ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಿಮಗೆ ಏಳು ಪುತ್ರಿಯರು, ನೆನಪಿರಲಿ; ಲಾಲೂಗೆ ಸೋನಿಯಾ
(Sonia Gandhi | seven daughters | Lalu Prasad Yadav | Women's Reservation Bill)
ನಿಮಗೆ ಏಳು ಮಂದಿ ಹೆಣ್ಮಕ್ಕಳಿರುವುದರಿಂದ ಮಹಿಳಾ ಮೀಸಲಾತಿ ವಿಧೇಯಕವನ್ನು ನೀವು ಬೆಂಬಲಿಸುವ ಅಗತ್ಯವಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ರಾಷ್ಟ್ರೀಯ ಜನತಾದಳದ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರ ಕಿವಿ ಚುಚ್ಚಿದ ಅಪರೂಪದ ಪ್ರಸಂಗ ನಡೆದಿದೆ.
ಲೋಕಸಭೆಯಲ್ಲಿ ಲಾಲೂ ಮತ್ತು ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಜತೆಗಿನ ಅನೌಪಚಾರಿಕ ಮಾತುಕತೆ ಸಂದರ್ಭದಲ್ಲಿ ಯಾವ ವಿಚಾರ ಪ್ರಸ್ತಾಪಿಸಿದಿರಿ ಎಂದು ಸೋನಿಯಾರಲ್ಲಿ ಪತ್ರಕರ್ತರು ಪ್ರಶ್ನಿಸಿದಾಗ, 'ಅವರಿಗೆ ಏಳು ಪುತ್ರಿಯರಿದ್ದಾರೆ. ಹಾಗಾಗಿ ನಿಮ್ಮ ಕುಟುಂಬದಲ್ಲೇ ಮಸೂದೆ ಫಲಾನುಭವಿಗಳಾಗಿ ಏಳು ಮಂದಿಯಿದ್ದಾರೆ ಎಂದು ಅವರಿಗೆ ಹೇಳಿದೆ' ಎಂದರು.
ಲಾಲೂ ಅವರ ಪ್ರತಿಕ್ರಿಯೆ ಹೇಗಿತ್ತು ಎಂದಾಗ, 'ಅವರು ನಕ್ಕುಬಿಟ್ಟರು, ಅಷ್ಟೇ..' ಎಂದು ಸೋನಿಯಾ ಉತ್ತರಿಸಿದರು.
ನಂತರ ಮಾತನಾಡಿದ ಸೋನಿಯಾ, ನಮ್ಮ ಮಾಜಿ ಪಾಲುದಾರರು ಮಸೂದೆಯನ್ನು ಬೆಂಬಲಿಸುವ ವಿಶ್ವಾಸ ನನಗಿದೆ ಎಂದಿದ್ದಾರೆ.
ನಿನ್ನೆ ರಾಜ್ಯಸಭೆಯಲ್ಲಿ ಅಂಗೀಕಾರ ಪಡೆದುಕೊಂಡಿರುವ ಮಹಿಳಾ ಮೀಸಲಾತಿ ಮಸೂದೆಯನ್ನು ತೀವ್ರವಾಗಿ ವಿರೋಧಿಸುತ್ತಿರುವ ಲಾಲೂ ಮತ್ತು ಮುಲಾಯಂ ಜತೆ ಲೋಕಸಭೆ ಕಲಾಪ ಮುಂದೂಡಲ್ಪಟ್ಟ ಸಂದರ್ಭದಲ್ಲಿ ಸೋನಿಯಾ ಸುಮಾರು 20 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದರು.
ಮಿಸಾ ಭಾರತಿ, ರೋಹಿಣಿ ಆಚಾರ್ಯ, ಚಂದ್ರಾ ಕುಮಾರಿ, ರಾಗಿಣಿ ಕುಮಾರಿ, ಹೇಮಾ ಕುಮಾರಿ, ಧನು ಕುಮಾರಿ, ರಾಜಲಕ್ಷ್ಮಿ ಎಂಬ ಏಳು ಪುತ್ರಿಯರು ಹಾಗೂ ತೇಜ ಪ್ರತಾಪ್, ತರುಣ್ ಎಂಬ ಇಬ್ಬರು ಪುತ್ರರನ್ನು ಲಾಲೂ - ರಾಬ್ರಿ ದೇವಿ ದಂಪತಿ ಹೊಂದಿದ್ದಾರೆ.
'ಇಂದಿರಾ ಗಾಂಧಿಯವರ ಆಡಳಿತಾವಧಿಯಲ್ಲಿ ಜಾರಿಯಾಗಿದ್ದ ಕಡ್ಡಾಯ ಸಂತಾನ ಹರಣ ಚಿಕಿತ್ಸೆಗೆ ವಿರುದ್ಧವಾಗಿ ನಡೆಸಿದ ಪ್ರತಿಭಟನೆಯೇ ನನ್ನ ಕುಟುಂಬ ದೊಡ್ಡದಾಗಿ ವಿಸ್ತರಣೆಯಾಗಲು ಕಾರಣ' ಎಂದು ಈ ಹಿಂದೆ ಲಾಲೂ ಹೇಳಿದ್ದನ್ನು ಈಗ ಸ್ಮರಿಸಿಕೊಳ್ಳಬಹುದಾಗಿದೆ.