ಮರ್ಯಾದಾ ಹತ್ಯೆ ಹೆಸರಿನಲ್ಲಿ ಮನೆಯವರಿಂದಲೇ ನಡೆಯುವ ಪ್ರೇಮಿಗಳ ಮಾರಣಹೋಮವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ಗಂಭೀರವಾಗಿ ಚಿಂತಿಸುತ್ತಿದೆ. ತಪ್ಪಿತಸ್ಥರಿಗೆ ಮರಣ ದಂಡನೆ ಶಿಕ್ಷೆ ವಿಧಿಸುವ ಕುರಿತು ಕೇಂದ್ರ ಸಂಪುಟ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ.
ಈ ಸಂಬಂಧ ಸಭೆ ಸೇರಿರುವ ಸಂಪುಟ ಸಚಿವರು, ಮರ್ಯಾದಾ ಹತ್ಯೆಯಲ್ಲಿ ಪಾಲ್ಗೊಂಡವರಿಗೆ ನೀಡುವ ಶಿಕ್ಷೆಯನ್ನು ನಿರ್ಧರಿಸಲು ಸಚಿವರ ಸಮಿತಿಯನ್ನೊಂದನ್ನು ರಚಿಸಲು ಸರಕಾರ ನಿರ್ಧರಿಸಿದೆ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವೆ ಅಂಬಿಕಾ ಸೋನಿ ತಿಳಿಸಿದ್ದಾರೆ.
ಸಗೋತ್ರ ವಿವಾಹ, ಅಂತರ್ಜಾತಿ ವಿವಾಹಗಳನ್ನು ಸಹಿಸದ ಮನೆಯವರು ಮರ್ಯಾದಾ ಹತ್ಯೆ ಹೆಸರಿನಲ್ಲಿ ಪ್ರೇಮಿಗಳನ್ನು ಅಮಾನವೀಯವಾಗಿ ಕೊಲ್ಲುತ್ತಿರುವ ಪ್ರಕರಣಗಳು ಹರ್ಯಾಣ, ಬಿಹಾರ, ಉತ್ತರ ಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಇತ್ತೀಚಿನ ದಿನಗಳಲ್ಲಿ ದಕ್ಷಿಣ ಭಾರತಕ್ಕೂ ಪಸರಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಈ ಹತ್ಯೆಗಳಿಗೆ ಆದೇಶ ನೀಡುವ ಖಾಪ್ ಪಂಚಾಯತ್‌ಗಳು ಮತ್ತು ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಪ್ರಸಕ್ತ ಇರುವ ಕಾನೂನುಗಳಿಗೆ ತಿದ್ದುಪಡಿ ತರುವುದು ಮತ್ತು ಹೊಸ ಕಾನೂನುಗಳನ್ನು ರಚಿಸುವ ಪ್ರಸ್ತಾಪ ಸರಕಾರದ ಮುಂದಿದೆ. ಇವುಗಳ ಕುರಿತು ಎಲ್ಲಾ ರಾಜ್ಯ ಸರಕಾರಗಳ ಅಭಿಪ್ರಾಯವನ್ನೂ ಕೇಳಲಾಗಿದೆ ಎಂದು ಸೋನಿ ತಿಳಿಸಿದ್ದಾರೆ.
ಮರ್ಯಾದಾ ಹತ್ಯೆಗಳು ಸೂಕ್ಷ್ಯ ವಿಚಾರವಾಗಿದ್ದು, ಈ ಕುರಿತು ಸೂಕ್ತ ಸಮಾಲೋಚನೆಯ ಅಗತ್ಯವಿದೆ. ಎಲ್ಲಾ ಅಂಶಗಳನ್ನು ಗಮನಕ್ಕೆ ತೆಗೆದುಕೊಂಡು ಅಂತಿಮ ತೀರ್ಮಾನಕ್ಕೆ ಬರಲಾಗುತ್ತದೆ ಎಂದು ಹೇಳಿದರಾದರೂ, ತಪ್ಪಿತಸ್ಥರಿಗೆ ಗರಿಷ್ಠ ಶಿಕ್ಷೆ ನೀಡುವ ಪ್ರಸ್ತಾಪದ ಕುರಿತು ಯಾವುದೇ ಮಾಹಿತಿ ನೀಡಲು ನಿರಾಕರಿಸಿದ್ದಾರೆ.
ಆದರೆ ಇದಕ್ಕೆ ಸಮ್ಮಿಶ್ರ ಸರಕಾರದಲ್ಲೇ ಪೂರ್ಣ ಬೆಂಬಲವಿಲ್ಲ ಎಂದೂ ಹೇಳಲಾಗುತ್ತಿದೆ. ಇದಕ್ಕೆ ಪುಷ್ಠಿ ನೀಡಿರುವುದು ಇತ್ತೀಚೆಗಷ್ಟೇ ಕೆಲವು ಸಂಸದರು ಮತ್ತು ಸಚಿವರುಗಳು ಖಾಪ್ ಪಂಚಾಯಿತಿಗಳಿಗೆ ಬಹಿರಂಗವಾಗಿ ಬೆಂಬಲ ನೀಡಿರುವುದು. ಭಾರತೀಯ ಸಂಸ್ಕೃತಿಯ ರಕ್ಷಣೆಗೆ ಇದು ಅಗತ್ಯವಾಗಿದೆ ಎಂಬ ಅವರ ಪ್ರತಿಪಾದನೆ ನೂತನ ಕಾನೂನು ರಚನೆ ಮತ್ತು ತಿದ್ದುಪಡಿಗೆ ಅಡ್ಡಗಾಲಾಗುವ ಸಾಧ್ಯತೆಗಳೂ ಇವೆ.