೆ ಭಾರತ ನೆಲದಲ್ಲೇ ತಿರುಗೇಟು ನೀಡಿದ್ದರು.
ಮಾತುಕತೆ ಸಂದರ್ಭದಲ್ಲಿ ಭಾರತವು ಹೆಸರಿಸಿರುವ ಮೊತ್ತ ಮೊದಲ ಪಾಕಿಸ್ತಾನದ ಪ್ರಸಕ್ತ ಸೇವೆ ಸಲ್ಲಿಸಿರುವ ಅಧಿಕಾರಿ ಮೇಜರ್ ಇಕ್ಬಾಲ್ ಆಗಿದ್ದು, ಮೇಜರ್ ಸಮೀರ್ ಆಲಿ ಈಗಲೂ ಪಾಕಿಸ್ತಾನ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೋ ಅಥವಾ ನಿವೃತ್ತರಾಗಿದ್ದಾರೋ ಎಂಬ ಬಗ್ಗೆ ಯಾವುದೇ ಖಚಿತ ಮಾಹಿತಿಗಳಿಲ್ಲ.
ಲಷ್ಕರ್ ಇ ತೋಯ್ಬಾ ಅಂಗಸಂಸ್ಥೆ ಜಮಾತ್ ಉದ್ ದಾವಾ ಮುಖ್ಯಸ್ಥ ಹಫೀಜ್ ಸಯೀದ್ ಮತ್ತು ಅಲ್‌ಖೈದಾ ಕಮಾಂಡರ್ ಇಲ್ಯಾಸ್ ಕಾಶ್ಮೀರಿಯವರನ್ನು ಭಾರತಕ್ಕೆ ಹಸ್ತಾಂತರಿಸಬೇಕೆಂಬ ಬೇಡಿಕೆಯನ್ನೂ ಮಾತುಕತೆ ಸಂದರ್ಭದಲ್ಲಿ ಭಾರತ ಪುನರುಚ್ಛರಿಸಿದೆ.
ನವದೆಹಲಿ ಹೆಸರಿಸಿರುವ 33 ಮಂದಿ ಆರೋಪಿಗಳಲ್ಲಿ ಐವರನ್ನು ಈಗಾಗಲೇ ಪಾಕಿಸ್ತಾನ ಬಂಧಿಸಿದ್ದು, ವಿಚಾರಣೆಗೊಳಪಡಿಸಿದೆ. ಪಾಕಿಸ್ತಾನ ಸಂಜಾತ ಅಮೆರಿಕಾ ಪ್ರಜೆ ಹಾಗೂ ಅಲ್‌ಖೈದಾ ಉಗ್ರನೆಂದು ಹೇಳಲಾಗಿರುವ ಪ್ರಸಕ್ತ ಅಮೆರಿಕಾ ವಶದಲ್ಲಿರುವ ಡೇವಿಡ್ ಕೋಲ್ಮನ್ ಹೆಡ್ಲಿಯ ಭಯೋತ್ಪಾದಕ ಗುರು ಇಲ್ಯಾಸ್ ಕಾಶ್ಮೀರಿ ಎಂದು ಹೇಳಲಾಗಿದೆ.