ಉತ್ತರಾಧಿಕಾರಿಯನ್ನು ನಿರ್ಧರಿಸುವ ಅಧಿಕಾರ ನನಗಿಲ್ಲ: ಕರುಣಾ
ಚೆನ್ನೈ, ಬುಧವಾರ, 31 ಮಾರ್ಚ್ 2010( 13:25 IST )
ಉತ್ತರಾಧಿಕಾರಿ ಬಗ್ಗೆ ಕಳೆದ ಹಲವು ಸಮಯದಿಂದ ಅವಕಾಶ ಸಿಕ್ಕಾಗಲೆಲ್ಲ ಪುತ್ರ ಹಾಗೂ ಕೇಂದ್ರ ಸಚಿವ ಎಂ.ಕೆ. ಅಳಗಿರಿ ಕ್ಯಾತೆ ತೆಗೆಯುತ್ತಾ ಬಂದಿರುವುದಕ್ಕೆ ಸ್ಪಷ್ಟ ಉತ್ತರ ನೀಡಿರುವ ಡಿಎಂಕೆ ವರಿಷ್ಠ ಹಾಗೂ ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ, ಪಕ್ಷದ ನಾಯಕನನ್ನು ನಿರ್ಧರಿಸುವ ಅಧಿಕಾರ ಇರುವುದು ಪಕ್ಷಕ್ಕೆ ಮಾತ್ರ ಎಂದು ತಿಳಿಸಿದ್ದಾರೆ.
ಕರುಣಾನಿಧಿಯವರು ಮಾತ್ರ ಪಕ್ಷವನ್ನು ಮುನ್ನಡೆಸುವ ಸಾಮರ್ಥ್ಯ ಮತ್ತು ಅರ್ಹತೆ ಹೊಂದಿದ್ದಾರೆ ಎಂದು ಅಳಗಿರಿ ಹೇಳಿರುವುದನ್ನು ತಮಿಳು ನಿಯತಕಾಲಿಕ 'ನಕ್ಕೀರನ್' ಪ್ರಶ್ನಿಸಿದ್ದಕ್ಕೆ ಉತ್ತರಿಸಿರುವ ಕರುಣಾನಿಧಿ, 'ಉತ್ತರಾಧಿಕಾರಿ ಯಾರೆಂಬುದನ್ನು ನಿರ್ಧರಿಸಲು ನನಗೂ ಅಧಿಕಾರವಿಲ್ಲ' ಎಂದಿದ್ದಾರೆ.
PTI
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರೂ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಹಕ್ಕು ಹೊಂದಿದ್ದಾರೆ. ಆದರೆ ನಾಯಕತ್ವ ವಿಚಾರವನ್ನು ನಿರ್ಧರಿಸಲು ಅಂತಿಮ ಅಧಿಕಾರ ಇರುವುದು ಪಕ್ಷಕ್ಕೆ ಮಾತ್ರ. ಇಲ್ಲಿ ನನಗೂ ಯಾವುದೇ ಅಧಿಕಾರವಿಲ್ಲ ಎಂದು ಸಂದರ್ಶನದಲ್ಲಿ ಉತ್ತರಿಸಿದರು.
ಉತ್ತರಾಧಿಕಾರಿ ಕುರಿತಂತೆ ಅಳಗಿರಿ ಮತ್ತು ಉಪ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನಡುವೆ ಭಿನ್ನಾಭಿಪ್ರಾಯಗಳು ಇರುವ ಬಗ್ಗೆ ವರದಿಗಳು ಬಂದಿರುವುದನ್ನು ಕರುಣಾನಿಧಿಯವರ ಗಮನಕ್ಕೆ ತಂದಾಗ ಅದನ್ನು ನಿರಾಕರಿಸಿದ ಅವರು, 'ಅವರ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯವಿದ್ದರೂ ಅದು ನನಗೆ ನೋವುಂಟು ಮಾಡುತ್ತದೆ ಎಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ. ಈ ಬಗ್ಗೆ ಅವರು ಖಂಡಿತಾ ಅರಿವಿಲ್ಲದವರಲ್ಲ' ಎಂದರು.
ಉತ್ತರಾಧಿಕಾರಿ ವಿಚಾರದ ಬಗ್ಗೆ ಮಾತನಾಡುತ್ತಾ ಅಳಗಿರಿ, ಕರುಣಾನಿಧಿ ಹೊರತುಪಡಿಸಿ ಉಳಿದ ಯಾರೊಬ್ಬರನ್ನೂ ತಾನು ಉತ್ತರಾಧಿಕಾರಿ ಅಥವಾ ನನ್ನ ನಾಯಕ ಎಂದು ಪರಿಗಣಿಸಲಾರೆ ಎಂದು ಹೇಳಿದ್ದರು. ಈ ಮಾತನ್ನು ಕಳೆದ ಹಲವು ಸಮಯಗಳಿಂದ ಅಳಗಿರಿ ಹೇಳುತ್ತಾ ಬಂದಿದ್ದಾರೆ.
ತಾನು ಸಕ್ರಿಯ ರಾಜಕಾರಣದಿಂದ ನಿವೃತ್ತಿಯಾಗುವುದಾಗಿ ಕರುಣಾನಿಧಿ ಒಂದೆರಡು ಸಲ ಹೇಳಿದ್ದರೂ, ತನ್ನ ಉತ್ತರಾಧಿಕಾರಿ ಯಾರೆಂದು ಹೇಳಿರಲಿಲ್ಲ. ಆದರೆ ಪಕ್ಷದ ಮೂಲಗಳ ಪ್ರಕಾರ ಕರುಣಾನಿಧಿ ಒಲವು ಇರುವುದು ಸ್ಟಾಲಿನ್ ಕಡೆಗೆ ಎಂದೇ ಹೇಳಲಾಗುತ್ತಿದೆ.