ಲಾಹೋರ್ ಸ್ಫೋಟ ಪ್ರಕರಣದಲ್ಲಿ ಭಾರತ ಪಾಲ್ಗೊಂಡಿದೆ ಎಂಬ ಪಾಕಿಸ್ತಾನದ ಆರೋಪಗಳನ್ನು ತಳ್ಳಿ ಹಾಕಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಎಂ. ಕೃಷ್ಣ, ಇದು ಬಹುತೇಕ ಯೋಚಿಸಲೂ ಸಾಧ್ಯವಿಲ್ಲದೇ ಇರುವಂತಹದ್ದು ಮತ್ತು ಸುಳ್ಳು ಸುದ್ದಿಯನ್ನು ಹಬ್ಬಿಸಲಾಗುತ್ತಿದೆ ಎಂದರು.
ಭಯೋತ್ಪಾದನೆ ವಿರುದ್ಧ ಪಾಕಿಸ್ತಾನ ಆಯ್ದುಕೊಂಡಿರುವ ನಿಲುವಿನಿಂದಾಗಿ ಇಂತಹ ಘಟನೆಗಳು ಸಂಭವಿಸುತ್ತಿವೆ ಎಂದು ಪ್ರತಿಪಾದಿಸಿರುವ ಸಚಿವರು, ನನ್ನ ಪ್ರಕಾರ ಭಯೋತ್ಪಾದನೆಯ ಕಡೆಗಿನ ನಮ್ಮ ಮನೋಭಾವಕ್ಕಿಂತ ಹೊರತಾಗಿರುವುದಕ್ಕೆ ಇಂತಹ ಸ್ಫೋಟಗಳು ನಡೆದಿವೆ ಎಂದರು.
ಆಯ್ಕೆ ಮಾಡದ ತಳಹದಿಯಲ್ಲಿ ನಾವು ಭಯೋತ್ಪಾದನೆ ವಿರುದ್ಧ ವಿಸ್ತೃತವಾದ ಸ್ಥಿರ ನಿಲುವನ್ನು ತೆಗೆದುಕೊಂಡರೆ, ಆಗ ಪಾಕಿಸ್ತಾನವು ಸಂತೋಷವಾಗಿರಬಹುದು ಮತ್ತು ಭಾರತವೂ ಶಾಂತಿಯುತ ಮುಂದುವರಿಯಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಭಾರತದ ವಿರುದ್ಧ ಯಾರು ಇಂತಹ ಆರೋಪಗಳನ್ನು ಮಾಡಿದರೂ ಅದು ಯೋಚನೆಗೆ ಬಹುತೇಕ ಅನರ್ಹವಾದ ಒಂದು ಆರೋಪವಾಗುತ್ತದೆ. ಬರೇ ಸುಳ್ಳು ಸುದ್ದಿಗಳನ್ನು ಹರಡಿಸಲಾಗುತ್ತಿದೆ. ಯಾವುದೇ ಸ್ಫೋಟದಲ್ಲಿ ಅಥವಾ ಎಲ್ಲಿ ನಡೆದ ಸ್ಫೋಟದಲ್ಲೂ ನಮ್ಮ ಭಾಗೀದಾರಿಕೆ ಇದೆ ಎಂಬ ಆರೋಪಗಳನ್ನು ನಾವು ಬಲವಾಗಿ ತಳ್ಳಿ ಹಾಕುತ್ತಿದ್ದೇವೆ ಎಂದು ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಕೃಷ್ಣ ತಿಳಿಸಿದ್ದಾರೆ.
ಉನ್ನತ ಮಟ್ಟದ ಶಂಕಿತ ಭಯೋತ್ಪಾದಕರನ್ನು ಪೊಲೀಸರು ವಿಚಾರಣೆ ನಡೆಸಿದ್ದ ಲಾಹೋರ್‌ನ ಕಟ್ಟಡವೊಂದರ ಮೇಲೆ ಸೋಮವಾರ ನಡೆದಿದ್ದ ಆತ್ಮಹತ್ಯಾ ಬಾಂಬ್ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂದು ಪಾಕಿಸ್ತಾನದ ಆಂತರಿಕ ಸಚಿವ ರೆಹಮಾನ್ ಮಲಿಕ್ ಆರೋಪಿಸಿದ್ದಕ್ಕೆ ಕೃಷ್ಣ ಉತ್ತರಿಸುತ್ತಿದ್ದರು.
ಭಾರತವು ಪಾಕಿಸ್ತಾನದೊಂದಿಗೆ ಅತ್ಯುತ್ತಮ ಮತ್ತು ಸ್ಥಿರ ಸಂಬಂಧವನ್ನು ಬಯಸುತ್ತಿದೆ ಎಂದೂ ಕೃಷ್ಣ ತಿಳಿಸಿದ್ದಾರೆ.
ಇಂತಹ ಆಧಾರರಹಿತ ಆರೋಪಗಳನ್ನು ಪಾಕಿಸ್ತಾನ ಮಾಡುತ್ತಿರುವುದು ಇದೇ ಮೊದಲಲ್ಲ ಎಂದು ಉಲ್ಲೇಖಿಸಿದ ಕೃಷ್ಣ, ಕಳೆದ ಬಾರಿ ಶ್ರೀಲಂಕಾ ಕ್ರಿಕೆಟ್ ತಂಡ ಪಾಕಿಸ್ತಾನ ಪ್ರವಾಸ ಮಾಡಿದ ಸಂದರ್ಭದಲ್ಲಿ ನಡೆದ ದಾಳಿಯೂ ಭಾರತ ನಡೆಸಿದ್ದು ಎಂದು ನೆರೆಯ ರಾಷ್ಟ್ರ ಆರೋಪಿಸಿದ್ದನ್ನು ಸ್ಮರಿಸಿಕೊಂಡರು.
ನಮ್ಮೊಂದಿಗೆ ಯಾವುದೇ ಸಾಕ್ಷ್ಯಗಳನ್ನು ಅವರು ಹಂಚಿಕೊಂಡಿಲ್ಲ. ಆ ಕಡೆ ಸಂಪೂರ್ಣ ಕಲ್ಪನೆಯಷ್ಟೇ ಇದೆ. ಇದನ್ನು ಅವರು ಮುಂದುವರಿಸುತ್ತಾರೆ ಎಂಬುದರಲ್ಲಿ ನನಗೆ ಯಾವುದೇ ಸಂಶಯವಿಲ್ಲ ಎಂದು ಪಾಕ್ ಆರೋಪಕ್ಕೆ ವ್ಯಂಗ್ಯವಾಡಿದರು.