ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಲ್ಲು ತೂರಾಟಕ್ಕೆ ಇಸ್ಲಾಮ್‌ನಲ್ಲಿ ನಿಷೇಧವಿದೆ: ಕಾಶ್ಮೀರಿ ಮೌಲ್ವಿ
(Stone pelting | un-Islamic | Grand Mufti | Maulana Bashir-ud-Din)
ಕಲ್ಲು ತೂರಾಟಕ್ಕೆ ಇಸ್ಲಾಮ್‌ನಲ್ಲಿ ನಿಷೇಧವಿದೆ: ಕಾಶ್ಮೀರಿ ಮೌಲ್ವಿ
ನವದೆಹಲಿ, ಗುರುವಾರ, 11 ಮಾರ್ಚ್ 2010( 11:23 IST )
ಪ್ರತಿಭಟನೆಯ ಹೆಸರಿನಲ್ಲಿ ಕಲ್ಲು ತೂರಾಟ ನಡೆಸುವುದು ಇಸ್ಲಾಂ ವಿರೋಧಿ ಎಂದು ಜಮ್ಮು-ಕಾಶ್ಮೀರದ ಪ್ರಮುಖ ಧರ್ಮಗುರು ಮೌಲಾನಾ ಬಶೀರ್ ಉದ್ ದಿನ್ ಬುಧವಾರ ತಿಳಿಸಿದ್ದು, ಯಾವುದೇ ರೀತಿಯ ಹಿಂಸಾಚಾರವನ್ನು ಇಸ್ಲಾಂ ಪ್ರೋತ್ಸಾಹಿಸುವುದಿಲ್ಲ ಎಂದು ಹೇಳಿದ್ದಾರೆ.
ಶಾಂತಿ ಮತ್ತು ಭಾತೃತ್ವವನ್ನು ಬೋಧಿಸುವ ಇಸ್ಲಾಂ ಧರ್ಮದ ಸಿದ್ಧಾಂತವು ಎಲ್ಲಾ ರೀತಿಯ ಹಿಂಸಾಚಾರಗಳನ್ನು ನಿಷೇಧಿಸಿದೆ. ಕಲ್ಲೆಸೆತ ವಿಚಾರ ಕೂಡ ಖಂಡಿತವಾಗಿಯೂ ಅನಿಸ್ಲಾಮಿಕ ಕೃತ್ಯ. ಇದರಿಂದಾಗಿ ಜನರಿಗೆ ಅನನುಕೂಲವಾಗುವುದಲ್ಲದೆ, ಹಿಂಸಾಚಾರವನ್ನು ಹೆಚ್ಚಿಸುತ್ತದೆ ಎಂದು ಈ ಮುಫ್ತಿಯವರು ಅಭಿಪ್ರಾಯಪಟ್ಟರು.
ಇಲ್ಲಿನ ಪ್ರಮುಖ ಧರ್ಮಗುರುವಾಗಿರುವ ಬಶೀರ್ ಅವರು ಜಮ್ಮು-ಕಾಶ್ಮೀರದ ಶರಿಯತ್ ನ್ಯಾಯಾಲಯ ಮತ್ತು ರಾಜ್ಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಮುಖ್ಯಸ್ಥರೂ ಹೌದು. ಇಸ್ಲಾಮಿಕ್ ಕಾನೂನು ಮತ್ತು ಫತ್ವಾಗಳನ್ನು ಜಾರಿಗೊಳಿಸುವ ನಿರ್ಧಾರಗಳನ್ನು ಕೈಗೊಳ್ಳುವ ಅಧಿಕಾರ ಇವರಿಗಿದೆ.
ವಿರೋಧದ ಪ್ರತೀಕಾರವಾಗಿ ಕಲ್ಲೆಸೆಯುತ್ತಿದ್ದೇವೆ ಎಂದು ಸಮರ್ಥಿಸಿಕೊಳ್ಳುತ್ತಿರುವ ಕೆಲವು ಪ್ರತ್ಯೇಕತಾವಾದಿಗಳ ಕೃತ್ಯದ ವಿರುದ್ಧ ಫತ್ವಾ ಹೊರಡಿಸುತ್ತೀರಾ ಎಂಬ ಪ್ರಶ್ನೆಗೆ ಮುಫ್ತಿ, 'ನಾನೇನು ಹೇಳುತ್ತಿದ್ದೇನೋ, ಅದು ನನ್ನ ವೈಯಕ್ತಿಕ ಅಭಿಪ್ರಾಯವಲ್ಲ. ಒಬ್ಬ ಪ್ರಮುಖ ಧರ್ಮಗುರುವಾಗಿ ನಾನಿದನ್ನು ಸ್ಪಷ್ಟಪಡಿಸುತ್ತಿದ್ದೇನೆ. ಇಸ್ಲಾಂ ಯಾವುದೇ ರೀತಿಯ ಹಿಂಸಾಚಾರವನ್ನು ಸಮರ್ಥನೆ ಅಥವಾ ಪರವಹಿಸುವುದಿಲ್ಲ ಎಂದಾದ ಮೇಲೆ ಕಲ್ಲು ತೂರಾಟವನ್ನು ಹೇಗೆ ತಾನೇ ಸಮರ್ಥಿಸಿಕೊಳ್ಳಲು ಸಾಧ್ಯ? ನಾನು ಪವಿತ್ರ ಕುರಾನ್ ಹೇಳಿರುವುದನ್ನಷ್ಟೇ ಹೇಳುತ್ತಿದ್ದೇನೆ' ಎಂದರು.
ಕಳೆದ ಎರಡು ವರ್ಷಗಳಿಂದ ಭಾರೀ ಹಿಂಸಾಚಾರಕ್ಕೆ ತುತ್ತಾಗುತ್ತಿರುವ, ಅದರಲ್ಲೂ ಶುಕ್ರವಾರದಂದು ಹೆಚ್ಚಿನ ದುರ್ಘಟನೆಗಳಿಗೆ ಕಾರಣವಾಗುತ್ತಿರುವ ಪ್ರಕರಣಗಳನ್ನು ತೀವ್ರವಾಗಿ ಖಂಡಿಸಿರುವ ಅವರು, 'ಶಾಂತಿ ಮತ್ತು ಸಹೋದರತ್ವವನ್ನು ಬೋಧಿಸುವ ಧರ್ಮ ಇಸ್ಲಾಂ' ಎಂದಿದ್ದಾರೆ.
ವಾರದ ಪ್ರಾರ್ಥನಾ ದಿನವಾದ ಶುಕ್ರವಾರ ಶ್ರೀನಗರದ ಬೀದಿಗಳಲ್ಲಿ ಮುಸುಕು ಹಾಕಿಕೊಂಡ ಯುವಕರು, ಅದರಲ್ಲೂ ಹದಿ ಹರೆಯದವರು ರಕ್ಷಣಾ ಪಡೆಗಳು ಮತ್ತು ನಾಗರಿಕರ ವಿರುದ್ಧ ಕಲ್ಲು ತೂರಾಟ ನಡೆಸುತ್ತಾ ಅಶಾಂತಿಗೆ ಕಾರಣವಾಗುತ್ತಿವೆ.
ಜಮ್ಮು-ಕಾಶ್ಮೀರದಲ್ಲಿ ಕಲ್ಲು ತೂರಾಟ ಎನ್ನುವುದು ಪರ್ಯಾಯ ಉದ್ಯೋಗವಾಗಿ ಮಾರ್ಪಟ್ಟಿದೆ ಎಂದು ಅಭಿಪ್ರಾಯಪಟ್ಟಿರುವ ಮುಫ್ತಿ, ಇದರ ಪರಿಹಾರಕ್ಕೆ ಸರಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಅವರು ಕಲ್ಲು ತೂರಾಟ ನಡೆಸುತ್ತಿರುವುದಕ್ಕೆ ಹಣ ಪಡೆಯುತ್ತಾರೆ. ಅವರ ಬಗ್ಗೆ ನೀವು ಏನು ಮಾಡಲು ಸಾಧ್ಯವಿದೆ. ಕಾಶ್ಮೀರಿ ಯುವಕರಿಗೆ ನೌಕರಿ ನೀಡಿ. ಹಾಗೆ ಮಾಡಿದಲ್ಲಿ ಅವರು ಸಂಪಾದನೆಗಾಗಿ ಕಾನೂನು ವಿರೋಧಿ ಚಟುವಟಿಕೆಗಳತ್ತ ಗಮನ ಹರಿಸಲಾರರು ಎಂದರು.
ಪ್ರಸಕ್ತ ದೆಹಲಿಯಲ್ಲಿರುವ ಮುಫ್ತಿಯವರು ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ಗೃಹ ಸಚಿವ ಪಿ. ಚಿದಂಬರಂ ಅವರನ್ನು ಭೇಟಿಯಾಗಲಿದ್ದಾರೆ.