ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಮರನಾಥ, ವೈಷ್ಣೋದೇವಿ ಯಾತ್ರೆ ಮಾಡ್ತೀರಾ? ಹಣ ಇದ್ಯಾ?
(Mata Vaishnodevi | Amarnath Yatra | Jammu and Kashmir | India)
ಹಜ್ ಯಾತ್ರೆಗೆಂದು ಹೋಗುವ ಮುಸ್ಲಿಂ ಧರ್ಮೀಯರಿಗೆ ಕೋಟ್ಯಂತರ ರೂಪಾಯಿಗಳನ್ನು ವ್ಯಯಿಸುವ ಸರಕಾರ, ಅಮರನಾಥ ಯಾತ್ರಾರ್ಥಿಗಳಿಗೂ ಸಹಾಯಧನ ನೀಡಬೇಕೆಂದು ಆಗ್ರಹಿಸುತ್ತಿರುವವರಿಗೆ ತೀರಾ ನಿರಾಸೆಯ ಸುದ್ದಿಯಿದು. ಇನ್ನು ಮುಂದೆ ಅಮರನಾಥ ಮತ್ತು ಮಾತಾ ವೈಷ್ಣೋದೇವಿ ಪುಣ್ಯಕ್ಷೇತ್ರಗಳ ದರ್ಶನಕ್ಕೆ ತೆರಳುವವರು ಕಿಸೆ ಭರ್ತಿ ಮಾಡಿಕೊಂಡು ತೆರಳಬೇಕಾಗಿದ್ದು, ಪ್ರವೇಶ ಧನವನ್ನೂ ನೀಡಬೇಕಾಗಿದೆ.
ಇದನ್ನು ಪ್ರಕಟಿಸಿರುವುದು ದೇಶದಲ್ಲೇ ವಿಶೇಷ ಸ್ಥಾನಮಾನ ಅನುಭವಿಸುತ್ತಿರುವ ಜಮ್ಮು-ಕಾಶ್ಮೀರ ಸರಕಾರ. ಪವಿತ್ರ ಮಾತಾ ವೈಷ್ಣೋದೇವಿ ಮತ್ತು ಅಮರನಾಥ ಯಾತ್ರೆಗೆಂದು ರಾಜ್ಯ ಪ್ರವೇಶಿಸುವ ಯಾತ್ರಾರ್ಥಿಗಳ ವಾಹನಗಳು 2,000 ರೂಪಾಯಿಗಳ ಪ್ರವೇಶ ಧನವನ್ನು ನೀಡಬೇಕು ಎಂದು ಆದೇಶ ಹೊರಡಿಸಿವೆ.
ಮಾತಾ ವೈಷ್ಣೋದಿವಿ ಯಾತ್ರೆ ಕೈಗೊಳ್ಳುವ ವಾಹನಗಳು ಮೂರು ದಿನಗಳ ಅವಧಿಗೆ 2,000 ರೂಪಾಯಿ ಪ್ರವೇಶ ಧನವನ್ನು ತೆರಬೇಕಾಗುತ್ತದೆ. ನಂತರದ ಪ್ರತಿದಿನಕ್ಕೂ ತಲಾ 2,000 ರೂಪಾಯಿಗಳನ್ನು ಮತ್ತೆ ಪಾವತಿ ಮಾಡಬೇಕಾಗುತ್ತದೆ ಎಂದು ಜಮ್ಮು-ಕಾಶ್ಮೀರ ಸರಕಾರದ ಮೋಟಾರು ವಾಹನ ತೆರಿಗೆ ಕಾಯ್ದೆ 1957ರ ಪ್ರಕಾರ ಆದೇಶ ಹೊರಡಿಸಲಾಗಿದೆ.
ಇದೇ ರೀತಿ ಅಮರನಾಥ ಯಾತ್ರೆಗೆಂದು ಬರುವ ವಾಹನಗಳು 2,000 ರೂಪಾಯಿಗಳನ್ನು ತಮ್ಮ ಪ್ರವೇಶದ ಹಂತದಲ್ಲೇ ನೀಡಬೇಕು. 2,000 ರೂ. ನೀಡಿದರೆ ಏಳು ದಿನಗಳ ಕಾಲ ರಾಜ್ಯದಲ್ಲಿ ತಂಗಲು ಅವಕಾಶವಿದೆ. ನಂತರದ ಅವಧಿಗೆ ಪ್ರತಿ ದಿನವೊಂದಕ್ಕೆ ತಲಾ 2,000 ರೂಪಾಯಿಗಳನ್ನು ಹೆಚ್ಚುವರಿಯಾಗಿ ನೀಡಬೇಕು.
ಜುಲೈ ಒಂದರಿಂದ ಅಮರನಾಥ ಯಾತ್ರೆ ಆರಂಭವಾಗಲಿದ್ದು, ಪ್ರಸಕ್ತ ದೇಶದಾದ್ಯಂತದಿಂದ 61,000ಕ್ಕೂ ಹೆಚ್ಚು ಯಾತ್ರಾರ್ಥಿಗಳು ತಮ್ಮ ಹೆಸರನ್ನು ಯಾತ್ರೆಗಾಗಿ ನೋಂದಣಿ ಮಾಡಿಸಿಕೊಂಡಿದ್ದಾರೆ.
ಇವರಲ್ಲಿ ಸುಮಾರು 33,000 ಮಂದಿ ಪಹಲ್ಗಾಮ್-ಅಮರನಾಥ ಮಾರ್ಗದಲ್ಲಿ ಪುಣ್ಯಕ್ಷೇತ್ರ ದರ್ಶನ ಕೈಗೊಳ್ಳಲಿದ್ದರೆ, 28,000 ಮಂದಿ ಬಾಲ್ತಾಲ್-ಅಮರನಾಥ ಮಾರ್ಗದ ಮೂಲಕ ಗಮ್ಯ ತಲುಪಲಿದ್ದಾರೆ.