ಗಣ್ಯಾತಿಗಣ್ಯರ ರಸ್ತೆ ಸಂಚಾರದಿಂದ ಪ್ರತಿಯೊಬ್ಬರೂ ಒಂದಲ್ಲ ಒಂದು ಬಾರಿ ತೊಂದರೆ ಅನುಭವಿಸಿಯೇ ಇರುತ್ತಾರೆ. ಭದ್ರತೆಯ ಹೆಸರಿನಲ್ಲಿ ಪ್ರಜೆಗಳ ಪ್ರಾಣಗಳನ್ನು ಒತ್ತೆಯಿಡುವ ಪ್ರಸಂಗಗಳೂ ಹೊಸತಲ್ಲ. ಅದೇ ರೀತಿಯಲ್ಲಿ ಇದೀಗ ಮಗುವನ್ನು ಕಳೆದುಕೊಂಡಿರುವ ತಾಯಿಯೊಬ್ಬರು ಸೋನಿಯಾ ಗಾಂಧಿ ಮೊರೆ ಹೋಗಿದ್ದಾರೆ.
ಇತ್ತೀಚೆಗಷ್ಟೇ ಕಾನ್ಪುರಕ್ಕೆ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಬರುತ್ತಿದ್ದಾರೆ ಎಂಬ ಹಿನ್ನೆಲೆಯಲ್ಲಿ ರಸ್ತೆಗಳನ್ನೆಲ್ಲ ಬಂದ್ ಮಾಡಲಾಗಿತ್ತು. ಈ ಸಂದರ್ಭದಲ್ಲಿ ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ಮಗುವೊಂದನ್ನು ಕಾರಲ್ಲಿ ಸಾಗಿಸಲಾಗುತ್ತಿತ್ತು. ಆದರೆ ಭದ್ರತಾ ಅಧಿಕಾರಿಗಳು ಪ್ರವೇಶ ನಿರಾಕರಿಸಿದ್ದರಿಂದ ಮಗು ಕಾರಿನಲ್ಲೇ ಕೊನೆಯುಸಿರೆಳೆದಿತ್ತು.
PR
ಎಂಟು ವರ್ಷದ ಈ ಪುಟ್ಟ ಬಾಲಕ ಹೆಸರು ಅಮನ್ ಖಾನ್. ಜುಲೈ ಮೂರರಂದು ಮಧ್ಯಾಹ್ನ ಮನೆಯಲ್ಲಿನ ಕಬ್ಬಿಣದ ಗೇಟೊಂದು ಮಗುವಿನ ತಲೆಗೆ ಬಿದ್ದ ಪರಿಣಾಮ ತೀವ್ರ ಗಾಯಗೊಂಡಿದ್ದ. ಆತನನ್ನು ಕಾರೊಂದರಲ್ಲಿ ಹಾಕಿಕೊಂಡು ಆಸ್ಪತ್ರೆಗೆ ಹೋಗಲು ಯತ್ನಿಸಿದರೂ, ಪ್ರಧಾನಿ ಆಗಮನದ ಕಾರಣ ತಡೆಯಲಾಗಿತ್ತು.
ಈ ಸಂಬಂಧ ನಾನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಪತ್ರ ಬರೆದಿದ್ದೇನೆ. ಗಣ್ಯರು ನಗರಗಳಿಗೆ ಆಗಮಿಸುವ ಸಂದರ್ಭಗಳಲ್ಲಿ ಸಾಮಾನ್ಯ ನಾಗರಿಕರಿಗೆ ತೊಂದರೆಯಾಗದಂತೆ ನಡೆದುಕೊಳ್ಳಬೇಕು ಮತ್ತು ಆಗ ಕನಿಷ್ಠ ಆಂಬುಲೆನ್ಸ್ ದೊರಕುವಂತೆ ವ್ಯವಸ್ಥೆ ಮಾಡಬೇಕು. ಪ್ರಧಾನಿಯವರಿಗೆ ಭದ್ರತೆ ಒದಗಿಸುವುದು ಮುಖ್ಯವಾದ ವಿಚಾರ. ಅದೇ ಹೊತ್ತಿಗೆ ಸಾಮಾನ್ಯ ಜನರ ಪ್ರಾಣವೂ ಅಮೂಲ್ಯ ಎಂದು ಪರಿಗಣಿಸಬೇಕು ಎಂದು ತಾಯಿ ಉಷಾ ಶರ್ಮಾ ಪತ್ರಿಕೆಯೊಂದಕ್ಕೆ ಹೇಳಿದ್ದಾರೆ.
ಬಾಲಕನ ತಂದೆ ತಹಾದೂದ್ ಹುಸೈನ್ ಖಾನ್ ಇಲ್ಲಿನ ಸರ್ವೋದಯ ನಗರದ ರೀಜೆನ್ಸಿ ಆಸ್ಪತ್ರೆಗೆ ಮಗನನ್ನು ಕರೆದುಕೊಂಡು ಹೋಗುತ್ತಿದ್ದರು. ಆದರೆ ವಾಹನ ಸಂಚಾರವನ್ನು ಸ್ಥಗಿತಗೊಳಿಸಿದ್ದ ಕಾರಣ ಸುಮಾರು 30 ನಿಮಿಷಗಳಷ್ಟು ವಿಳಂಬವುಂಟಾಗಿತ್ತು.
ನಮ್ಮನ್ನು ಹೋಗಲು ಅವಕಾಶ ನೀಡಿ ಎಂದು ಪೊಲೀಸರಲ್ಲಿ ಸಾಕಷ್ಟು ಭಿನ್ನವಿಸಿಕೊಂಡೆ. ಆದರೂ ಪ್ರಮುಖ ರಸ್ತೆಯಲ್ಲಿ ಸಾಗಲು ಬಿಡದೆ, ಬೇರೆ ದಾರಿಯಲ್ಲಿ ಹೋಗುವಂತೆ ಸೂಚಿಸಿದರು. ಆ ರಸ್ತೆಯಲ್ಲಿ ಭಾರೀ ದಟ್ಟಣೆಯುಂಟಾಗಿತ್ತು. ಪರಿಣಾಮ 30 ನಿಮಿಷ ತಡವಾಯಿತು. ಆದರೆ ಆಸ್ಪತ್ರೆ ತಲುಪುವಷ್ಟರಲ್ಲಿ ಮಗ ಸಾವನ್ನಪ್ಪಿದ್ದ ಎಂದು ಖಾನ್ ಘಟನೆಯನ್ನು ವಿಷಾದದಿಂದ ವಿವರಿಸಿದ್ದಾರೆ.