ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 4 ಬಾರಿ ತಪ್ಪು ಸಂಖ್ಯೆ ಒತ್ತಿ, ರೈಲ್ವೇ ಅಧಿಕಾರಿ ಸಂಪರ್ಕಿಸಿ!
(IRCTC | Enquiry | Train Booking | Enquiry | Railway Enquiry number 139)
4 ಬಾರಿ ತಪ್ಪು ಸಂಖ್ಯೆ ಒತ್ತಿ, ರೈಲ್ವೇ ಅಧಿಕಾರಿ ಸಂಪರ್ಕಿಸಿ!
ನವದೆಹಲಿ, ಶನಿವಾರ, 27 ಮಾರ್ಚ್ 2010( 14:06 IST )
ಭಾರತೀಯ ರೈಲ್ವೇಯ ಪ್ರಯಾಣಿಕ ಮಾಹಿತಿ ವ್ಯವಸ್ಥೆಯ ಕಾಲ್ ಸೆಂಟರ್ ನಂಬರ್ 139ಕ್ಕೆ ಕರೆ ಮಾಡಲು ಪ್ರಯತ್ನಿಸಿ ಸೋತು ಸುಣ್ಣವಾಗಿದ್ದೀರಾ? ಹಾಗಿದ್ದರೆ ಈ ನಂಬರ್ ಡಯಲ್ ಮಾಡಿದ ನಂತರ, ನಾಲ್ಕು ಬಾರಿ ತಪ್ಪು ಸಂಖ್ಯೆಯನ್ನು ಒತ್ತಿರಿ ಮತ್ತು ನಿಮ್ಮ ಕರೆ ನೇರವಾಗಿ ಅಧಿಕಾರಿಯೊಬ್ಬರಿಗೆ ವರ್ಗಾವಣೆಯಾಗುತ್ತದೆ!
ಹೌದು. ಈ ವಿಚಿತ್ರ ಆದರೂ ಸತ್ಯವಾದ ಸಂಗತಿ ಕೆಲಸ ಮಾಡುತ್ತದೆ. ಇದನ್ನು ಹೇಳಿದ್ದು ಬೇರಾರೂ ಅಲ್ಲ, ಸ್ವತಃ ಐಆರ್‌ಸಿಟಿಸಿ (ಭಾರತೀಯ ರೈಲ್ವೇ ಆಹಾರ ಪೂರೈಕೆ ಮತ್ತು ಪ್ರವಾಸೋದ್ಯಮ ಸಂಸ್ಥೆ)ಯ ಅಧಿಕಾರಿ. ಕೇಂದ್ರೀಯ ಮಾಹಿತಿ ಆಯೋಗದ ವಿಚಾರಣೆ ಸಂದರ್ಭ ಅವರು ಇದನ್ನು ಹೇಳಿದ್ದಾರೆ.
139 ಸಂಖ್ಯೆಯ ಬಗ್ಗೆ ರಾಜಸ್ಥಾನದ ಹನುಮಾನ್ ಶರ್ಮಾ ಅವರಿಗೆ ಮಾಹಿತಿ ಬೇಕಿತ್ತು. ಅವರಿಗೆ ಸಮಾಧಾನಕರ ಉತ್ತರ ದೊರೆಯದ ಕಾರಣ ಅವರು ಆಯೋಗದ ಮೊರೆ ಹೋಗಿದ್ದರು.
ಇಪ್ಪತ್ತನಾಲ್ಕು ಗಂಟೆಯೂ ಕೆಲಸ ಮಾಡುವ ಕಾಲ್ ಸೆಂಟರ್ ಸಂಖ್ಯೆ 139 ನಡೆಯುತ್ತಿರುವುದು ಐಆರ್‌ಸಿಟಿಸಿ ವತಿಯಿಂದ. ಇದು ದೇಶದ ಹಲವಾರು ದೊಡ್ಡ ನಗರಗಳಲ್ಲಿ ಕಾರ್ಯಾಚರಿಸುತ್ತದೆ. ಒಬ್ಬ ಆಪರೇಟರ್ ಸಂಪರ್ಕಿಸಲು ಇದು ಅವಕಾಶ ಕೊಡಬೇಕಿದ್ದರೂ, ಹೆಚ್ಚಿನ ಸಂದರ್ಭಗಳಲ್ಲಿ ಹಾಗಾಗುತ್ತಿಲ್ಲ.
ಮಾರ್ಚ್ 11ರಂದು ನಡೆದ ವಿಚಾರಣೆ ಸಂದರ್ಭ ಐಆರ್‌ಸಿಟಿಸಿಯನ್ನು ಪ್ರತಿನಿಧಿಸಿದವರು ಅದರ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನಿಲ್ ಚೋಪ್ರಾ ಮತ್ತು ವ್ಯವಸ್ಥಾಪಕ (ಕಾನೂನು ವಿಭಾಗ) ಗುರುಪ್ರೀತ್ ಸಿಂಗ್. ಶರ್ಮಾ ಅವರು ರಾಜಸ್ಥಾನದಿಂದ ಆಡಿಯೋ ಕಾನ್ಫರೆನ್ಸ್ ಮೂಲಕ ಇದರಲ್ಲಿ ಭಾಗಿಯಾದರು.
139ಕ್ಕೆ ಕರೆ ಮಾಡಿದರೆ ಸ್ಥಿರ ದೂರವಾಣಿಯಿಂದ ಮತ್ತು ಮೊಬೈಲ್‌ನಿಂದ ಕರೆ ಮಾಡಿದರೆ ಐಆರ್‌ಸಿಟಿಸಿ ಎಷ್ಟು ಶುಲ್ಕ ವಿಧಿಸುತ್ತದೆ ಮತ್ತು ನೇರವಾಗಿ ಕಾಲ್ ಸೆಂಟರ್ ಅಧಿಕಾರಿಗಳೊಂದಿಗೆ ಮಾತನಾಡುವ ಅವಕಾಶವಿದೆಯೇ ಎಂಬುದನ್ನು ತಿಳಿಯಲು ಶರ್ಮಾ ಬಯಸಿದ್ದರು.
ಈ ಕರೆಗಳಿಂದ ಐಆರ್‌ಸಿಟಿಸಿ ಯಾವುದೇ ಆದಾಯ ಸಂಗ್ರಹಿಸುತ್ತಿಲ್ಲ. ಆದರೆ ನೇರವಾಗಿ ಅಧಿಕಾರಿ ಜೊತೆ ಮಾತನಾಡಲು, ನಾಲ್ಕು ಬಾರಿ ತಪ್ಪು ಅಂಕಿ ಒತ್ತಿದ ಬಳಿಕ ಇದು ಸಾಧ್ಯ ಎಂದು ಅಧಿಕಾರಿ ಉತ್ತರಿಸಿರುವುದಾಗಿ ಮಾಹಿತಿ ಆಯುಕ್ತರಾದ ಅನ್ನಪೂರ್ಣ ದೀಕ್ಷಿತ್ ತಿಳಿಸಿದ್ದಾರೆ.
ಟಿಕೆಟ್ ಕಾದಿರಿಸುವಿಕೆ ಮತ್ತು ಇತರ ರೈಲ್ವೇ ಮಾಹಿತಿಗಾಗಿ ಲಕ್ಷಾಂತರ ಮಂದಿ ಪ್ರತಿದಿನ ಈ ಸಂಖ್ಯೆಗೆ ಕರೆ ಮಾಡುತ್ತಾರೆ. ಈ ವಿಚಾರಣಾ ಸಂಖ್ಯೆಗೆ ಕರೆ ಮಾಡುವ ಪ್ರಯಾಣಿಕರು ಹೆಚ್ಚಾಗಿ ಅಧಿಕಾರಿಗಳನ್ನು ಮಾತನಾಡಿಸಲು ವಿಫಲರಾಗುತ್ತಾರೆ.