ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಐತಿಹಾಸಿಕ ಮಹಿಳಾ ಮೀಸಲಾತಿ ಮಸೂದೆಗೆ ರಾಜ್ಯಸಭೆ ಅಸ್ತು (Rajya Sabha | Loka Sabha | Women’s Quota Bill | Sonia Gandhi)
ಕಳೆದ 14 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮಹಿಳಾ ಮೀಸಲಾತಿ ಮಸೂದೆಯು ತೀವ್ರ ಗದ್ದಲದ ನಡುವೆಯೂ ರಾಜ್ಯಸಭೆಯಲ್ಲಿ ಬಹುಮತದೊಂದಿಗೆ ಅಂಗೀಕಾರ ಪಡೆದುಕೊಂಡಿದ್ದು, ಯುಪಿಎ ಸರಕಾರವು ಐತಿಹಾಸಿಕ ಮೈಲುಗಲ್ಲನ್ನು ಸ್ಥಾಪಿಸಿದೆ.
ಮಸೂದೆಯು 186-1 ಮತಗಳ ಅಂತರದಲ್ಲಿ ರಾಜ್ಯಸಭೆಯಲ್ಲಿ ಅಂಗೀಕಾರ ಪಡೆದುಕೊಂಡಿದೆ. ರಾಜ್ಯಸಭೆಯ ಒಟ್ಟು 233 ಸದಸ್ಯರ ಪೈಕಿ 187 ಸದಸ್ಯರು ಮಾತ್ರ ಮತದಾನದಲ್ಲಿ ಪಾಲ್ಗೊಂಡಿದ್ದರು.
ಸಮಾಜವಾದಿ ಪಕ್ಷ, ರಾಷ್ಟ್ರೀಯ ಜನತಾದಳ, ಸಂಯುಕ್ತ ಜನತಾದಳ, ತೃಣಮೂಲ ಕಾಂಗ್ರೆಸ್ ಸೇರಿದಂತೆ 46 ಸದಸ್ಯರು ಮತದಾನದಿಂದ ಹೊರಗುಳಿದಿದ್ದಾರೆ. ಕೆಲವರನ್ನು ಕಲಾಪಕ್ಕೆ ಅಡ್ಡಿಪಡಿಸಿದ ಕಾರಣವನ್ನು ಮುಂದೊಡ್ಡಿ ಸದನದಿಂದ ಮಾರ್ಷಲ್‌ಗಳು ಹೊರ ಹಾಕಿದ್ದರೆ, ಇನ್ನಿತರರು ಗೈರು ಹಾಜರಾಗಿದ್ದರು.
ಮಸೂದೆಯು ರಾಜ್ಯಸಭೆಯಲ್ಲಿ ಸುಲಭವಾಗಿ ಅಂಗೀಕಾರ ಪಡೆದುಕೊಂಡಿರುವುದರಿಂದ ಮುಂದಿನ ಹಂತದಲ್ಲಿ ಲೋಕಸಭೆಯಲ್ಲಿ ಮಸೂದೆ ಮಂಡನೆಯಾಗಲಿದೆ. ಬಳಿಕ ದೇಶದ ಎಲ್ಲಾ ರಾಜ್ಯಗಳ ವಿಧಾನಸಭೆಗಳಲ್ಲಿ ಮಸೂದೆ ಮಂಡನೆಯಾಗಿ, ಇಲ್ಲಿ ಶೇ.50ಕ್ಕಿಂತ ಹೆಚ್ಚು ಬಹುಮತ ಬಂದಲ್ಲಿ ಮಸೂದೆಯು ಶಾಸನ ರೂಪಕ್ಕೆ ಬರಲಿದೆ ಎಂದು ಕಾನೂನು ತಜ್ಞರು ತಿಳಿಸಿದ್ದಾರೆ.
ಇದಕ್ಕೂ ಮೊದಲು ಕೆಲವು ಪಕ್ಷಗಳ ಸದಸ್ಯರು ಸದನದಲ್ಲಿ ತೀವ್ರ ಕೋಲಾಹಲ ಸೃಷ್ಟಿಸಿದ ಹಿನ್ನೆಲೆಯಲ್ಲಿ ಮಸೂದೆಯ ಮೇಲಿನ ಚರ್ಚೆಯನ್ನು ಸ್ಪೀಕರ್ ಆರಂಭದಲ್ಲಿ ರದ್ದುಪಡಿಸಿ ಧ್ವನಿಮತದ ಮೂಲಕ ಮಸೂದೆಯನ್ನು ಮತಕ್ಕೆ ಹಾಕಲು ನಿರ್ಧರಿಸಿದರು. ಆದರೆ ಪ್ರಮುಖ ಪ್ರತಿಪಕ್ಷ ಬಿಜೆಪಿ ಚರ್ಚೆ ಬೇಕೆಂದು ಆಗ್ರಹಿಸಿದ್ದರಿಂದ ಮಸೂದೆ ಮೇಲಿನ ಚರ್ಚೆಗೆ ಅವಕಾಶ ನೀಡಲಾಯಿತು.
ಮಸೂದೆ ಮೇಲೆ ಮತಕ್ಕಾಗಿ ಧ್ವನಿಮತ ಅಂಗೀಕಾರ ಪಡೆದುಕೊಂಡ ಬಳಿಕ ಚರ್ಚೆ ಆರಂಭವಾಯಿತು. ಈ ಸಂದರ್ಭದಲ್ಲಿ ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಅರುಣ್ ಜೇಟ್ಲಿ, ಇತರ ನಾಯಕರಾದ ಡಿ. ಬರ್ದನ್, ಪ್ರಕಾಶ್ ಕಾರಟ್, ಬೃಂದಾ ಕಾರಟ್, ಪ್ರಧಾನಿ ಮನಮೋಹನ್ ಸಿಂಗ್, ಕಾನೂನು ಸಚಿವ ವೀರಪ್ಪ ಮೋಯ್ಲಿ ಸೇರಿದಂತೆ ಹಲವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಗದ್ದಲ ವಿಷಾದಕರ: ಅರುಣ್ ಜೇಟ್ಲಿ ಐತಿಹಾಸಿಕ ವಿಧೇಯಕಕ್ಕೆ ಅಂಗೀಕಾರ ನೀಡುವ ನಿಟ್ಟಿನಲ್ಲಿ ಸದನ ಅತ್ಯಂತ ಕೆಟ್ಟ ನಿದರ್ಶನಗಳನ್ನು ಕಂಡದ್ದು ದುರದೃಷ್ಟಕರ ಎಂದು ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಅರುಣ್ ಜೇಟ್ಲಿ ಮಸೂದೆ ಮೇಲಿನ ಚರ್ಚೆಯಲ್ಲಿ ಮಾತನಾಡುತ್ತಾ ಅಭಿಪ್ರಾಯಪಟ್ಟರು.
ಇಂತಹ ಪ್ರಗತಿಪರ ಮಸೂದೆಗೆ ಇಷ್ಟು ವಿರೋಧ ಎದುರಾಗಬಾರದಿತ್ತು. ಮಹಿಳಾ ಕಲ್ಯಾಣದ ದೃಷ್ಟಿಯಿಂದ ಈ ಮಸೂದೆ ಅತ್ಯಗತ್ಯವಾಗಿದ್ದು, ಬಿಜೆಪಿ ಸಂಪೂರ್ಣ ಬೆಂಬಲ ಸೂಚಿಸುತ್ತದೆ ಎಂದು ಅವರು ಹೇಳಿದರು.
ಅಲ್ಲದೆ ಇಂತಹ ಒಂದು ಕಾಯ್ದೆ ಅಂಗೀಕಾರ ಪಡೆದುಕೊಳ್ಳಲು ದೇಶಕ್ಕೆ ಸ್ವಾತಂತ್ರ್ಯ ಬಂದು 63 ವರ್ಷಗಳ ಅವಧಿ ಬೇಕಾಯಿತು ಎಂದು ದೇಶದಲ್ಲಿನ ಮಹಿಳೆಯರ ರಾಜಕೀಯ ಸ್ಥಿತಿಯನ್ನು ವಿಶ್ಲೇಷಣೆ ನಡೆಸಿದ ಜೇಟ್ಲಿ, ಮುಂದಿನ ದಿನಗಳಲ್ಲಿ ಹೆಚ್ಚು ಮಹಿಳೆಯರನ್ನು ರಾಜಕೀಯ ಕ್ಷೇತ್ರದಲ್ಲಿ ಕಾಣಲಿದ್ದೇವೆ ಎಂದರು.
ಇದುವರೆಗಿನ ಇತಿಹಾಸದಲ್ಲಿ ಸಂಸತ್ತಿಗೆ ಮಹಿಳೆಯರು ಆಯ್ಕೆಯಾಗಿರುವುದು ಶೇ.7ರಿಂದ 11ರಷ್ಟು ಮಹಿಳೆಯರು ಮಾತ್ರ. ಸಂಸತ್ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರ ಮೀಸಲಾತಿ ನೀಡುವುದರಿಂದ ಅಸಮಾನತೆಯನ್ನು ತಗ್ಗಿಸಬಹುದಾಗಿದೆ ಎಂದಿರುವ ಜೇಟ್ಲಿ, ಅಧಿವೇಶನದಿಂದ ಅಮಾನತುಗೊಂಡ ಸಂಸದರಿಗೂ ಪ್ರಜಾಪ್ರಭುತ್ವ ನೀತಿಗಳಡಿಯಲ್ಲಿ ಮಸೂದೆ ಮೇಲಿನ ಮತದಾನಕ್ಕೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ಸಂಸದರನ್ನು ಹೊರದಬ್ಬಿದ ಮಾರ್ಷಲ್‌ಗಳು... ನಿನ್ನೆ ಸದನದಲ್ಲಿ ಸ್ಪೀಕರ್ ಅವರಿಗೆ ಅಗೌರವ ತೋರಿದ ಹಿನ್ನೆಲೆಯಲ್ಲಿ ಇಂದು ಅಮಾನತಿಗೊಳಗಾಗಿದ್ದ ಸಂಸದರು ರಾಜ್ಯಸಭೆಯಿಂದ ಹೊರಗೆ ಹೋಗಲು ನಿರಾಕರಿಸಿದ ಹಿನ್ನೆಲೆಯಲ್ಲಿ ಮಾರ್ಷಲ್‌ಗಳು ಅವರನ್ನು ಕಲಾಪ ಸ್ಥಳದಿಂದ ಹೊರಗೆ ಎತ್ತಿಕೊಂಡು ಹೋದರು.
ಸಮಾಜವಾದಿ ಪಕ್ಷದ ವೀರಪಾಲ್ ಸಿಂಗ್ ಯಾದವ್, ನಂದ ಕಿಶೋರ್ ಯಾದವ್, ಅಮೀರ್ ಅಲಂ ಖಾನ್ ಮತ್ತು ಕಮಲಾ ಅಖ್ತರ್, ರಾಷ್ಟ್ರೀಯ ಜನತಾದಳದ ಸುಭಾಷ್ ಯಾದವ್, ಲೋಕ ಜನಶಕ್ತಿ ಪಕ್ಷದ ಶಬೀರ್ ಆಲಿ ಹಾಗೂ ಪಕ್ಷೇತರ ಸದಸ್ಯ ಇಜಾಜ್ ಆಲಿಯವರನ್ನು ಇಂದು ಸ್ಪೀಕರ್ ಅಮಾನತುಗೊಳಿಸಿದ್ದರು.
ಸದನದಿಂದ ಹೊರಗೆ ಹೋಗಲು ನಿರಾಕರಿಸಿದ ಹಿನ್ನೆಲೆಯಲ್ಲಿ ಅವರನ್ನು ಹೊರ ಹಾಕುವಂತೆ ಮಾರ್ಷಲ್‌ಗಳಿಗೆ ಸ್ಪೀಕರ್ ಆದೇಶ ನೀಡಿದ್ದಾರೆ. ಇದಕ್ಕೂ ಮೊದಲು ಅವರು ಘೋಷಣೆಗಳನ್ನು ಕೂಗುತ್ತಾ ಕಲಾಪಕ್ಕೆ ಅಡ್ಡಿಪಡಿಸಿದ್ದರು.