ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಾಜೀವ್ ಗಾಂಧಿ 'ಡೀಲ್' ಆರೋಪ ಶುದ್ಧ ಸುಳ್ಳು: ಕಾಂಗ್ರೆಸ್ (Congress | Rajiv Gandhi | Union Carbide | Warren Anderson)
Bookmark and Share Feedback Print
 
ಭೋಪಾಲ್ ಅನಿಲ ದುರಂತದ ನಂತರ ಯೂನಿಯನ್ ಕಾರ್ಬೈಡ್ ಕಂಪನಿಯ ಮುಖ್ಯಸ್ಥ ವಾರೆನ್ ಆಂಡರ್ಸನ್ ಅವರಿಗೆ ಯಾವುದೇ ತೊಂದರೆ ಮಾಡುವುದಿಲ್ಲ ಎಂದು ರಾಜೀವ್ ಗಾಂಧಿ ಸರಕಾರದ ಜತೆ ಭಾರತಕ್ಕೆ ಭೇಟಿ ನೀಡುವ ಮೊದಲೇ ಒಪ್ಪಂದ ನಡೆಸಲಾಗಿತ್ತು ಎಂಬ ಆರೋಪಗಳು ತೀರಾ ಅಪಮಾನಕಾರಿ ಎಂದು ಕಾಂಗ್ರೆಸ್ ಖಾರವಾಗಿ ಪ್ರತಿಕ್ರಿಯಿಸಿದೆ.

ಪ್ರತ್ಯಕ್ಷ ಅಥವಾ ಪರೋಕ್ಷ ಸಹಕಾರ ಕುರಿತ ಇಂತಹ ಆರೋಪಗಳು ಸಂಪೂರ್ಣ ಹಾಸ್ಯಾಸ್ಪದ ಮತ್ತು ಅಪಮಾನಕಾರಿ ಉದ್ದೇಶದಿಂದ ಕೂಡಿದ್ದು, ಈ ಸಂಬಂಧ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿ ವಾಷಿಂಗ್ಟನ್‌ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಪಿ.ವಿ. ನರಸಿಂಹ ರಾವ್ ಅವರಡಿಯಲ್ಲಿನ ಗೃಹ ಸಚಿವಾಲಯವು ದುರಂತದ ನಂತರ ಆಂಡರ್ಸನ್ ಭಾರತಕ್ಕೆ ಬರುವ ಮೊದಲು ಹಾದಿ ಸುಗಮಗೊಳಿಸುವ ಭರವಸೆ ನೀಡಿತ್ತು ಎಂಬುದನ್ನು 1984ರ ಭೋಪಾಲ್ ಅನಿಲ ದುರಂತದ ಸಂದರ್ಭದಲ್ಲಿ ವಿದೇಶಾಂಗ ಕಾರ್ಯದರ್ಶಿಯಾಗಿದ್ದ ಎಂ.ಕೆ. ರಸ್ಗೋತ್ರಾ ಬಹಿರಂಗಪಡಿಸುವ ಮೂಲಕ ಪ್ರಕರಣಕ್ಕೆ ಮತ್ತೊಂದು ತಿರುವು ನೀಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಸಿಂಘ್ವಿ, ಆಗಿನ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರವು ಆಂಡರ್ಸನ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂಬ ಭರವಸೆಯನ್ನು ಅಮೆರಿಕಾಕ್ಕೆ ನೀಡಿತ್ತು ಎಂಬ ನವದೆಹಲಿಯಲ್ಲಿನ ಅಮೆರಿಕಾ ರಾಯಭಾರ ಕಚೇರಿಯ ಆಗಿನ ಉಪ ರಾಜತಾಂತ್ರಿಕ ಗೋರ್ಡನ್ ಸ್ಟ್ರೀಬ್ ಮತ್ತು ರಸ್ಗೋತ್ರಾ ಆರೋಪಗಳು ಸಂಪೂರ್ಣ ರಾಜಕೀಯ ಎಂದರು.

ಒಬ್ಬ ಪೊಲೀಸ್ ಕಾನ್ಸ್‌ಟೇಬಲ್ ನಡೆಸುವಂತೆ ಭಾರತದ ಪ್ರಧಾನ ಮಂತ್ರಿ ಡೀಲ್‌ಗಳನ್ನು ಮಾಡಲಾರರು. ಖಂಡಿತಾ ಇಲ್ಲಿ ಯಾವುದೇ ಸಂಬಂಧಗಳಿಲ್ಲ. ಆ ಮನುಷ್ಯ ಈ ವಿಚಾರವನ್ನು 25 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಯಾಕೆ ಹೇಳುತ್ತಿದ್ದಾರೆ? ಇಂತಹ ಆರೋಪಗಳನ್ನು ಮಾಡಲು ಅವರಿಗೆ ಬೇರೆ ಸಮಯ ಇರಲಿಲ್ಲವೇ? ಈಗ ಮಾಡಲಾಗುತ್ತಿರುವ ಆರೋಪಗಳನ್ನೇ ಆಧಾರವಾಗಿಟ್ಟುಕೊಂಡು ರಾಜಕೀಯ ಪಕ್ಷಗಳು ಅದನ್ನು ಯಾಕೆ ದೊಡ್ಡ ವಿಚಾರವನ್ನಾಗಿ ಮಾಡುತ್ತಿವೆ? ಒಂದು ವೇಳೆ ಸಾಕ್ಷ್ಯಗಳಿದ್ದಿದ್ದಿದ್ದರೆ ಈ ಹಿಂದೆಯೇ ಆರೋಪಗಳನ್ನು ಮಾಡಬೇಕಾಗಿತ್ತು ಎಂದು ರಾಜೀವ್ ಗಾಂಧಿ ಸರಕಾರವನ್ನು ಸಿಂಘ್ವಿ ಸಮರ್ಥಿಸಿಕೊಂಡಿದ್ದಾರೆ.

ಭಾರತ-ಯಾಲೆ ವಾರ್ಷಿಕ ಸಂಸದೀಯ ನಾಯಕತ್ವ ಕಾರ್ಯಕ್ರಮಕ್ಕಾಗಿ ಭಾರತದ ಸಂಸತ್ ಸದಸ್ಯರ ಸರ್ವಪಕ್ಷದ ನಿಯೋಗದ ನಾಯಕತ್ವ ವಹಿಸಿರುವ ಸಿಂಘ್ವಿ ಪ್ರಸಕ್ತ ವಾಷಿಂಗ್ಟನ್‌ನಲ್ಲಿದ್ದಾರೆ.

ಸಂಬಂಧಪಟ್ಟ ಸುದ್ದಿಯಿದು:
** ಆಂಡರ್ಸನ್ ಬಿಡುಗಡೆಗೆ ರಾಜೀವ್ ಗಾಂಧಿ ಡೀಲ್?
ಸಂಬಂಧಿತ ಮಾಹಿತಿ ಹುಡುಕಿ