ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕೋಲ್ಕತಾ ಅಗ್ನಿ ದುರಂತ: 29ಮಂದಿ ಕಣ್ಮರೆ-ಇಬ್ಬರ ಬಂಧನ (Kolkata building fire | Park Street | missing | Buddhadeb Bhattacharjee)
ಕೋಲ್ಕತಾದ ಪಾರ್ಕ್ ಸ್ಟ್ರೀಟ್‌ನಲ್ಲಿರುವ ಸುಮಾರು 150ವರ್ಷಗಳಷ್ಟು ಹಳೆಯದಾದ ಕಟ್ಟಡದಲ್ಲಿ ಮಂಗಳವಾರ ಕಾಣಿಸಿಕೊಂಡ ಭಾರೀ ಅಗ್ನಿ ಅನಾಹುತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 24ಕ್ಕೆ ಏರಿದ್ದು, ಕಾಲ್ ಸೆಂಟರ್‌ನ ಉದ್ಯೋಗಿಗಳು ಸೇರಿದಂತೆ ಸುಮಾರು 29ಮಂದಿ ಕಣ್ಮರೆಯಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಏಳು ಅಂತಸ್ತಿನ ಸ್ಟೇಫನ್ ಕೋರ್ಟ್ ಬಿಲ್ಡಿಂಗ್‌ನಲ್ಲಿನ 5ಮತ್ತು 6ನೇ ಅಂತಸ್ತಿನ ಲಿಫ್ಟ್‌ನಲ್ಲಿ ನಿನ್ನೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಹೊತ್ತಿಕೊಂಡ ಬೆಂಕಿ ಇಡೀ ಕಟ್ಟಡವನ್ನೇ ಆವರಿಸಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದು, ಪರಿಸ್ಥಿತಿ ಬುಧವಾರ ನಿಯಂತ್ರಣಕ್ಕೆ ಬಂದಿರುವುದಾಗಿ ಅಧಿಕಾರಿಗಳು ವಿವರಿಸಿದ್ದಾರೆ.
ಕಟ್ಟಡದ ಐದು ಮತ್ತು ಆರನೇ ಅಂತಸ್ತಿನಲ್ಲಿನ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಇದರಲ್ಲಿ ಆರು ಮಂದಿಯ ಗುರುತು ಪತ್ತೆ ಹಚ್ಚಲಾಗಿದೆ. 20ಮಂದಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದರು. ಬೆಂಕಿ ನಂದಿಸುವ ಹಾಗೂ ಶೋಧ ಕಾರ್ಯ ಮುಂದುವರಿದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಟ್ಟಡಕ್ಕೆ ಬೆಂಕಿ ಹೊತ್ತಿಕೊಂಡ ಪರಿಣಾಮ ಪಾರ್ಕ್ ಸ್ಟ್ರೀಟ್‌ನಲ್ಲಿನ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ಬುಧವಾರ ಬೆಳಿಗ್ಗೆ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟ ಹಿನ್ನೆಲೆಯಲ್ಲಿ ಕಟ್ಟಡದಲ್ಲಿನ ವಾಣಿಜ್ಯ ಮಳಿಗೆಗಳು ವ್ಯಾಪಾರ-ವಹಿವಾಟನ್ನು ಆರಂಭಿಸಿದ್ದವು.
ಇಬ್ಬರ ಬಂಧನ: ಅಗ್ನಿ ದುರಂತದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲ್ಕತಾ ಪೊಲೀಸರು ಸ್ಟೇಫನ್ ಕೋರ್ಟ್ ಕಟ್ಟಡದ ಮಾಲೀಕ ಸಂಜಯ್ ಬಾಗಾರಿಯಾ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ಇನ್ನಿಬ್ಬರನ್ನು ಬಂಧಿಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಸಂಜಯ್ ತಲೆಮರೆಸಿಕೊಂಡಿದ್ದು, ಆತನ ವಿರುದ್ಧ ಭಾರತೀಯ ದಂಡ ಸಂಹಿತೆ 304, ಅಗ್ನಿ ರಕ್ಷಣಾ ಕಾಯ್ದೆ 11/ಸಿ ಅನ್ವಯ ದೂರು ದಾಖಲಾಗಿದೆ. ಅಲ್ಲದೇ ತರುಣ್ ಬಾಗಾರಿಯಾ ಮತ್ತು ರಾಮ್ ಶಂಕರ್ ಸಿಂಗ್ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ.