ಭಾರತ ಮತ್ತು ಪಾಕಿಸ್ತಾನಗಳ ನಡುವಿನ ವಿಶ್ವಾಸ ಕೊರತೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಎರಡೂ ದೇಶಗಳ ವಿದೇಶಾಂಗ ಕಾರ್ಯದರ್ಶಿಗಳು ಇಸ್ಲಾಮಾಬಾದ್‌ನಲ್ಲಿ ಜೂನ್ 24ರಂದು ಮಾತುಕತೆ ನಡೆಸಲಿದ್ದಾರೆ.
ತಿಂಫುವಿನ ಮಹತ್ವದ ಮಾತುಕತೆಯ ಸರಿಸುಮಾರು ಏಳು ವಾರಗಳ ಬಳಿಕ ಇದು ನಡೆಯುತ್ತಿದ್ದು, ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿ ಸಲ್ಮಾನ್ ಬಶೀರ್ ಅವರನ್ನು ಭೇಟಿಯಾಗಲು ನಿರುಪಮಾ ರಾವ್ ತೆರಳಲಿದ್ದಾರೆ.
PTI
ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮಾತುಕತೆ ನಡೆಯಲಿದೆ ಎಂದು ಪ್ರಕಟಿಸಿದ ವಿದೇಶಾಂಗ ಸಚಿವಾಲಯವು, ರಾವ್ ಪಾಕಿಸ್ತಾನ ವಿದೇಶಾಂಗ ಸಚಿವ ಶಾಹ್ ಮೆಹಮೂದ್ ಖುರೇಷಿಯವರನ್ನು ಕೂಡ ಭೇಟಿಯಾಗಲಿರುವುದಾಗಿ ತಿಳಿಸಿದೆ.
ಏಪ್ರಿಲ್ 29ರಂದು ತಿಂಫುವಿನಲ್ಲಿ ಭಾರತ ಮತ್ತು ಪಾಕಿಸ್ತಾನಗಳ ಪ್ರಧಾನ ಮಂತ್ರಿಗಳು ಪರಸ್ಪರ ಮಾತುಕತೆ ನಡೆಸಿದ ಸಂದರ್ಭದಲ್ಲಿ, ಎರಡೂ ದೇಶಗಳ ನಡುವಿನ ಪರಸ್ಪರ ನಂಬಿಕೆ ಮರುನಿರ್ಮಾಣಕ್ಕೆ ಅಗತ್ಯವಿರುವ ಕಾರ್ಯಗಳನ್ನು ಕೈಗೊಳ್ಳುವಂತೆ ವಿದೇಶಾಂಗ ಸಚಿವರು ಮತ್ತು ವಿದೇಶಾಂಗ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದರು.
ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಪಾಕ್ ಪ್ರಧಾನಿ ಯೂಸುಫ್ ರಾಜಾ ಗಿಲಾನಿಯವರು ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಸುಧಾರಣೆಗೆ ಒತ್ತು ನೀಡಲು ನಿರ್ಧರಿಸಿದ್ದರು. ಇದೇ ಸಂಬಂಧ ಜುಲೈ 15ರಂದು ಭಾರತದ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಮತ್ತು ಪಾಕ್ ವಿದೇಶಾಂಗ ಸಚಿವ ಶಾಹ್ ಮೆಹಮೂದ್ ಖುರೇಷಿ ಮಾತುಕತೆ ನಡೆಸಲಿದ್ದು, ಅದಕ್ಕೂ ಮೊದಲು ಎರಡು ರಾಷ್ಟ್ರಗಳ ವಿದೇಶಾಂಗ ಕಾರ್ಯದರ್ಶಿಗಳು ತಳಹದಿ ರೂಪಿಸುವಂತೆ ಅವರು ಸೂಚನೆ ನೀಡಿದ್ದರು.
ನಿರುಪಮಾ ರಾವ್ ಭೇಟಿಯ ಕೆಲವೇ ದಿನಗಳ ನಂತರ ಗೃಹ ಸಚಿವ ಪಿ. ಚಿದಂಬರಂ ಕೂಡ ಇಸ್ಲಾಮಾಬಾದ್‌ಗೆ ಭೇಟಿ ನೀಡಲಿದ್ದಾರೆ. ಸಾರ್ಕ್ ರಾಷ್ಟ್ರಗಳ ಗೃಹ ಸಚಿವರುಗಳ ಸಭೆಗಾಗಿ ಅವರು ತೆರಳುತ್ತಿದ್ದಾರೆ.
ಜೂನ್ 26ರಂದು ಸಾರ್ಕ್ ಸಭೆ ನಡೆಯಲಿದ್ದು, ಆ ಸಂದರ್ಭದಲ್ಲಿ ಪಾಕ್ ಆಂತರಿಕ ಸಚಿವ ರೆಹಮಾನ್ ಮಲಿಕ್ ಜತೆ ಚಿದಂಬರಂ ಮಾತುಕತೆ ನಡೆಸಲಿದ್ದಾರೆ.