ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ವಿಭಜನೆಯತ್ತ ಜೆಡಿಯು; ಹೊಸ ಪಕ್ಷದತ್ತ ನಿತೀಶ್ ಒಲವು? (JD(U) | Bihar | Nitish Kumar | Sharad Yadav)
Bookmark and Share Feedback Print
 
ಯುಪಿಎ ಸರಕಾರದ ಮಹತ್ವಾಕಾಂಕ್ಷೆಯ ಮಹಿಳಾ ಮೀಸಲಾತಿ ಮಸೂದೆಯು ಜನತಾ ಪರಿವಾರವನ್ನು ಮತ್ತೊಮ್ಮೆ ಹೋಳಾಗುವಂತೆ ಮಾಡಲಿದೆಯೇ? ಇತ್ತೀಚಿನ ಬೆಳವಣಿಗೆಗಳನ್ನು ಕಂಡಾಗ ಇದು ಗೋಚರಿಸುತ್ತಿದೆ. ಶರದ್ ಯಾದವ್ ನೇತೃತ್ವದ ಸಂಯುಕ್ತ ಜನತಾದಳದಿಂದ ಸಿಡಿದು ಹೊಸ ಪಕ್ಷದೊಂದಿಗೆ ಮುಂದಿನ ವಿಧಾನಸಭಾ ಚುನಾವಣೆಯನ್ನು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಎದುರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ನಿನ್ನೆ ರಾಜ್ಯಸಭೆಯಲ್ಲಿ ಅಂಗೀಕಾರ ಪಡೆದುಕೊಂಡ ಮಹಿಳಾ ಮಸೂದೆಯನ್ನು ಜೆಡಿಯು ಮುಖಂಡ ಶರದ್ ಯಾದವ್ ತೀವ್ರವಾಗಿ ವಿರೋಧಿಸಿದ್ದರು. ಆದರೆ ಅತ್ತ ನಿತೀಶ್ ಮಸೂದೆಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದರು. ಸಂಜೆ ನಡೆದ ಮಸೂದೆಯ ಮೇಲಿನ ಮತದಾದದಲ್ಲೂ ಮಸೂದೆಯ ಪರ ಐವರು ಜೆಡಿಯು ಸಂಸದರು ನಿಂತಿದ್ದಾರೆ.

ಅಲ್ಲಿಗೆ ಪಕ್ಷದೊಳಗೆ ಎಲ್ಲವೂ ಸರಿಯಾಗಿಲ್ಲ ಎನ್ನುವುದು ಬಟಾಬಯಲಾಗಿದೆ. ಜೆಡಿಯು ತನ್ನ ಸದಸ್ಯರಿಗೆ ವಿಪ್ ಜಾರಿಗೊಳಿಸದೇ ಇದ್ದರೂ ಕಳೆದ ಹಲವು ದಿನಗಳಿಂದ ಮಸೂದೆ ವಿರುದ್ಧ ಸಮಾಜವಾದಿ ಪಕ್ಷ, ರಾಷ್ಟ್ರೀಯ ಜನತಾದಳ ಮತ್ತು ಬಹುಜನ ಸಮಾಜವಾದಿ ಪಕ್ಷಗಳ ಜತೆ ಹೋರಾಟ ನಡೆಸುತ್ತಿತ್ತು.

ಶಿವಾನಂದ ತಿವಾರಿ, ಎನ್.ಕೆ. ಸಿಂಗ್, ಆಲಿ ಅನ್ವರ್, ಮಹೇಂದ್ರ ಪ್ರಸಾದ್ ಮತ್ತು ಭಗವಾನ್ ಶಾಹ್ನಿ ಎಂಬ ಐವರು ರಾಜ್ಯಸಭಾ ಸದಸ್ಯರು ಶರದ್ ಅವರ ಆದೇಶವನ್ನು ಉಲ್ಲಂಘಿಸಿ, ನಿತೀಶ್ ಪರ ಒಲವನ್ನು ತೋರಿಸಿ ಮಸೂದೆಯನ್ನು ಬೆಂಬಲಿಸಿದ್ದಾರೆ.

ಕೆಲವೇ ಕೆಲವು ಸದಸ್ಯರು ಮಾತ್ರ (ಕೇವಲ ಮೂವರು) ಶರದ್ ಯಾದವ್ ಜತೆ ಮಸೂದೆಯನ್ನು ವಿರೋಧಿಸಿದ್ದಾರೆ. ಇದು ಲೋಕಸಭೆಯಲ್ಲೂ ಮುಂದುವರಿಯಲಿದೆ ಎಂದು ನಿರೀಕ್ಷಿಸಲಾಗುತ್ತಿದೆ. ಲೋಕಸಭೆಯಲ್ಲಿ ಜೆಡಿಯು ಒಟ್ಟು 20 ಸಂಸದರನ್ನು ಹೊಂದಿದೆ.

2005ರಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಬಿಹಾರ ಮುಖ್ಯಮಂತ್ರಿಯಾಗಿ ನಿತೀಶ್ ಆಯ್ಕೆಯಾಗಿದ್ದರು. ಆಗ ಜಾರ್ಜ್ ಫೆರ್ನಾಂಡಿಸ್ ಕೂಡ ಪಕ್ಷದಲ್ಲಿ ಬಹುತೇಕ ಸಕ್ರಿಯರಾಗಿದ್ದರು. ಈಗ ಅವರೂ ಮೂಲೆಗುಂಪಾಗಿದ್ದಾರೆ. ಇತ್ತ ಶರದ್ ಯಾದವ್ ಮತ್ತು ನಿತೀಶ್ ನಡುವೆ ಭಿನ್ನಮತ ಮೂಡಿರುವುದರಿಂದ ನಿತೀಶ್ ಹೊಸ ಪಕ್ಷವೊಂದನ್ನು ಹುಟ್ಟು ಹಾಕಿ ಇದೇ ವರ್ಷ ನಡೆಯಲಿರುವ ರಾಜ್ಯ ಚುನಾವಣೆಯನ್ನು ಎದುರಿಸಲಿದ್ದಾರೆ ಎಂದು ಅವರ ನಿಕಟವರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ