ರಾಜ್ಯದಲ್ಲಿನ ರಾಜಕೀಯ ಪಕ್ಷಗಳು, ಕೇಂದ್ರ ಸರಕಾರ ಮತ್ತು ರಾಜಕಾರಣಿಗಳು ಎಲ್ಲರೂ ಮಹಾರಾಷ್ಟ್ರ ವಿರೋಧಿಗಳು. ಯಾರು ಕೂಡ ಮಹಾರಾಷ್ಟ್ರಕ್ಕಾಗಿ ತ್ಯಾಗ ಮಾಡಲು ಸಿದ್ಧರಿಲ್ಲ, ಅವರವರ ಉದ್ಯಮ-ವ್ಯವಹಾರವೇ ಮುಖ್ಯವಾದದ್ದು ಎಂದು ಪರಿಗಣಿಸುತ್ತಾರೆಯೇ ಹೊರತು ಬೆಳಗಾವಿ ಕುರಿತು ಸೊಲ್ಲೆತ್ತುತ್ತಿಲ್ಲ ಎಂದು ಠಾಕ್ರೆಗಳು ಗುಟುರು ಹಾಕಿದ್ದಾರೆ.
ಒಂದೆಡೆಯಿಂದ ಮಹಾರಾಷ್ಟ್ರ ನವನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ, ಮತ್ತೊಂದೆಡೆ ಶಿವಸೇನೆ ವರಿಷ್ಠ ಬಾಳಾ ಠಾಕ್ರೆ -- ಇಬ್ಬರೂ ಬೆಳಗಾವಿ ವಿವಾದದ ಕುರಿತು ಮಹಾರಾಷ್ಟ್ರದ ರಾಜಕಾರಣಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬಿಜೆಪಿಯು ಇದರ ಕುರಿತು ಏನೂ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ರಾಜ್ ಠಾಕ್ರೆ, ತನ್ನ ಕೈಯಲ್ಲಿ ಅಧಿಕಾರವಿರುವಾಗ ಆ ಪಕ್ಷ ಸುಮ್ಮನಿತ್ತು. ಇದರ ಬಗ್ಗೆ ನಾನೇನು ಹೇಳಲಿ. ಎನ್‌ಡಿಎ ಕೇಂದ್ರದಲ್ಲಿ ಅಧಿಕಾರದಲ್ಲಿರುವಾಗ ಗಡಿ ವಿವಾದದಲ್ಲಿ ಬೆಂಬಲ ನೀಡಬೇಕೆಂದು ಶಿವಸೇನೆ ಒತ್ತಾಯ ಮಾಡಬಹುದಿತ್ತು. ಆದರೆ ಅದಕ್ಕೂ ಆ ಪಕ್ಷ ಮುಂದಾಗಿರಲಿಲ್ಲ ಎಂದಿದ್ದಾರೆ.
ಅದಿರಲಿ, ಮಹಾರಾಷ್ಟ್ರದ ಸಂಸದರಾದರೂ ಬೆಳಗಾವಿ ಗಡಿ ವಿವಾದದ ಸಂಬಂಧ ಒಂದಾಗಿ ಸಾಗುತ್ತಿದ್ದಾರೆಯೇ. ಅದೂ ಇಲ್ಲ. ಅವರೆಲ್ಲರೂ ಮಹಾರಾಷ್ಟ್ರಕ್ಕೆ ದ್ರೋಹ ಮಾಡುತ್ತಿದ್ದಾರೆ. ಮುಖ್ಯಮಂತ್ರಿಯವರ ವಿಚಾರವನ್ನು ತೆಗೆದುಕೊಂಡರೆ ಅವರು ಕೂಡ ಸಮಸ್ಯೆಗಳನ್ನು ಪರಿಹರಿಸುವ ಬದಲು ತಾನು ಸುಪ್ರೀಂ ಕೋರ್ಟ್‌ಗೆ ಹೋಗುತ್ತೇನೆ ಎನ್ನುತ್ತಿದ್ದಾರೆ ಎಂದು ರಾಜ್ ಠಾಕ್ರೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್, ಮರಾಠಿ ಸಚಿವ ಶರದ್ ಪವಾರ್ ಅವರನ್ನೂ ಬಿಟ್ಟಿಲ್ಲ. ಅವರಿಗೆ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಕಣ್ಣಿಗೆ ಕಾಣಿಸುತ್ತಿಲ್ಲ. ಯಾಕೆಂದರೆ ಅವರು ಕ್ರಿಕೆಟ್ ಹೊನಲುಬೆಳಕಿನಲ್ಲಿ ಕುರುಡರಾಗಿದ್ದಾರೆ. ಇಂತಹ ವಿಚಾರಗಳಿಗೆ ಗಮನ ಹರಿಸಲು ಅವರಲ್ಲಿ ಸಮಯವಿಲ್ಲ. ಕೇಂದ್ರ ಸರಕಾರವಂತೂ ಮೊದಲಿನಿಂದಲೂ ಮಹಾರಾಷ್ಟ್ರ ವಿರೋಧಿ ನೀತಿಯನ್ನು ಅಳವಡಿಸಿಕೊಂಡು ಬಂದಿರುವಂತಹುದು ಎನ್ನುವ ಮೂಲಕ ಪ್ರತಿಯೊಬ್ಬರ ಮೇಲೂ ಹರಿಹಾಯ್ದಿದ್ದಾರೆ.
ರಾಜೀನಾಮೆ ಬೆದರಿಕೆ ಹಾಕಲಿ... ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ಕುರಿತು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರಕಾರವು ಸಲ್ಲಿಸಿರುವ ಅಫಿದಾವಿತನ್ನು ವಿರೋಧಿಸುವಲ್ಲಿ ಮರಾಠಿ ರಾಜಕಾರಣಿಗಳು ವಿಫಲರಾಗಿದ್ದಾರೆ ಎಂದು ಕಿಡಿ ಕಾರಿರುವ ಬಾಳಾ ಠಾಕ್ರೆ, ಈ ಸಂಬಂಧ ಕನಿಷ್ಠ ರಾಜೀನಾಮೆ ಬೆದರಿಕೆಯನ್ನೂ ಕಾಂಗ್ರೆಸ್ಸಿಗರು ಹಾಕಿಲ್ಲ ಎಂದು ಶಿವಸೇನೆ ಮುಖವಾಣಿ 'ಸಾಮ್ನಾ'ದಲ್ಲಿ ಬರೆದುಕೊಂಡಿದ್ದಾರೆ.
ದೆಹಲಿಯಲ್ಲಿನ ಕಾಂಗ್ರೆಸ್ ನಾಯಕರ ಕೃಪೆಯಿಂದಾಗಿ ಕಳೆದ 50-55 ವರ್ಷಗಳಿಂದ ಎರಡು ರಾಜ್ಯಗಳ ನಡುವಿನ ವಿವಾದ ಬಗೆಹರಿಯದೇ ಅದೇ ರೀತಿಯಲ್ಲಿ ಮುಂದುವರಿಯುತ್ತಿದೆ. ಇದನ್ನು ಪರಿಹರಿಸಲು, ಮಹಾರಾಷ್ಟ್ರದ ಗೌರವವನ್ನು ಕಾಪಾಡಲು ಕನಿಷ್ಠ ರಾಜೀನಾಮೆಯನ್ನು ಕೊಡುತ್ತೇವೆಂಬ ಬೆದರಿಕೆ ಹಾಕಲೂ ಕಾಂಗ್ರೆಸ್ ನಾಯಕರು ಹಿಂದಕ್ಕೆ ಸರಿಯುತ್ತಿದ್ದಾರೆ ಎಂದು ಠಾಕ್ರೆ ವ್ಯಂಗ್ಯವಾಡಿದ್ದಾರೆ.
ಶರದ್ ಪವಾರ್‌ಗೆ ಮಹಾರಾಷ್ಟ್ರಕ್ಕಿಂತ ಕ್ರಿಕೆಟ್ ವ್ಯವಹಾರಗಳೇ ಹೆಚ್ಚು. ಮುರಳಿ ದಿಯೋರಾ ಅಂಬಾನಿ ಮತ್ತು ತೈಲ ಕಂಪನಿಗಳಿಗೆ ಸೇರಿದವರು. ಪ್ರಫುಲ್ ಪಟೇಲ್ ಶ್ರೀಮಂತ ಬಂಡವಾಳಿಗರ ಕಿಸೆಯಲ್ಲಿದ್ದಾರೆ.. ಎಂದಿರುವ ಠಾಕ್ರೆ, ಮುಖ್ಯಮಂತ್ರಿ ಚೌಹಾನ್ ಒಬ್ಬ ಮೂರ್ಖ ಎಂದು ಬಣ್ಣಿಸಿದ್ದಾರೆ.