ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತಮಿಳು ಸಮ್ಮೇಳನಕ್ಕೆ ಯಡಿಯೂರಪ್ಪ | ವಕೀಲರಿಂದ ಉಪವಾಸ
(B S Yeddyurappa | Dorai Murugan | World Classical Tamil Conference | Tamil)
ಇಲ್ಲಿ ತಮಿಳುನಾಡಿಗೆ ಸಂಬಂಧಿಸಿದ ಎರಡು ಸುದ್ದಿಗಳಿವೆ. ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ತಮಿಳು ಸಮ್ಮೇಳನಕ್ಕೆ ಬರುವಂತೆ ತಮಿಳುನಾಡು ಸರಕಾರವು ಅಧಿಕೃತ ಆಹ್ವಾನ ನೀಡಿರುವುದು ಮೊದಲನೆಯದ್ದು. ತಮಗೆ ತಮಿಳಿನಲ್ಲೇ ವಾದಿಸಲು ಅವಕಾಶ ನೀಡಬೇಕೆಂದು ಕೆಲ ವಕೀಲರು ಮದ್ರಾಸ್ ಹೈಕೋರ್ಟ್ ಎದುರು ಉಪವಾಸ ಸತ್ಯಾಗ್ರಹ ಆರಂಭಿಸಿರುವುದು ಮತ್ತೊಂದು.
ಇದೇ ತಿಂಗಳಿನ 23ರಿಂದ 27ರವರೆಗೆ ತಮಿಳುನಾಡಿನ ಕೊಯಂಬತ್ತೂರಿನಲ್ಲಿ ನಡೆಯಲಿರುವ ಶಾಸ್ತ್ರೀಯ ತಮಿಳು ಜಾಗತಿಕ ಸಮ್ಮೇಳನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಆಹ್ವಾನಿಸಲಾಗಿದೆ.
ಬುಧವಾರ ಬೆಂಗಳೂರಿಗೆ ಆಗಮಿಸಿರುವ ತಮಿಳುನಾಡು ಕಾನೂನು ಸಚಿವ ದೊರೈ ಮುರುಗನ್, ಸಂಪ್ರದಾಯದಂತೆ ಶಾಲು ಹೊದೆಸಿ ಆಹ್ವಾನ ಪತ್ರಿಕೆ ನೀಡಿ ಸಮ್ಮೇಳನಕ್ಕೆ ಬರುವಂತೆ ಮುಖ್ಯಮಂತ್ರಿಯವರನ್ನು ಕರೆದಿದ್ದಾರೆ.
ತಮಿಳು ವಕೀಲರಿಂದ ಉಪವಾಸ.... ಮದ್ರಾಸ್ ಹೈಕೋರ್ಟ್ ಸೇರಿದಂತೆ ತಮಿಳುನಾಡಿನ ನ್ಯಾಯಾಲಯಗಳಲ್ಲಿ ತಮಿಳನ್ನು ಅಧಿಕೃತ ಭಾಷೆ ಎಂದು ತಮಿಳುನಾಡು ವಿಧಾನಸಭೆ ನಾಲ್ಕು ವರ್ಷಗಳ ಹಿಂದೆಯೇ ಅಂಗೀಕರಿಸಿದ್ದರೂ, ರಾಷ್ಟ್ರಪತಿಯವರು ಇನ್ನೂ ಕೇಂದ್ರ ಕಾನೂನು ಸಚಿವಾಲಯಕ್ಕೆ ಯಾವುದೇ ಉತ್ತರ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಸುಮಾರು ಆರು ಮಂದಿ ವಕೀಲರು ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ತಮಿಳುನಾಡಿನ ನ್ಯಾಯಾಲಯಗಳಲ್ಲಿ ತಮಿಳು ಭಾಷೆಯಲ್ಲೇ ವಾದಿಸಲು ಅವಕಾಶ ನೀಡಬೇಕೆಂಬುದು ಅವರ ಬೇಡಿಕೆ. ಇದು ನಮ್ಮ ಮೂಲಭೂತ ಹಕ್ಕಾಗಿದೆ. ನಮಗೆ ಇತರ ಭಾಷಾ ಜ್ಞಾನ ಕಡಿಮೆಯಿರಬಹುದು, ಹಾಗೆಂದು ನಾವು ಕಾನೂನು ಜ್ಞಾನ ಇಲ್ಲದವರಲ್ಲ. ಇಂಗ್ಲೀಷ್ ಸುಲಲಿತವಾಗಿ ಬಲ್ಲವರಿಗೆ ಕಾನೂನು ಜ್ಞಾನ ಹೆಚ್ಚಿರಬೇಕೆಂದೇನೂ ಇಲ್ಲ ಎಂದು ಅವರು ಹೇಳುತ್ತಿದ್ದಾರೆ.
ನಟರಾಜನ್ ಎಂಬ ವಕೀಲ ಕಳೆದ 15 ವರ್ಷಗಳಿಂದ ವಕೀಲರಾಗಿದ್ದಾರೆ. ಆದರೆ ಎದುರಾಳಿ ವಕೀಲರು ಆಂಗ್ಲ ಭಾಷೆಯಲ್ಲಿ ಅತ್ಯುತ್ತಮ ಹಿಡಿತ ಹೊಂದಿರುವ ಕಾರಣ ಹಲವು ಪ್ರಕರಣಗಳಲ್ಲಿ ಇವರು ಸೋಲುಣ್ಣುತ್ತಿದ್ದಾರೆ. ಇದೇ ಕಾರಣದಿಂದ ಹಲವು ಕೇಸುಗಳು ಕೂಡ ಇವರ ಬಳಿ ಸುಳಿಯುತ್ತಿಲ್ಲ. ಇಂತಹ ಸಮಸ್ಯೆಗಳು ಹಲವು ವಕೀಲರದ್ದು. ಇದು ಕೊನೆಗೊಳ್ಳಬೇಕು ಎನ್ನುವುದು ವಕೀಲರ ಬೇಡಿಕೆ.
ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠದಲ್ಲಿ ಈ ಆರು ಮಂದಿ ವಕೀಲರು ಪ್ರತಿಭಟನೆ ನಡೆಸುತ್ತಿರುವುದು. ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿಯವರಿಗೆ ನಿಜಕ್ಕೂ ಆಸಕ್ತಿಯಿದ್ದರೆ, ಕೇಂದ್ರದಿಂದ ಅನುಮತಿ ಪಡೆಯುವುದು ಕಷ್ಟವಲ್ಲ ಎನ್ನುವುದು ಅವರ ಅನಿಸಿಕೆ. ಇನ್ನೇನು ತಮಿಳು ಸಮ್ಮೇಳನ ನಡೆಯಲಿರುವ ಹೊತ್ತಿನಲ್ಲಿ ಇಂತಹದ್ದೊಂದು ಸತ್ಯಾಗ್ರಹ ನಡೆಯುತ್ತಿರುವುದು ಕರುಣಾನಿಧಿಗೆ ತೀವ್ರ ಮುಜುಗರ ತಂದಿರುವುದಂತೂ ಸ್ಪಷ್ಟ.