ಸಲಿಂಗಕಾಮಿಗಳಿಬ್ಬರು ವಿವಾಹ ಮಾಡಿಕೊಂಡ ಎರಡೇ ದಿನಗಳಲ್ಲಿ ಎರಡೂ ಕುಟುಂಬಗಳಿಂದಲೂ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ 'ವಿವಾಹ ವಿಚ್ಛೇದನ' ಪಡೆದುಕೊಂಡ ಘಟನೆ ಮಣಿಪುರದಲ್ಲಿ ನಡೆದಿದೆ.
ಸಂದೀಪ್(25)ರ ಹರೆಯದ ಮದುಮಗ ಹಾಗೂ ನಿಖಿಲ್(28)ರ ಮಧುವಣಗಿತ್ತಿ(?) ಜೊತೆ ಇಲ್ಲಿನ ಕಮ್ಯೂನಿಟಿ ಹಾಲ್‌ನಲ್ಲಿ ಗುರುವಾರ ವಿವಾಹ ಮಾಡಿಕೊಂಡಿದ್ದರು. ಇದೀಗ ಶನಿವಾರ ತಡರಾತ್ರಿ ಇಬ್ಬರೂ ವಿವಾಹ ವಿಚ್ಛೇದನ ಮಾಡಿಕೊಳ್ಳುವ ಮೂಲಕ ನಾನೊಂದು ತೀರ, ನೀನೊಂದು ತೀರ ಎಂಬಂತೆ ದೂರಾಗಿದ್ದಾರೆ.
ಸಲಿಂಗಕಾಮಿಗಳಾದ ಸಂದೀಪ್ ಹಾಗೂ ನಿಖಿಲ್ ಮದುವೆಯಾದ ನಂತರ ಎರಡೂ ಕುಟುಂಬದವರು ಸಿಂಗ್ಜಿಮೈ ಪೊಲೀಸ್ ಠಾಣೆಯಲ್ಲಿ ದೂರು ನೀಡಿ, ಹೇಗಾದ್ರೂ ಮಾಡಿ ಅವರಿಬ್ಬರನ್ನೂ ವಿವಾಹದಿಂದ ವಿಚ್ಛೇದನ ಪಡೆಯುವಂತೆ ನೆರವು ನೀಡುವಂತೆ ಕೋರಿದ್ದರು. ದೂರಿನಂತೆ, ಸಂದೀಪ್ ಮತ್ತು ನಿಖಿಲ್ ಇಬ್ಬರನ್ನು ಪೊಲೀಸ್ ಠಾಣೆಗೆ ಕರೆಯಿಸಿ, ಸುಮಾರು 2ಗಂಟೆಗಳ ಕಾಲ ತಿಳಿವಳಿಕೆ ಹೇಳಿದ್ದರು. ತದನಂತರ ಪೊಲೀಸರ ಬುದ್ದಿವಾದಕ್ಕೆ ಮಣಿದ ಇಬ್ಬರೂ ವಿವಾಹ ವಿಚ್ಛೇದನಕ್ಕೆ ಒಪ್ಪಿಗೆ ಸೂಚಿಸಿರುವುದಾಗಿ ಸಂದೀಪ್ ಕುಟುಂಬದ ಸದಸ್ಯರೊಬ್ಬರು ಐಎಎನ್‌ಎಸ್‌ಗೆ ವಿವರಿಸಿದ್ದಾರೆ.
ಸುಮಾರು ಆರು ವರ್ಷಗಳಿಂದ ಸಲಿಂಗಕಾಮಿಗಳಾಗಿದ್ದ ಇವರಿಬ್ಬರು ವಿವಾಹವಾದ ನಂತರ ಎರಡೂ ಕುಟುಂಬದವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಸಲಿಂಗಕಾಮಿಗಳ ಮದುವೆ ಸಮಾಜದಲ್ಲಿ ಈಗಲೂ ನಿಷೇಧ ಎಂಬ ಧಾರ್ಮಿಕ ನಂಬಿಕೆಯನ್ನು ಈ ಕುಟುಂಬಗಳು ಬಲವಾಗಿ ನಂಬಿದ್ದು, ಈ ಕಾರಣಕ್ಕಾಗಿ ಇಬ್ಬರ ವಿವಾಹ ವಿಚ್ಛೇದನಕ್ಕೆ ಒತ್ತಾಯಿಸಿದ್ದರು.
'ಈ ಘಟನೆಯಿಂದ ನಮಗೆ ತುಂಬಾ ನೋವಾಗಿತ್ತು. ಅಲ್ಲದೇ ಈ ಮದುವೆಯನ್ನು ಬಲವಾಗಿ ವಿರೋಧಿಸಿದ್ದೇವು. ಆದರೆ ನಮಗೆ ಬೇರೆ ದಾರಿಯೇ ಇರಲಿಲ್ಲವಾಗಿತ್ತು. ಆ ನಿಟ್ಟಿನಲ್ಲಿ ನಾವು ಪೊಲೀಸರ ಮೊರೆ ಹೋಗಿ ಸಹಾಯ ಕೇಳಿದ್ದೇವು. ಇದರಲ್ಲಿ ಯಾವುದೇ ಬಲವಂತ ಇಲ್ಲವಾಗಿತ್ತು. ಅವರಿಬ್ಬರಿಗೂ ಬುದ್ದಿವಾದ ಹೇಳಿ ಮನಸ್ಸನ್ನು ಪರಿವರ್ತನೆ ಮಾಡಿದ ನಂತರ ವಿವಾಹ ವಿಚ್ಛೇದನ ಪಡೆದುಕೊಂಡಿದ್ದರು' ಎಂದು ಹೆಸರು ಹೇಳಲು ಇಚ್ಚಿಸಿದ ನಿಖಿಲ್ ಕುಟುಂಬದ ಸದಸ್ಯರೊಬ್ಬರು ತಿಳಿಸಿದ್ದಾರೆ.