ಪ್ರಧಾನಿ ಪಟ್ಟವನ್ನು ನಿರಾಕರಿಸಿ ತ್ಯಾಗಮಯಿ ಎಂದು ಹಣೆಪಟ್ಟಿ ಕಟ್ಟಿಕೊಂಡಿರುವ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಪರ ಮತ್ತಷ್ಟು ಅಭಿಮಾನದ ಮಹಾಪೂರ ಹರಿದು ಬರತೊಡಗಿದ್ದು, ಸೋನಿಯಾಗೆ ಭಾರತ ರತ್ನ ನೀಡಬೇಕೆಂದು ಆಂಧ್ರಪ್ರದೇಶ ಕಾಂಗ್ರೆಸ್ ಮಹಿಳಾ ಘಟಕದ ನಾಯಕಿಯರು ಒತ್ತಾಯಿಸಿದ್ದಾರೆ.!
13ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮಹಿಳಾ ಮೀಸಲಾತಿ ಮಸೂದೆ ಮಂಡನೆಗೆ ಈ ಬಾರಿಯೂ ಯಾದವ ತ್ರಯರು ವಿಘ್ನ ಒಡ್ಡಿದರೂ ಕೂಡ ಅದನ್ನು ಸಮರ್ಥವಾಗಿ ನಿಭಾಯಿಸಿ, ರಾಜ್ಯಸಭೆಯಲ್ಲಿ ಅಂಗೀಕಾರವಾಗುವಂತೆ ಮಾಡುವಲ್ಲಿ ಸೋನಿಯಾಗಾಂಧಿ ಅವರ ಪಾತ್ರ ಮಹತ್ವದ್ದು ಎಂಬುದು ಈ ಮಹಿಳಾಮಣಿಯರ ಬಹುಪರಾಕ್.
ಐತಿಹಾಸಿಕ ಮಸೂದೆಯನ್ನು ಜಾರಿಗೊಳಿಸುವಲ್ಲಿ ಸೋನಿಯಾ ಗಾಂಧಿ ಅವರ ಪರಿಶ್ರಮ ಅಪಾರವಾದದ್ದು, ಆ ನಿಟ್ಟಿನಲ್ಲಿ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕು. ಈ ಕುರಿತು ಈಗಾಗಲೇ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಗೂ ಪತ್ರ ಬರೆಯಲಾಗಿದೆ ಎಂದು ಕಾಂಗ್ರೆಸ್ ಘಟಕ ತಿಳಿಸಿದೆ.
ಯುಪಿಎ ಸರ್ಕಾರ ತೆಗೆದುಕೊಳ್ಳುವ ಮಹತ್ವದ ನಿರ್ಧಾರದ ಹಿಂದೆ ಸೋನಿಯಾ ಗಾಂಧಿ ಅವರ ಪರಿಶ್ರಮ ಸಾಕಷ್ಟಿದೆ, ಅಲ್ಲದೇ ಅದಕ್ಕೆ ಬಂದೊದಗುವ ವಿಘ್ನಗಳನ್ನು ಕೂಡ ಅವರು ಸಲೀಸಾಗಿ ಬಗೆಹರಿಸುತ್ತಾರೆ. ಆ ಕಾರಣದಿಂದ ಸೋನಿಯಾ ಗಾಂಧಿ ಅವರಿಗೆ ಭಾರತ ರತ್ನ ನೀಡುವುದು ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.