ಶೋಯಿಬ್ ಮಲಿಕ್ ಜತೆ ಗಂಡನ ಮನೆಗೆ ಹೋಗಲು ಸಿದ್ಧತೆ ನಡೆಸುತ್ತಿದ್ದ ಸಾನಿಯಾ ಮಿರ್ಜಾಗೆ ಮತ್ತೆ ನಿರಾಸೆ ಎದುರಾಗಿದೆ. ಮುಸ್ಲಿಮರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡಲಾಗಿದೆ ಎಂದು ಶೋಯಿಬ್, ಸಾನಿಯಾ ಸೇರಿದಂತೆ 14 ಮಂದಿ ಮೇಲೆ ಸಂಘಟನೆಯೊಂದು ನೀಡಿದ ದೂರನ್ನು ಪರಿಶೀಲಿಸಿದ ನ್ಯಾಯಾಲಯವು ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಸೂಚನೆ ನೀಡಿದೆ.
PR
ಹೈದರಾಬಾದ್‌ನ ಮುಸ್ಲಿಂ ಸಂಘಟನೆಯೊಂದು ನೀಡಿದ ಖಾಸಗಿ ದೂರನ್ನು ವಿಚಾರಣೆಗೆ ಸ್ವೀಕರಿಸಿದ ಮೂರನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್, ತನಿಖೆ ನಡೆಸಿ ಮೇ 26ರೊಳಗೆ ವರದಿ ಸಲ್ಲಿಸುವಂತೆ ಬಂಜಾರಾ ಹಿಲ್ಸ್ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ.
ದೂರು ಸ್ವೀಕಾರಾರ್ಹವಾಗಿದ್ದರೆ ಧಾರ್ಮಿಕ ಅಗೌರವಕ್ಕಾಗಿ ಜಾಮೀನು ರಹಿತ ವಾರೆಂಟ್ ಜಾರಿಗೊಳ್ಳುವ ಸಾಧ್ಯತೆಗಳಿವೆ. ಹಾಗಾದಲ್ಲಿ ಆರತಕ್ಷತೆಗೆ ಹೋಗಬೇಕೆಂದು ಸಿದ್ಧತೆ ನಡೆಸುತ್ತಿರುವ ಸಾನಿಯಾ ಮತ್ತು ಶೋಯಿಬ್ ಪಾಕಿಸ್ತಾನಕ್ಕೆ ಹೋಗುವುದು ಅಸಾಧ್ಯವಾಗಬಹುದು.
ಪಾಕಿಸ್ತಾನಿ ಕ್ರಿಕೆಟ್ ಆಟಗಾರ ಶೋಯಿಬ್ ಮಲಿಕ್, ಆತನ ಭಾರತೀಯ ಪತ್ನಿ ಸಾನಿಯಾ ಮಿರ್ಜಾ, ಶೋಯಿಬ್‌ನಿಂದ ವಿಚ್ಛೇದನ ಪಡೆದ ಆಯೇಶಾ ಸಿದ್ಧಿಕಿ, ಸಾನಿಯಾ ತಂದೆ ಇಮ್ರಾನ್ ಮಿರ್ಜಾ, ಟೀಮ್ ಇಂಡಿಯಾ ಮಾಜಿ ಕಪ್ತಾನ ಮೊಹಮ್ಮದ್ ಅಜರುದ್ದೀನ್, ಇಬ್ಬರು ಖಾಜಿಗಳೂ ಸೇರಿದಂತೆ 14 ಮಂದಿ ಮುಸ್ಲಿಮರ ಧಾರ್ಮಿಕ ಭಾವನೆಗಳಿಗೆ ಅಗೌರವ ತೋರಿಸಿದ್ದಾರೆ ಎಂದು ಮಜ್ಲುಮೀನ್ ಇ ಉಮಾತೇ ಮೊಹಮ್ಮದೀಯ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಮೌಲಿಂ ಮೊಹ್ಸಿನ್ ಬಿನ್ ಹುಸೇನ್ ಅಲ್ ಕಸಾರಿ ದೂರು ನೀಡಿದ್ದಾರೆ.
ತಾನು ಆಯೇಶಾಳನ್ನು ಮದುವೆಯಾಗಿಲ್ಲ ಎಂದು ಆರಂಭದಲ್ಲಿ ಶೋಯಿಬ್ ಹೇಳಿದ್ದರು. ನಂತರ ಆಕೆಗೆ ಡೈವೋರ್ಸ್ ನೀಡಿದರು. ಇಲ್ಲಿ ಯಾವುದೇ ಅಧಿಕೃತ ವಿಚ್ಛೇದನ ನಡೆಯಲಿಲ್ಲ. ಆದರೂ ನಾನು ಹೆಸರಿಸಿರುವ 14 ಮಂದಿ ಆರೋಪಿಗಳು ವಿಚ್ಛೇದನ ಪ್ರಕ್ರಿಯೆಗಳು ಮುಕ್ತಾಯಗೊಂಡಿವೆ ಎಂದು ಹೇಳಿಕೆ ನೀಡಿದರು. ಇದರಿಂದಾಗಿ ಸಾರ್ವಜನಿಕರು ಅದರಲ್ಲೂ ಮುಸ್ಲಿಮರು ಗೊಂದಲಕ್ಕೊಳಗಾಗಿದ್ದಾರೆ ಮತ್ತು ಅವರ ಧಾರ್ಮಿಕ ಭಾವನೆಗಳಿಗೆ ಅವಮಾನ ಮಾಡಲಾಗಿದೆ ಎಂದು ಕಸಾರಿ ಆರೋಪಿಸಿದ್ದಾರೆ.