ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಫೆರ್ನಾಂಡಿಸ್ ಪತ್ನಿ ಲೈಲಾ ಜತೆಗೇ ಇರಬೇಕು: ಕೋರ್ಟ್
(George Fernandes | Delhi High Court | Leila Kabir | Jaya jaitley)
ಮಾಜಿ ರಕ್ಷಣಾ ಸಚಿವ ಜಾರ್ಜ್ ಫೆರ್ನಾಂಡಿಸ್ ಪ್ರಸಕ್ತ ನೆಲೆಸಿರುವ ನಿವಾಸದಿಂದ ಬೇರೆಡೆಗೆ ಸ್ಥಳಾಂತರಗೊಳ್ಳುವ ಅಗತ್ಯವಿಲ್ಲ ಎಂದಿರುವ ದೆಹಲಿ ಉಚ್ಚ ನ್ಯಾಯಾಲಯ, ಜುಲೈ 19ರವರೆಗೆ ಅವರ ಯೋಗಕ್ಷೇಮವನ್ನು ಪತ್ನಿಗೆ ನೋಡಿಕೊಳ್ಳಲು ಅವಕಾಶ ನೀಡಿದೆ.
ಸುಮಾರು ಒಂದು ಗಂಟೆಗಳ ಕಾಲ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ.ಕೆ. ಶಾಲಿ, ಜನಪ್ರಿಯ ಸಮಾಜವಾದಿ ನಾಯಕನನ್ನು ಪತ್ನಿ ಲೈಲಾ ಕಬೀರ್ ನೋಡಿಕೊಳ್ಳುವುದನ್ನು ಮುಂದುವರಿಸಲಿ ಎಂದು ಆದೇಶ ನೀಡಿದರು.
ಫೆರ್ನಾಂಡಿಸ್, ಅವರ ಪತ್ನಿ ಮತ್ತು ಇಬ್ಬರು ಸಹೋದರು ನ್ಯಾಯಾಲಯದಲ್ಲಿ ಹಾಜರಿದ್ದ ಸಂದರ್ಭದಲ್ಲಿ ಪ್ರಕರಣವನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಈ ಆದೇಶ ನೀಡಿದ್ದಾರೆ. ಫೆರ್ನಾಂಡಿಸ್ ಕುಟುಂಬದ ಸದಸ್ಯರ ಜತೆ ಓರ್ವ ದುಭಾಷಿ ಮತ್ತು ಪಾದ್ರಿಯೂ ನ್ಯಾಯಾಲಯದಲ್ಲಿ ಹಾಜರಿದ್ದರು.
ಅಲ್ಜೆಮೀರ್ ಸ್ಮರಣಶಕ್ತಿ ಕಳೆದುಕೊಳ್ಳುವ ರೋಗದಿಂದ ಬಳಲುತ್ತಿರುವ ಎನ್‌ಡಿಎ ಮಾಜಿ ಸಂಚಾಲಕ ಹಾಗೂ ಮಾಜಿ ಸಚಿವರಿಗೆ ಅವರ ಪತ್ನಿ ಸೂಕ್ತವಾಗಿ ಚಿಕಿತ್ಸೆ ಕೊಡುತ್ತಿಲ್ಲ. ಹಾಗಾಗಿ ಅವರ ಉಸ್ತುವಾರಿಯನ್ನು ನಮಗೆ ನೀಡಬೇಕು ಎಂದು ಫೆರ್ನಾಂಡಿಸ್ ಸಹೋದರರಾದ ರಿಚರ್ಡ್ ಮತ್ತು ಮೈಕೆಲ್ ನ್ಯಾಯಾಲಯದ ಮೊರೆ ಹೋಗಿದ್ದರು.
ಫೆರ್ನಾಂಡಿಸ್ ನ್ಯಾಯಾಲಯದಲ್ಲಿ ತನ್ನ ಪತ್ನಿ ಮತ್ತು ಸಹೋದರರ ಜತೆ ಇಂಗ್ಲೀಷ್‌ನಲ್ಲೇ ಮಾತನಾಡುತ್ತಿದ್ದರು. ಸಹೋದರರು ಕೊಂಕಣಿಯಲ್ಲಿ ಮಾತನಾಡಿದಾಗ ಫೆರ್ನಾಂಡಿಸ್ ಆಂಗ್ಲ ಭಾಷೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ತಮ್ಮನ್ನು ಫೆರ್ನಾಂಡಿಸ್ ಗುರುತಿಸಿದ್ದಾರೆ ಎಂದ ಅವರ ಸಹೋದರರು, ಅವರ ಆರೋಗ್ಯ ಉತ್ತಮವಾಗಿಲ್ಲ, ಸೂಕ್ತ ಚಿಕಿತ್ಸೆಯ ಅಗತ್ಯವಿದೆ ಎಂದು ನ್ಯಾಯಾಲಯದಲ್ಲಿ ವಾದಿಸಿದರು.
ಫೆರ್ನಾಂಡಿಸ್‌ರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಜುಲೈ 1ರಂದು ಲೈಲಾಗೆ ಆದೇಶ ನೀಡಲಾಗಿತ್ತು. ಫೆರ್ನಾಂಡಿಸ್ ಏನನ್ನು ಬಯಸುತ್ತಿದ್ದಾರೆ ಎಂಬುದನ್ನು ಮುಖಾಮುಖಿಯಾಗಿ ತಿಳಿದುಕೊಳ್ಳಬೇಕು ಎಂದು ನ್ಯಾಯಾಧೀಶರು ಬಯಸಿದ್ದರು.