ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬೆಳಗಾವಿ ವಿವಾದ; ಮಹಾರಾಷ್ಟ್ರ ಪುಢಾರಿಗಳಿಂದ ಕಿಡಿ (Maharashtra | Karnataka | Bal Thackeray | Belgaum)
Bookmark and Share Feedback Print
 
ಬೆಳಗಾವಿ, ಕಾರವಾರ ಸೇರಿದಂತೆ ಮರಾಠಿ ಭಾಷಿಗರಿರುವ ಪ್ರದೇಶಗಳು ಕರ್ನಾಟಕಕ್ಕೆ ಸೇರಿದ್ದು ಎಂದು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರಕಾರವು ಅಫಿದಾವಿತ್ ಸಲ್ಲಿಸಿರುವ ನಿರ್ಧಾರವನ್ನು ತೀವ್ರವಾಗಿ ಖಂಡಿಸಿರುವ ಮಹಾರಾಷ್ಟ್ರ ನಾಯಕರು, ರಾಷ್ಟ್ರಪತಿ ಮಧ್ಯಪ್ರವೇಶಿಸಬೇಕೆಂದು ಆಗ್ರಹಿಸಿದ್ದಾರೆ.

ಕೇಂದ್ರದ ಶಿಫಾರಸನ್ನು ಒಪ್ಪಿಕೊಳ್ಳಲು ನಿರಾಕರಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಅಶೋಕ್ ಚೌಹಾನ್, ಶಿವಸೇನೆ ಮುಖ್ಯಸ್ಥ ಬಾಳಾ ಠಾಕ್ರೆ ಸೇರಿದಂತೆ ಹಲವು ರಾಜಕಾರಣಿಗಳು ತಮ್ಮ ವಾದವನ್ನು ಮುಂದುವರಿಸಿದ್ದು, ರಾಜ್ಯದ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಬೆಳಗಾವಿ ಸೇರಿದಂತೆ ರಾಜ್ಯದ ಕರ್ನಾಟಕ ವಶದಲ್ಲಿರುವ ಗಡಿ ಪ್ರದೇಶಗಳು ನಮಗೇ ಸೇರಬೇಕು. ಅಲ್ಲಿ ಮರಾಠಿಗರೇ ಇರುವುದರಿಂದ ಅವರ ಮೇಲೆ ಕರ್ನಾಟಕಕ್ಕೆ ಯಾವುದೇ ಅಧಿಕಾರವಿಲ್ಲ. ಈ ಕುರಿತು ರಾಷ್ಟ್ರಪತಿಯವರು ಮಧ್ಯಪ್ರವೇಶ ಮಾಡಬೇಕು ಎಂದು ಮುಖ್ಯಮಂತ್ರಿ ಚೌಹಾನ್ ಒತ್ತಾಯಿಸಿದ್ದಾರೆ.

2004ರಲ್ಲಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದ ಮಹಾರಾಷ್ಟ್ರ, ಕರ್ನಾಟಕ ಗಡಿ ಪ್ರದೇಶದಲ್ಲಿನ ಬೆಳಗಾವಿ, ಕಾರವಾರ, ಬೀದರ್ ಮತ್ತು ಗುಲ್ಬರ್ಗಾ ಜಿಲ್ಲೆಗಳಲ್ಲಿನ 814ಕ್ಕೂ ಹೆಚ್ಚು ಗ್ರಾಮಗಳು ತನ್ನ ವ್ಯಾಪ್ತಿಗೆ ಬರುತ್ತದೆ. ಇಲ್ಲಿನ ಬಹುತೇಕ ಜನರು ಮರಾಠಿ ಮನೆ ಭಾಷಿಗರಾಗಿದ್ದಾರೆ. ಹಾಗಾಗಿ ರಾಜ್ಯದ ಮರು ವಿಂಗಡನೆ ನಡೆಸಿ ಅವುಗಳನ್ನು ತನಗೆ ನೀಡಬೇಕು ಎಂದು ಹೇಳಿತ್ತು.

ಮಹಾರಾಷ್ಟ್ರಕ್ಕೆ ಅನ್ಯಾಯ...
ರಾಜ್ಯದ ಕಾಂಗ್ರೆಸ್ ನಾಯಕರು ಗಡಿ ವಿವಾದದ ಕುರಿತು ಏನೂ ಮಾಡಲು ಅಸಮರ್ಥರಾಗಿರುವುದರಿಂದ ಕೇಂದ್ರವು ಮಹಾರಾಷ್ಟ್ರಿಗರಿಗೆ ಅನ್ಯಾಯ ಮಾಡುವ ಧೈರ್ಯ ತೋರಿಸಿದೆ ಎಂದು ಶಿವಸೇನೆ ವರಿಷ್ಠ ಬಾಳಾ ಠಾಕ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯಗಳ ಅಸ್ತಿತ್ವಕ್ಕೆ ಭಾಷೆ ಮಾನದಂಡ ಅಲ್ಲ ಎನ್ನುವ ಕೇಂದ್ರದ ಅಭಿಪ್ರಾಯ ನಿಜವಾಗಿದ್ದರೆ, ಯಾಕೆ ಎಲ್ಲಾ ರಾಜ್ಯಗಳನ್ನು ಬರ್ಖಾಸ್ತುಗೊಳಿಸಬಾರದು ಎಂದು ಅವರು ಕೇಂದ್ರಕ್ಕೆ ಪ್ರಶ್ನೆಯೆಸೆದಿದ್ದಾರೆ.

ನೆಹರೂ-ಗಾಂಧಿ ಮನೆತನವು ಮಹಾರಾಷ್ಟ್ರ ವಿರೋಧಿ ನೀತಿ ಹೊಂದಿರುವುದಕ್ಕೆ ಕುಖ್ಯಾತವಾಗಿದೆ. ಹಿಂದೊಮ್ಮೆ ಮೋತಿಲಾಲ್ ನೆಹರೂ ಅವರು ಮಹಾರಾಷ್ಟ್ರವು ಭಾರತದ ಕೊಳೆತ ಭಾಗ ಮತ್ತು ಅದನ್ನು ಕತ್ತರಿಸಿ ಹಾಕಬೇಕು ಎಂದು ಹೇಳಿದ್ದರು ಎಂದು ಖಾರವಾಗಿ ಕಾಂಗ್ರೆಸ್ ವಿರುದ್ಧ ದಾಳಿ ಮಾಡಿರುವ ಠಾಕ್ರೆ, ಕರ್ನಾಟಕದಲ್ಲಿ ಮರಾಠಿಗರ ಮೇಲೆ ಆ ರಾಜ್ಯದವರಿಗಿಂತ ಕೇಂದ್ರವೇ ದ್ವೇಷ ಸಾಧಿಸುತ್ತಿದೆ ಎಂದಿದ್ದಾರೆ.

ಇದು ಕಾಂಗ್ರೆಸ್ ಕೊಡುಗೆ...
ರಾಜ್ಯವು ಸುವರ್ಣ ಮಹೋತ್ಸವ ಆಚರಿಸುತ್ತಿರುವ ಹೊತ್ತಿನಲ್ಲಿ ಮಹಾರಾಷ್ಟ್ರಕ್ಕೆ ಕಾಂಗ್ರೆಸ್ ಮತ್ತು ಎನ್‌ಸಿಪಿ ನೀಡಿರುವ ಬಹುಮಾನವಿದು ಎಂದು ಕೇಂದ್ರದ ನಿಲುವನ್ನು ರಾಜ್ಯ ಬಿಜೆಪಿ ಬಣ್ಣಿಸಿದೆ.

ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಕಾಂಗ್ರೆಸ್ ನೇತೃತ್ವದ ಸರಕಾರಗಳು ಯಾವತ್ತೂ ಮಹಾರಾಷ್ಟ್ರ ವಿರೋಧಿ ನೀತಿಯನ್ನು ಹೊಂದಿರುತ್ತವೆ. ಅದೇ ರೀತಿಯಲ್ಲಿ ನಮ್ಮ ವಿರುದ್ಧ ದ್ವೇಷ ಸಾಧಿಸಲಾಗಿದೆ, ನಮಗೆ ಅನ್ಯಾಯ ಮಾಡಲಾಗಿದೆ ಎಂದು ರಾಜ್ಯ ಬಿಜೆಪಿ ವಕ್ತಾರ ಮಾಧವ್ ಭಂಡಾರಿ ಟೀಕಿಸಿದ್ದಾರೆ.

ಸಂಬಂಧಪಟ್ಟ ಸುದ್ದಿಯಿದು:
** ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ: ಕೇಂದ್ರ ಘೋಷಣೆ

ಸಂಬಂಧಿತ ಮಾಹಿತಿ ಹುಡುಕಿ