ಪ್ರೇಮಿಸುತ್ತಿದ್ದ ಯುವಕ-ಯುವತಿಯನ್ನು ಹರ್ಯಾಣದಲ್ಲಿ ಸ್ವತಃ ಹುಡುಗಿಯ ತಂದೆ-ಸಹೋದರರೇ ಸೇರಿಕೊಂಡು ಅಮಾನವೀಯ ರೀತಿಯಲ್ಲಿ ನೇಣಿಗೆ ಹಾಕುವ ಮೂಲಕ ಹತ್ಯೆಗೈದಿದ್ದಾರೆ. ಮತ್ತೊಂದು ಘಟನೆ ನಡೆದಿರುವುದು ದೆಹಲಿಯಲ್ಲಿ. ಮನೆಯವರ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿದ್ದವರನ್ನು ಕೊಂದು ಹಾಕಲಾಗಿದೆ.
ಹರ್ಯಾಣಾದ ಬೀವಾನಿ ಸಮೀಪದ ನಿಮ್ರಿವಾಲಿ ಗ್ರಾಮದಲ್ಲಿ ಈ ಘಟನೆ ನಡೆದಿರುವುದು. ಮೋನಿಕಾ (18) ಮತ್ತು ಆಕೆಯ ಪ್ರಿಯಕರ ರಿಂಕು (19) ಎಂಬವರನ್ನು ಯುವತಿಯ ತಂದೆ, ಸಹೋದರ, ಚಿಕ್ಕಪ್ಪ ಮತ್ತು ಇತರ ಸಂಬಂಧಿಕರು ಸೇರಿ ಹತ್ಯೆಗೈದಿದ್ದಾರೆ.
ಕಳೆದ ಹಲವು ಸಮಯಗಳಿಂದ ಪ್ರೀತಿಸುತ್ತಿದ್ದ ಜೋಡಿಯನ್ನು ಬೇರ್ಪಡಿಸಲು ಸಾಧ್ಯವಾಗದೆ ಕೊನೆಗೆ ಮನೆಯವರು ಈ ಕ್ರೂರ ನಿರ್ಧಾರಕ್ಕೆ ಬಂದಿದ್ದರು. ಪೊಲೀಸರ ಪ್ರಕಾರ ಇದು ಗೌರವ ಹತ್ಯೆ. ಸ್ವತಃ ಪೋಷಕರೇ ಯುವ ಜೋಡಿಯನ್ನು ಥಳಿಸಿದ ನಂತರ ನೇಣಿಗೆ ಹಾಕಿದ್ದಾರೆ.
ರಿಂಕು ಅಂಕಲ್ ಕ್ರಿಶನ್ ಕುಮಾರ್ ನೀಡಿದ ದೂರಿನಂತೆ ನಾವು ಯುವತಿಯ ಕುಟುಂಬದವರ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ. ಶಂಕಿತರ ಬಂಧನಕ್ಕೂ ಬಲೆ ಬೀಸಲಾಗಿದೆ. ನಾವೀಗ ಮರಣೋತ್ತರ ಪರೀಕ್ಷೆ ವರದಿಗಾಗಿ ಕಾಯುತ್ತಿದ್ದೇವೆ. ಆದರೂ ಮೇಲ್ನೋಟಕ್ಕೆ ಇದು ಮರ್ಯಾದಾ ಹತ್ಯೆಯಂತೆ ಕಾಣುತ್ತಿದೆ ಎಂದು ಇಲ್ಲಿನ ಇನ್ಸ್‌ಪೆಕ್ಟರ್ ಪ್ರೇಮ್ ಸಿಂಗ್ ತಿಳಿಸಿದ್ದಾರೆ.
ಪ್ರಾಥಮಿಕ ಮಾಹಿತಿಗಳ ಪ್ರಕಾರ ಮೋನಿಕಾ ಮತ್ತು ರಿಂಕು ದೇಹಗಳಲ್ಲಿ ಹಲ್ಲೆಯ ಗುರುತುಗಳಿವೆ. ಅಂಕಲ್ ಮನೆಯಲ್ಲಿದ್ದ ಸಂದರ್ಭದಲ್ಲಿ ಈ ಜೋಡಿಯನ್ನು ವಶಕ್ಕೆ ತೆಗೆದುಕೊಂಡು ಚಿತ್ರಹಿಂಸೆ ನೀಡಿದ ನಂತರ ಕೊಲೆ ಮಾಡಲಾಗಿತ್ತು. ಕಳೆದ ಎರಡು ವರ್ಷಗಳಿಂದ ಯಾರ ಮಾತೂ ಕೇಳದೆ ಇವರು ತಿರುಗುತ್ತಿದ್ದರು ಎಂದು ಹೇಳಲಾಗಿದೆ.
ಗಂಡ-ಹೆಂಡತಿಯ ಹತ್ಯೆ... ಇದು ನಡೆದಿರುವುದು ಪಶ್ಚಿಮ ದೆಹಲಿಯಲ್ಲಿ. 26ರ ಹರೆಯದ ಕುಲದೀಪ್ ಶವ ಅವರ ಮನೆಯ ಹೊರಗಿದ್ದ ಕಾರಿನಲ್ಲಿ ಪತ್ತೆಯಾಗಿದ್ದರೆ, ಅವರ ಪತ್ನಿ ಮೋನಿಕಾ ಶವ ಮನೆಯೊಳಗೆ ಪತ್ತೆಯಾಗಿದೆ.
ಪೋಷಕರ ಇಚ್ಛೆಗೆ ವಿರುದ್ಧವಾಗಿ ಈ ಅಂತರ್ಜಾತಿ ಜೋಡಿ ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿತ್ತು. ವರದಿಗಳ ಪ್ರಕಾರ ಇಲ್ಲೂ ಯುವತಿಯ ಕುಟುಂಬಿಕರು ಈ ಕೃತ್ಯ ಎಸಗಿದ್ದಾರೆ.
ಮೋನಿಕಾಳ ಮನೆಯವರು, ಅದರಲ್ಲೂ ಆಕೆಯ ಸಹೋದರರು ಸೇರಿಕೊಂಡು ಇವರಿಬ್ಬರನ್ನೂ ಹತ್ಯೆ ಮಾಡಿದ್ದಾರೆ. ಇದು ಮರ್ಯಾದಾ ಹತ್ಯೆ ಎಂದು ಯುವಕನ ಹೆತ್ತವರು ಆರೋಪಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕೇಂದ್ರ, ರಾಜ್ಯಗಳಿಗೆ ಸುಪ್ರೀಂ ನೋಟೀಸ್ ಖಾಪ್ ಪಂಚಾಯಿತಿಗಳ ಕ್ರೌರ್ಯದಿಂದ ಯುವ ಜೋಡಿಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಶ್ನಿಸಿರುವ ಸರ್ವೋಚ್ಚ ನ್ಯಾಯಾಲಯವು, ಕೇಂದ್ರ ಮತ್ತು ಹರ್ಯಾಣ ಸೇರಿದಂತೆ ಒಂಬತ್ತು ರಾಜ್ಯಗಳಿಗೆ ನೋಟೀಸ್ ಜಾರಿ ಮಾಡಿದೆ.
ಕುಟುಂಬ ಗೌರವದ ಹೆಸರಿನಲ್ಲಿ ನಡೆಸಲಾಗುತ್ತಿರುವ ಹತ್ಯೆಯ ಕುರಿತು ಸಮಾಜ ಸೇವಾಸಂಸ್ಥೆ 'ಶಕ್ತಿ ವಾಹಿನಿ' ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ಸ್ವೀಕರಿಸಿದ ನ್ಯಾಯಾಲಯವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ನೋಟೀಸ್ ಜಾರಿ ಮಾಡಿದೆ.
ಮರ್ಯಾದಾ ಹತ್ಯೆ ವಿರುದ್ಧ ಕಠಿಣ ಕಾನೂನಿನ ಅಗತ್ಯವಿದೆ ಎಂದು ಪಿಐಎಲ್‌ನಲ್ಲಿ ಒತ್ತಿ ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಮತ್ತು ಹರ್ಯಾಣ, ರಾಜಸ್ತಾನ, ಪಂಜಾಬ್, ಉತ್ತರ ಪ್ರದೇಶ ಸೇರಿದಂತೆ ಒಂಬತ್ತು ರಾಜ್ಯ ಸರಕಾರಗಳಿಗೆ ಪ್ರತಿಕ್ರಿಯೆ ನೀಡುವಂತೆ ಕೋರ್ಟ್ ಸೂಚನೆ ನೀಡಿದೆ.