ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತೆಲಂಗಾಣಕ್ಕಾಗಿ ಉಸ್ಮಾನಿಯಾದ ಮತ್ತೊಬ್ಬ ವಿದ್ಯಾರ್ಥಿ ಆತ್ಮಹತ್ಯೆ (Telangana | Osmania University | Sai Kumar | Andhra Pradesh)
ತೆಲಂಗಾಣಕ್ಕಾಗಿ ಉಸ್ಮಾನಿಯಾದ ಮತ್ತೊಬ್ಬ ವಿದ್ಯಾರ್ಥಿ ಆತ್ಮಹತ್ಯೆ
ಹೈದರಾಬಾದ್, ಮಂಗಳವಾರ, 9 ಮಾರ್ಚ್ 2010( 19:18 IST )
ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ವಿಳಂಬವಾಗುತ್ತಿರುವುದನ್ನು ಪ್ರತಿಭಟಿಸಿ ಉಸ್ಮಾನಿಯಾ ವಿಶ್ವವಿದ್ಯಾಲಯದ ಮತ್ತೊಬ್ಬ ವಿದ್ಯಾರ್ಥಿ ಮಂಗಳವಾರ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಯುನಿವರ್ಸಿಟಿ ಕ್ಯಾಂಪಸ್ಸಿನೊಳಗಿನ ತನ್ನ ಹಾಸ್ಟೆಲ್ ಕೊಠಡಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿಯನ್ನು ಎರಡನೇ ವರ್ಷದ ಬಿ.ಟೆಕ್. ವ್ಯಾಸಂಗ ಮಾಡುತ್ತಿರುವ ಸಾಯಿ ಕುಮಾರ್ ಎಂದು ಗುರುತಿಸಲಾಗಿದೆ.
ರಾಜ್ಯ ರಚನೆಯಲ್ಲಿ ವಿಳಂಬವಾಗುತ್ತಿರುವುದೇ ತನ್ನ ಆತ್ಮಹತ್ಯೆಗೆ ಕಾರಣ ಎಂದು ವಿದ್ಯಾರ್ಥಿ ತನ್ನ ಮರಣಪೂರ್ವ ಪತ್ರದಲ್ಲಿ ತಿಳಿಸಿದ್ದಾನೆ.
ಸಾಯಿ ಕುಮಾರ್ ಕೊಠಡಿಯಲ್ಲಿನ ಸೀಲಿಂಗ್ ಫ್ಯಾನ್‌ಗೆ ನೇಣು ಹಾಕಿಕೊಂಡಿರುವುದನ್ನು ಕಂಡ ಆತನ ಸಹಪಾಠಿಗಳು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದರೂ, ವೈದ್ಯರು ಆತನು ಮರಣ ಹೊಂದಿರುವುದನ್ನು ಘೋಷಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
ನಲ್ಗೊಂಡಾ ಜಿಲ್ಲೆಯವನಾದ ಸಾಯಿ ಕುಮಾರ್ ಸಾವಿನ ಹಿನ್ನೆಲೆಯಲ್ಲಿ ಉಸ್ಮಾನಿಯಾ ವಿಶ್ವ ವಿದ್ಯಾಲಯದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿತು. ಭಾರೀ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು 'ಜೈ ತೆಲಂಗಾಣ' ಎಂದು ಘೋಷಣೆ ಕೂಗುತ್ತಾ ಶವ ಮೆರವಣಿಗೆಗೂ ಯತ್ನಿಸಿದರು.
ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿರುವುದನ್ನು ಕಂಡ ಯುನಿವರ್ಸಿಟಿ, ಮಂಗಳವಾರ ಮತ್ತು ಬುಧವಾರ ನಡೆಯಬೇಕಿದ್ದ ಪರೀಕ್ಷೆಗಳನ್ನು ಮುಂದಕ್ಕೆ ಹಾಕಿದೆ.
ಪ್ರತ್ಯೇಕ ತೆಲಂಗಾಣ ರಾಜ್ಯಕ್ಕೆ ಒತ್ತಾಯಿಸಿ ಆತ್ಮಹತ್ಯೆ ನಡೆದ ಇತ್ತೀಚಿನ ಪ್ರಕರಣ ಇದಾಗಿದೆ. ಹೈದರಾಬಾದ್ ಸೇರಿದಂತೆ 10 ಜಿಲ್ಲೆಗಳಲ್ಲಿ ಕಳೆದ ಹಲವು ತಿಂಗಳುಗಳಿಂದ ತೆಲಂಗಾಣ ರಾಜ್ಯ ರಚನೆಗಾಗಿ ಭಾರೀ ಪ್ರಮಾಣದ ಹಿಂಸಾಚಾರಗಳು ನಡೆದಿದ್ದು, ಹಲವರು ಈಗಾಗಲೇ ಸಾವನ್ನಪ್ಪಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ದ್ವಿತೀಯ ಪಿಯುಸಿ ವಿದ್ಯಾರ್ಥಿಯೊಬ್ಬ ಮೈಮೇಲೆ ಬೆಂಕಿ ಹಚ್ಚಿಕೊಂಡು ಆತ್ಮಾಹುತಿ ಮಾಡಿಕೊಂಡಿದ್ದರೆ, ಜನವರಿ 19ರಂದು ಎಂಸಿಎ ವಿದ್ಯಾರ್ಥಿಯೊಬ್ಬ ಕೂಡ ಇದೇ ರೀತಿ ಆತ್ಮಹತ್ಯೆಗೆ ಶರಣಾಗಿದ್ದ. ಅಂದಾಜಿನ ಪ್ರಕಾರ ಸುಮಾರು 300ರಷ್ಟು ವಿದ್ಯಾರ್ಥಿಗಳು ಮತ್ತು ಪ್ರತಿಭಟನಾಕಾರರು ಇದುವರೆಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ.