ಅಂದು ಸೀತೆ ತನ್ನ ಪಾತಿವ್ರತ್ಯವನ್ನು ಸಾಬೀತುಪಡಿಸಲು ಶ್ರೀರಾಮನ ಸೂಚನೆಯಂತೆ ಅಗ್ನಿಪರೀಕ್ಷೆಗೊಳಪಟ್ಟು ಗೆದ್ದ ಪುರಾಣದ ಮುಂದುವರಿದ ಭಾಗ ಇದಲ್ಲ. ಆದರೂ ಈಕೆ ಅಗ್ನಿಪರೀಕ್ಷೆಗೊಳಗಾಗಿರುವುದು ಸತ್ಯ ಮತ್ತು ಗೆದ್ದಿದ್ದಾಳೆ ಮತ್ತು ಈಕೆ ಸೀತೆಯಲ್ಲ.
ತ್ರೇತಾಯುಗದ ಸೀತೆಯಂತೆ ಈಕೆಯ ಶೀಲವನ್ನು ಯಾರೂ ಶಂಕಿಸಿರಲಿಲ್ಲ. ಶಂಕೆ ಬಂದಿದ್ದು ಪುರುಷರಿಂದಲೂ ಅಲ್ಲ. ಪಕ್ಕದ ಮನೆಯ ಮಹಿಳೆಯಿಂದ. ಕಳ್ಳತನದ ಆರೋಪ ಹೊರಿಸಲಾಗಿದ್ದನ್ನು ಸುಳ್ಳು ಎಂದು ನಿರೂಪಿಸಬೇಕಿತ್ತು. ಅದಕ್ಕಾಗಿ ಕಬ್ಬಿಣದ ಸಲಾಕೆಯನ್ನು ಕೈಯಲ್ಲಿ ಹಿಡಿದುಕೊಂಡು ತಾನು ಕಳ್ಳಿಯಲ್ಲ ಎಂದು ನೋವಿನಲ್ಲೂ ಕಲಿಯುಗದ ಸೀತೆ ನಿರೂಪಿಸಿದ್ದಾಳೆ.
ಆಕೆಯ ಹೆಸರು ವಂದನಾ. ಈ ಅಮಾನವೀಯ ಅಗ್ನಿಪರೀಕ್ಷೆ ನಡೆದಿರುವುದು ಮಧ್ಯಪ್ರದೇಶದ ಸಾಗರ ಜಿಲ್ಲೆಯ ಒಂದು ಹಳ್ಳಿಯಲ್ಲಿ.
ಅಂದು ಸೀತೆ ಅಗ್ನಿಪ್ರವೇಶ ಮಾಡುವಾಗ ಎಲ್ಲರೂ ಪೂಜ್ಯ ಭಾವನೆಯಿಂದ ನೋಡಿದ್ದಾರೆಂಬುದನ್ನು ನಾವು ಕೇಳಿ ತಿಳಿದಿದ್ದೇವೆ. ಆದರೆ ಇಲ್ಲಿನ ಪಂಚಾಯಿತಿ ಕ್ರೂರ ಪರೀಕ್ಷೆಗೊಳಪಡಬೇಕೆಂದು ಆದೇಶ ನೀಡಿದಾಗ ಅಮಾಯಕಿ ವಂದನಾಳನ್ನು ಕನಿಷ್ಠ ಬೆಂಬಲಿಸುವ ಮಂದಿಯೂ ಕಾಣಿಸಿರಲಿಲ್ಲ. ಸುತ್ತಮುತ್ತಲಿದ್ದವರೆಲ್ಲ ಮೂದಲಿಸುವವರೇ.
ಆದರೂ ತನ್ನ ಮೇಲೆ ಅಪಾರ ನಂಬಿಕೆ ಹೊಂದಿದ್ದ ವಂದನಾ ಅಗ್ನಿಪರೀಕ್ಷೆಯಲ್ಲಿ ಗೆದ್ದಿದ್ದಾಳೆ. ಕಾಸಿ ಕೆಂಪಾಗಿಸಿದ್ದ ಕಬ್ಬಿಣದ ಸಲಾಕೆಯನ್ನು ಕೈಯಲ್ಲಿ ಹಿಡಿದುಕೊಂಡು ಕೆಲವು ನಿಮಿಷಗಳ ಕಾಲ ಆದೇಶದಂತೆ ಏಳು ಹೆಜ್ಜೆಗಳನ್ನಿಟ್ಟಿದ್ದಾಳೆ.
ಇದೇ ಆಧಾರ ಎಂದು ಪರಿಗಣಿಸಿದ ಪಂಚಾಯಿತಿಯು, ವಂದನಾ ತಪ್ಪಿತಸ್ಥಳಲ್ಲ ಎಂದು ತೀರ್ಪು ನೀಡಿದೆ. ಅಲ್ಲದೆ ಈಕೆಯ ಮೇಲೆ ಆರೋಪ ಹೊರಿಸಿದ್ದ ಮಹಿಳೆಯ ಮೇಲೆ ದಂಡ ಹೇರಿದೆ.
ಅಷ್ಟಾದರೂ ವಂದನಾ ಮುಖದಲ್ಲಿ ಗೆಲುವಿನ ಛಾಯೆಯಿದೆ. ಅದಕ್ಕಿರುವ ಕಾರಣ ಎರಡು. ಮೊದಲನೆಯದಾಗಿ ತಾನು ನಿರಪರಾಧಿಯೆಂದು ಗ್ರಾಮಸ್ಥರೆದುರು ಸಾಬೀತುಪಡಿಸಲು ಸಾಧ್ಯವಾಗಿರುವುದು ಮತ್ತು 3,000 ರೂಪಾಯಿ ಪರಿಹಾರವನ್ನು ದಕ್ಕಿಸಿಕೊಂಡಿರುವುದು.
'ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸುವ ಮೂಲಕ ನನ್ನ ಮೇಲಿದ್ದ ಸಂಶಯಗಳನ್ನು ನಿವಾರಿಸಿ ಮುಗ್ಧೆಯೆಂದು ಸಾಬೀತುಪಡಿಸಿದ್ದೇನೆ. ನನ್ನ ಪ್ರಾಮಾಣಿಕತೆ ಮತ್ತು ಸಾಚಾತನವನ್ನು ಗೌರವಿಸಿ 3,000 ರೂಪಾಯಿಗಳನ್ನೂ ಬಹುಮಾನವಾಗಿ ನೀಡಲಾಗಿದೆ. ಇದು ತಲತಲಾಂತರದಿಂದ ನಡೆದುಕೊಂಡು ಬಂದ ನ್ಯಾಯದಾನ ಪದ್ಧತಿ. ಹಾಗಾಗಿ ಗೌರವಿಸುತ್ತೇನೆ' ಎಂದು ವಂದನಾ ಪ್ರತಿಕ್ರಿಯಿಸಿದ್ದಾಳೆ.
ಈ ಪದ್ಧತಿಯನ್ನು ಊರಿನ ಹಿರಿಯ ಧೀರಜ್ ಆದಿವಾಸಿ ವಿವರಿಸುವುದು ಹೀಗೆ: ನಾವು ನ್ಯಾಯಾಲಯಗಳಿಗೆ ಹೋಗುವ ಬದಲು ನಮ್ಮದೇ ಆದ ಪುರಾತನ ಸಂಪ್ರದಾಯದಂತೆ ಈ ವಿಧಾನವನ್ನು ಅನುಸರಿಸುತ್ತೇವೆ. ಆಕೆಯ ಮೇಲೆ ಕಳ್ಳತನದ ಆರೋಪ ಬಂದಾಗ, ಪಂಚಾಯಿತಿಯು ಅಗ್ನಿಪರೀಕ್ಷೆಗೊಳಗಾಗುವಂತೆ ಆದೇಶ ನೀಡಿತ್ತು. ಅದರಲ್ಲವಳು ಗೆದ್ದಿದ್ದಾಳೆ ಎಂದಿದ್ದಾರೆ.
ಪ್ರಕರಣ ಪತ್ರಿಕೆಗಳಲ್ಲಿ ಬಹಿರಂಗವಾಗುತ್ತಿದ್ದಂತೆ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆಯಾದರೂ, ಇದುವರೆಗೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಆದರೆ ತಾನು ಜಾಗೃತಿ ಮೂಡಿಸಲು ಯತ್ನಿಸುತ್ತಿರುವುದಾಗಿ ಹೇಳಿದೆ.
ಇಲ್ಲಿನ ಜನ ಅವಿದ್ಯಾವಂತರಾಗಿರುವ ಕಾರಣ ಹಳೆ ಸಂಪ್ರದಾಯಗಳು ಈಗಲೂ ಉಳಿದುಕೊಂಡಿವೆ. ಆ ಸಮುದಾಯಗಳಲ್ಲಿ ಜಾಗೃತಿ ಮೂಡಿಸುವ ಯತ್ನವನ್ನು ನಾವು ಮಾಡುತ್ತಿದ್ದೇವೆ ಎಂದು ಸಾಗರ ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ಸಿಂಗ್ ತಿಳಿಸಿದ್ದಾರೆ.