100ಕ್ಕೂ ಹೆಚ್ಚು ವರ್ಷ ಬದುಕಲು ಬರಲಿದೆ ಮ್ಯಾಜಿಕ್ ಮಾತ್ರೆ!
ಲಂಡನ್, ಗುರುವಾರ, 13 ಮೇ 2010( 12:43 IST )
ND
ನಂಬಿದರೆ ನಂಬಿ ಬಿಟ್ಟರೆ ಬಿಡಿ. ಈಗೆಲ್ಲಾ 100 ವರ್ಷ ಆರೋಗ್ಯವಾಗಿ ಬದುಕಬೇಕೆಂಬ ಕನಸು ಈಡೇರುವುದೆಂದರೆ ಅದು ದೂರದ ಮಾತೇ ಎಂಬ ಕಲ್ಪನೆ ನಿಮಗಿದ್ದರೆ ಬಿಟ್ಟುಬಿಡಿ. ವಿಜ್ಞಾನಿಗಳೀಗ ಹೊಸತೊಂದು ಮ್ಯಾಜಿಕ್ ಗುಳಿಗೆಯನ್ನು ತಯಾರಿಸುತ್ತಿದ್ದು, ಆ ಮಾತ್ರೆಯನ್ನು ತಿಂದರೆ 100ಕ್ಕಿಂತಲೂ ಹೆಚ್ಚು ವರ್ಷ ಆರೋಗ್ಯವಾಗಿ ಬದುಕಿರಬಹುದಂತೆ!
ಹೌದು. ಈಗಾಗಲೇ ವೃದ್ಧಾಪ್ಯದ ಬಗ್ಗೆ ಸಾಕಷ್ಟು ಸಂಶೋಧನೆಗಳನ್ನು ನಡೆಸಿದ ನ್ಯೂಯಾರ್ಕಿನ ಅಲ್‌ಬರ್ಟ್ ಐನ್‌ಸ್ಟೀನ್ ಕಾಲೇಜ್ ಆಫ್ ಮೆಡಿಸಿನ್‌ನ ಪ್ರೊ|ನೀರ್ ಬರ್ಝಿಲೈ ಎಂಬವರು ಮುಂದಿನ 18 ತಿಂಗಳಲ್ಲಿ ಈ ಮ್ಯಾಜಿಕ್ ಮಾತ್ರೆಗಳು ಮಾರುಕಟ್ಟೆಗೆ ಲಗ್ಗೆಯಿಡಲಿವೆ ಎಂದು ತಿಳಿಸಿದ್ದಾರೆ.
ಪ್ರೊ| ನೀರ್ ಬರ್ಝಿಲೈ ಅವರು ಹೇಳುವಂತೆ, ದೇಹಕ್ಕೆ ಅಗತ್ಯವಿರುವಷ್ಟು ಉತ್ತಮ ಕೊಲೆಸ್ಟೆರಾಲ್, ಹೈಡೆನ್ಸಿಟಿ ಲಿಪೋಪ್ರೋಟೀನ್ (ಎಚ್‌ಡಿಎಲ್) ಇದ್ದರೆ ರೋಗಗಳ ಬಾಧೆ ಇರುವುದಿಲ್ಲ. ಅಲ್ಜೈಮರ್‌ನಂತಹ ಮರೆಗುಳಿ ಕಾಯಿಲೆಯನ್ನೂ ಈ ಅಂಶಗಳು ಹೊಡೆದೋಡಿಸುವುದರಿಂದ ವೃದ್ಧಾಪ್ಯದಲ್ಲಿ ಕಾಡುವ ಸಾಮಾನ್ಯ ಲಕ್ಷಣಗಳೂ ಕಾಣಿಸುವುದಿಲ್ಲವಂತೆ. ಕ್ಯಾನ್ಸರ್, ಮಧುಮೇಹದಂತಹ ಕಾಯಿಲೆಯ ಬಗ್ಗೆಯೂ ತಲೆಕೆಡಿಸದೆ ಇರಈ ಅಂಶವನ್ನು ಆಧರಿಸಿ ಮ್ಯಾಜಿಕ್ ಮಾತ್ರೆ ತಯಾರಿಸಲಾಗಿದೆ. ಗ್ಲೋಬಲ್ ಫಾರ್ಮಾಸ್ಯುಟಿಕಲ್ ಸಂಸ್ಥೆಗಳಾದ ಮೆರ್ಕ್ ಹಾಗೂ ರೋಚೆಗಳು ಈಗಾಗಲೇ ಈ ಔಷಧಿಯ ತಯಾರಿಯಲ್ಲಿದ್ದು, ದೇಹದಲ್ಲಿರುವ ಎಚ್‌ಡಿಎಲ್ ಅಂಶ ಏರಿಸುವುದನ್ನೇ ಪ್ರಮುಖ ಅಂಶ ಎಂದು ಹೇಳಿವೆ.
ಈ ಮಾತ್ರೆಯನ್ನು 40ರಿಂದ 50 ವರ್ಷ ವಯಸ್ಸಿನೊಳಗಿನ ವ್ಯಕ್ತಿಗಳು ಸೇವಿಸಿದರೆ, 100ಕ್ಕೂ ಹೆಚ್ಚು ಕಾಲ ಬದುಕಬಹುದು ಎಂದು ಹೇಳಲಾಗಿದೆ. ಆದರೆ 100ಕ್ಕೂ ಹೆಚ್ಚು ಕಾಲ ಬದುಕಿದರೆ ಅನೇಕ ಸಾಂವಿಧಾನಿಕ, ಸಾಮಾಜಿಕ ಸಮಸ್ಯೆಗಳು ಎದುರಾಗಬಹುದು ಎಂಬುದೂ ಸತ್ಯ, ಪೆನ್ಶನ್, ಸಾಮಾಜಿಕ ಭದ್ರತೆಯೂ ತಲೆದೋರಬಹುದು. ಆದರೆ ಆರೋಗ್ಯದ ಸಮಸ್ಯೆಯಂತೂ ಎದುರಾಗುವುದಿಲ್ಲ ಎಂದು ಈ ಮ್ಯಾಜಿಕ್ ಮಾತ್ರೆಯ ಸಂಶೋಧಕರು ಹೇಳುತ್ತಿದ್ದಾರೆ. ಆದರೆ ಮಾತ್ರೆಯ ಬೆಲೆ ಎಷ್ಟು ಎಂದು ಕೇಳಬೇಡಿ. ಈವರೆಗೂ ಆ ಗುಟ್ಟನ್ನು ಯಾರೂ ರಟ್ಟು ಮಾಡಿಲ್ಲ!