ಬಳ್ಳಾರಿ ಸೇರಿದಂತೆ ರಾಜ್ಯದಲ್ಲಿ ಎಲ್ಲೂ ಅಕ್ರಮ ಗಣಿಗಾರಿಕೆ ನಡೆಯುತ್ತಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿಕೆ ನೀಡಿದ ಬೆನ್ನಲ್ಲೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ರಾಜ್ಯದಲ್ಲಿ ಅಕ್ರಮ ಕಬ್ಬಿಣ ಅದಿರು ಗಣಿಗಾರಿಕೆಯಲ್ಲಿ ತೊಡಗಿದ 18 ಗಣಿಗಳ ಪರವಾನಗಿ ಅಮಾನತಿಗೆ ಶಿಫಾರಸು ಮಾಡಿದೆ. ಅಲ್ಲದೆ, 46 ಗಣಿಗಳ ಕಾನುನು ಬದ್ಧವಾಗಿದೆಯೋ ಎಂದು ಸ್ಪಷ್ಟನೆ ಕೇಳಿ ನೋಟೀಸ್ ಜಾರಿ ಮಾಡಿದೆ.
ಇಂಡಿಯನ್ ಬ್ಯೂರೋ ಆಫ್ ಮೈನ್ಸ್ (ಐಬಿಎಂ), ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ), ರಾಷ್ಟ್ರೀಯ ದೂರಗ್ರಾಹಿ ಏಜೆನ್ಸಿ (ಎನ್‌ಆರ್ಎಸ್ಎ) ಅಧಿಕಾರಿಗಳ ತಂಡ ರಾಜ್ಯದಲ್ಲಿ ಗಣಿಗಳ ಸಮೀಕ್ಷೆ ನಡೆಸುತ್ತಿದೆ. ವಿಚಿತ್ರವೆಂದರೆ, ಅಧಿಕೃತ ದಾಖಲೆಗಳಲ್ಲಿ ಸ್ಥಗಿತಗೊಂಡಿದೆ ಎಂದು ತೋರಿಸಲಾಗಿರುವ 21 ಗಣಿಗಳ ಪೈಕಿ 11ರಲ್ಲಿ ಗಣಿಗಾರಿಕೆ ನಡೆದಿದ್ದು, ಅಕ್ರಮವಾಗಿ 3.6 ಲಕ್ಷ ಟನ್ ಅದಿರು ತೆಗೆಯಲಾಗಿದೆ!
ಅಮಾನತಿಗೆ ಶಿಫಾರಸಾಗಿರುವ 18 ಸಂಸ್ಥೆಗಳು ನಿಯಮವನ್ನು ಉಲ್ಲಂಘಿಸಿ ಅಕ್ರಮವಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ಅದಿರನ್ನು ರಫ್ತು ಮಾಡಿದ ಆರೋಪಕ್ಕೆ ಗುರಿಯಾಗಿವೆ. ಕಳೆದೊಂದು ತಿಂಗಳಿಂದ ಐಬಿಎಂ ನೇತೃತ್ವದ ಜಂಟಿ ಕಾರ್ಯಾಚರಣೆ ಪಡೆ 67 ಗಣಿಗಳನ್ನು ಪರಿಶೀಲಿಸಿದ್ದು, ಇವುಗಳ ಪೈಕಿ 46 ಗಣಿಗಳಲ್ಲಿ ನಡೆದಿರುವುದು ಕ್ರಮಬದ್ಧವಾಗಿದೆಯೇ ಎಂದು ವಿವರಣೆ ಕೇಳಿ ನೋಟೀಸು ನೀಡಿದೆ.
ವರದಿಯ ಪ್ರಕಾರ, ಬಳ್ಳಾರಿ ಜಿಲ್ಲೆಯೊಂದರಲ್ಲೇ 95 ಗಣಿಗಳಿದ್ದು, ಇದರಲ್ಲಿ ಮೊದಲ 26 ಗಣಿಗಳ ಪರವಾನಗಿ ರದ್ದುಪಡಿಸಲು ಶಿಫಾರಸು ಮಾಡಲಾಗಿದೆ. ಅಕ್ರಮ ಗಣಿಗಾರಿಕೆಯ ಆರೋಪದ ಹಿನ್ನೆಲೆಯಲ್ಲಿ ಗಣಿ ಭೂ ವಿಜ್ಞಾನ ಖಾತೆ ಸಚಿವ ಬಿ.ಕೆ.ಹಂಡಿಕ್ ಜಂಟಿ ಕಾರ್ಯಪಡೆ ರಚಿಸಿದ್ದಾರೆ. ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧ ಸಿಬಿಐ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಅವರಿಗೆ ಎರಡೆರಡು ಪತ್ರ ಬರೆದು ಒತ್ತಾಯಿಸಿದ್ದಾರೆ. ಆದರೂ, ಮುಖ್ಯಮಂತ್ರಿ ಮಾತ್ರ ಕೇಂದ್ರ ಸಚಿವರ ಬೇಡಿಕೆಯನ್ನು ತಿರಸ್ಕರಿಸಿ ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿಲ್ಲ ಎಂದಿದ್ದಾರೆ.