ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿನಿಯ ಬಟ್ಟೆ ಬಿಚ್ಚಿಸಿ ತಪಾಸಣೆ
ಗಾಜಿಯಾಬಾದ್, ಶುಕ್ರವಾರ, 26 ಮಾರ್ಚ್ 2010( 18:33 IST )
ನಕಲು ಮಾಡಲು ಚೀಟಿ ಒಯ್ಯುತ್ತಿದ್ದಾಳೆ ಎಂಬ ಶಂಕೆಯಿಂದ ಉತ್ತರ ಪ್ರದೇಶ ಪರೀಕ್ಷಾ ಮಂಡಳಿಯ 10ನೇ ತರಗತಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿನಿಯೊಬ್ಬಳನ್ನು ಬೆತ್ತಲೆಗೊಳಿಸಿ ತಪಾಸಣೆ ಮಾಡಿದ ಪರೀಕ್ಷಾ ಮೇಲ್ವಿಚಾರಕನ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ.
ಗಾಜಿಯಾಬಾದ್ ಸಮೀಪದ ಮೋದಿನಗರದಲ್ಲಿರುವ ರುಕ್ಮಣಿ ಮೋದಿ ಮಹಿಳಾ ಕಾಲೇಜಿನಲ್ಲಿ ಉತ್ತರ ಪ್ರದೇಶ ಇಂಟರ್‌ಮೀಡಿಯೇಟ್ ಶಿಕ್ಷಣ ಮಂಡಳಿ (ಯುಪಿಐಇಬಿ)ಯ ಇಂಗ್ಲಿಷ್ ಪರೀಕ್ಷೆಗೆ ಈ ಹುಡುಗಿ ಹಾಜರಾಗುತ್ತಿದ್ದಳು. ನಕಲು ಮಾಡಲೆಂದು ಒಯ್ಯುತ್ತಿದ್ದ ಚೀಟಿಯನ್ನು ಶೋಧಿಸಲು, ಮೇಲ್ವಿಚಾರಕರು ಆಕೆಗೆ ಬಟ್ಟೆ ಬಿಚ್ಚಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಹುಡುಕಿದಾಗ ಏನೂ ಸಿಗಲಿಲ್ಲವಾದರೂ, ಆಕೆಗೆ ಪರೀಕ್ಷೆ ಬರೆಯಲು ಅಸಾಧ್ಯವಾಯಿತು. ಈ ಸಂಬಂಧ ಹುಡುಗಿಯ ಹೆತ್ತವರು ಮತ್ತು ಬಂಧುಗಳು ಕಾಲೇಜಿನೆದುರು ಪ್ರತಿಭಟನೆ ನಡೆಸಿ ಪೊಲೀಸರಿಗೆ ದೂರು ನೀಡಿದರು.
ಕಾಲೇಜು ಪ್ರಾಂಶುಪಾಲ ಕಮಲೇಶ್ ಗೌಡ್ ಅವರು ಘಟನೆ ಬಗ್ಗೆ ಬೇಷರತ್ ಕ್ಷಮೆ ಯಾಚಿಸಿದ್ದು, ಪರೀಕ್ಷೆಗೆ ಹಾಜರಾಗುವ ಎಲ್ಲ ಹುಡುಗಿಯರಿಗೆ ಸೂಕ್ತ ರಕ್ಷಣೆ ನೀಡುವುದಾಗಿ ಭರವಸೆ ನೀಡಿ, ಪ್ರಕರಣಕ್ಕೆ ಅಂತ್ಯ ಹಾಡಿದರು.
ನಾವು ಕ್ಷಮೆ ಕೇಳಿದ್ದು, ಅದನ್ನು ಹುಡುಗಿಯ ಹೆತ್ತವರು ಒಪ್ಪಿಕೊಂಡಿದ್ದಾರೆ. ಈಗ ವಿವಾದ ಪರಿಹಾರವಾಗಿದೆ ಎಂದು ಗೌಡ್ ಹೇಳಿದ್ದಾರೆ. ಉಭಯ ಪಕ್ಷೀಯರೂ ಸಮಸ್ಯೆ ಪರಿಹರಿಸಿಕೊಂಡಿರುವುದರಿಂದ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.