ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಒರಿಸ್ಸಾ ಸಿಎಂ ಮನೆ ಸ್ಫೋಟಿಸ್ತೇವೆ: ನಕ್ಸಲ್ ಎಚ್ಚರಿಕೆ (Maoists threaten | Orissa | Naveen Patnaik | Kishenji | Bikram)
ನಕ್ಸಲ್ ಸಂಘಟನೆಯ ಮುಖ್ಯಸ್ಥ ಕಿಶನ್‌ಜೀ ಅವರು ಪೊಲೀಸ್ ಕಾರ್ಯಾಚರಣೆಯಲ್ಲಿ ಗುಂಡೇಟಿಗೆ ಗುರಿಯಾಗಿರುವುದಕ್ಕೆ ಪ್ರತಿಕಾರ ಎಂಬಂತೆ, ಒರಿಸ್ಸಾ ಮುಖ್ಯಮಂತ್ರಿ ನವೀನ್ ಪಾಟ್ನಾಯಕ್ ಅವರ ಮನೆಯನ್ನೇ ಸ್ಫೋಟಿಸುವುದಾಗಿ ಮಾವೋವಾದಿಗಳು ಎಚ್ಚರಿಕೆ ನೀಡಿದ್ದಾರೆ.
ಮುಖ್ಯಮಂತ್ರಿ ನವೀನ್ ಪಾಟ್ನಾಯಕ್ ಅವರ ಮನೆಯನ್ನು ಧ್ವಂಸಗೊಳಿಸುವುದಾಗಿ ಮುಖ್ಯಮಂತ್ರಿ ಕಚೇರಿಗೆ(ಸಿಎಂಓ) ಇ-ಮೇಲ್‌ನಲ್ಲಿ ಎಚ್ಚರಿಕೆಯ ಸಂದೇಶ ಕಳುಹಿಸಿದ್ದಾರೆ. ಅಲ್ಲದೇ ರಾಜ್ಯದಲ್ಲಿರುವ ಇನ್ನಿತರ ಪ್ರಮುಖ ಕಟ್ಟಡಗಳನ್ನು ಸ್ಫೋಟಿಗೊಳಿಸುವುದಾಗಿ ಬೆದರಿಕೆ ಹಾಕಿದ್ದಾರೆಂದು ಮುಖ್ಯಮಂತ್ರಿ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.
ನಾವು, ಕಿಶನ್‌ಜಿ ಹಾಗೂ ಕಾಮ್ರೇಡ್ ಬಿಕ್ರಮ್ ಅವರಿಗೆ ಬಿದ್ದಿರುವ ಒಂದೊಂದು ಗುಂಡಿಗೂ ಪ್ರತೀಕಾರ ತೆಗೆದುಕೊಳ್ಳದೇ ಬಿಡುವುದಿಲ್ಲ ಎಂದು ಇ-ಮೇಲ್‌ನಲ್ಲಿ ಎಚ್ಚರಿಸಿದೆ. ಇ-ಮೇಲ್ ಅನ್ನು ಮಾವೋವಾದಿ ಗುಂಪಿನ ಜೊತೆ ಗುರುತಿಸಿಕೊಂಡಿರುವ ಪೀಪಲ್ಸ್ ಲಿಬರೇಷನ್ ಗೆರಿಲ್ಲಾ ಆರ್ಮಿ ಎಂಬ ಗುಂಪಿನ, ಸೆಂಟ್ರಲ್ ಮಿಲಿಟರಿ ಕಮೀಷನ್ ವಿಭಾಗದ ಹೆಸರಿನಲ್ಲಿ ರವಾನಿಸಿದೆ.
ಒರಿಸ್ಸಾ ಸರ್ಕಾರ ಯಾವಾಗ ಮಾವೋವಾದಿಗಳ ವಿರುದ್ಧ ಗ್ರೀನ್ ಹಂಟ್ ಅಥವಾ ಕಾರ್ಯಾಚರಣೆ ನಡೆಸಲು ಮುಂದಾಗುವುದೋ, ಅಂದಿನಿಂದ ತಮ್ಮ ಸಂಘಟನೆ ಭುವನೇಶ್ವರ್, ಕಟಕ್ ಮತ್ತು ಪುರಿ ನಗರಗಳಲ್ಲಿ ಏಕ ಕಾಲದಲ್ಲಿ ದಾಳಿಗಳನ್ನು ನಡೆಸಲಿದ್ದೇವೆ ಎಂದು ಇ-ಮೇಲ್‌ನಲ್ಲಿ ಬೆದರಿಕೆಯೊಡ್ಡಿದೆ.
ಮಾವೋವಾದಿಗಳ ನಿಗ್ರಹಕ್ಕೆ ಕೇಂದ್ರ ಸರ್ಕಾರದಿಂದ ಅರೆಸೇನಾ ಪಡೆಯ ನೆರವು ದೊರೆತಿರುವುದಕ್ಕೆ ಸಂತೋಷ ಪಡಬೇಡಿ, ಈ ನಿಮ್ಮ ಸಂತೋಷ ಕೇವಲ ತಾತ್ಕಾಲಿಕ, ಅಷ್ಟೇ ಎಂದು ಮುಖ್ಯಮಂತ್ರಿ ನವೀನ್ ಪಾಟ್ನಾಯಕ್ ಅವರನ್ನು ಉದ್ದೇಶಿಸಿ ವ್ಯಂಗ್ಯವಾಡಿದೆ.
ಸ್ಟೇಟ್ ಸೆಕ್ರೆಟರಿಯೇಟ್, ಪೊಲೀಸ್ ವರಿಷ್ಠಾಧಿಕಾರಿ ಕಚೇರಿ, ಕಟಕ್‌ನಲ್ಲಿರುವ ಪೊಲೀಸ್ ಹೆಡ್ ಕ್ವಾರ್ಟಸ್, ಒರಿಸ್ಸಾ ಸ್ಪೆಶಲ್ ಶಸ್ತ್ರ ಸಜ್ಜಿತ ಪೊಲೀಸ್ ಪಡೆಯ ಬೆಟಾಲಿಯನ್, ಒರಿಸ್ಸಾ ಕಂಪ್ಯೂಟರ್ ಅಪ್ಲಿಕೇಶನ್ ಸೆಂಟರ್, ಗ್ರಿಡ್ ಕಾರ್ಪೋರೇಶನ್ ಆಫ್ ಒರಿಸ್ಸಾ, ನಾಲ್ಕೊ ಮತ್ತು ಬಿಜು ಪಟ್ನಾಯಕ್ ಯೂನಿರ್ವಸಿಟಿ ಆಫ್ ಟೆಕ್ನಾಲಜಿ ನಕ್ಸಲೀಯರ ಮುಖ್ಯ ಗುರಿಯಾಗಿರುವ ಕಟ್ಟಡಗಳಾಗಿವೆ.