ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ವಿವಾಹಪೂರ್ವ ಸೆಕ್ಸ್; ಸಾನಿಯಾ, ಖುಷ್ಬೂ ಕೇಸ್ ವಜಾ
(Sania Mirza | Khushboo | pre-marital sex | freedom of expression)
ಪ್ರತಿ ನಾಗರಿಕನಿಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಇದೆ ಎಂದಿರುವ ಮಧ್ಯಪ್ರದೇಶ ನ್ಯಾಯಾಲಯವೊಂದು, ವಿವಾಹ ಪೂರ್ವ ಲೈಂಗಿಕತೆಯನ್ನು ಬೆಂಬಲಿಸಿ ಹೇಳಿಕೆ ನೀಡಿದ್ದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಚಿತ್ರನಟಿ ಖುಷ್ಬೂ ವಿರುದ್ಧ ದಾಖಲಾಗಿದ್ದ ಪ್ರಕರಣವೊಂದನ್ನು ವಜಾ ಮಾಡಿದೆ.
ಸಾನಿಯಾ ಮತ್ತು ಖುಷ್ಬೂ ಇಬ್ಬರೂ ಏಡ್ಸ್ ವಿಚಾರವನ್ನು ಗಮನದಲ್ಲಿಟ್ಟುಕೊಂಡು ವಿವಾಹ ಪೂರ್ವ ಲೈಂಗಿಕತೆಯ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು ಎಂದು ನ್ಯಾಯಿಕ ದಂಡಾಧಿಕಾರಿ ಸುಮನ್ ಶ್ರೀವತ್ಸಾ ತನ್ನ ತೀರ್ಪಿನಲ್ಲಿ ಹೇಳಿದ್ದಾರೆ.
ಹಾಗಾಗಿ ಮೇಲ್ನೋಟಕ್ಕೆ ಈ ಪ್ರಕರಣ ವಿಚಾರಣೆಗೆ ಅರ್ಹವೆಂದು ಕಂಡು ಬರುತ್ತಿಲ್ಲ ಎಂದ ಅವರು ಜುಲೈ ಏಳರಂದು ಪ್ರಕರಣವನ್ನು ವಜಾಗೊಳಿಸಿದ್ದಾರೆ.
ವಿವಾಹ ಪೂರ್ವ ಲೈಂಗಿಕತೆಯನ್ನು ಪ್ರೋತ್ಸಾಹಿಸಿ ಖುಷ್ಬೂ ನೀಡಿದ್ದ ಹೇಳಿಕೆಯನ್ನು ಸಾನಿಯಾ ಬಹಿರಂಗವಾಗಿ ಬೆಂಬಲಿಸಿದ್ದರು. ಇಂತಹ ಅಪಮಾನಕಾರಿ ಅಭಿಪ್ರಾಯಗಳಿಂದ ನನ್ನ ಮೂವರು ಅವಿವಾಹಿತ ಮಕ್ಕಳ ಮತ್ತು ದೇಶದಾದ್ಯಂತಹ ಹೆಣ್ಣು ಮಕ್ಕಳ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಮನೋಹರ್ ಬಾಮರೆ ಎಂಬವರು ಇಬ್ಬರ ವಿರುದ್ಧವೂ 2005ರ ನವೆಂಬರ್ 18ರಂದು ದೂರು ದಾಖಲಿಸಿದ್ದರು.
ಖುಷ್ಬೂ ಹೇಳಿದ್ದೇನು? 2005ರಲ್ಲಿ ತಮಿಳು ಪತ್ರಿಕೆಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಖುಷ್ಬೂ, ಮದುವೆಗಿಂತ ಮುಂಚೆ ಲೈಂಗಿಕ ಚಟುವಟಿಕೆ ನಡೆಸುವುದು ತಪ್ಪಲ್ಲ, ಆದರೆ ಅದಕ್ಕೆ ಬೇಕಾದ ಮುನ್ನೆಚ್ಚೆರಿಕೆಗಳನ್ನು ತೆಗೆದುಕೊಳ್ಳಬೇಕು. ವಿದ್ಯಾವಂತ ಪುರುಷನೊಬ್ಬ ತನ್ನ ಹೆಂಡತಿ ಕನ್ಯೆಯಾಗಿರಬೇಕು ಎಂದು ನಿರೀಕ್ಷಿಸುವುದು ಕೂಡ ಸರಿಯಲ್ಲ ಎಂದಿದ್ದರು.
ಇದಕ್ಕೆ ತಮಿಳುನಾಡು ಸೇರಿದಂತೆ ದೇಶದ ವಿವಿಧೆಡೆ ಭಾರೀ ಪ್ರತಿಭಟನೆಗಳೂ ನಡೆದಿದ್ದವು. ಒಂದು ಕಾಲದಲ್ಲಿ ಅಭಿಮಾನಿಗಳ ಹೃದಯದಲ್ಲಿ ಮನೆ ಮಾಡಿದ್ದ ಈ ನಟಿಗೆ ಕಟ್ಟಲಾಗಿದ್ದ ದೇವಸ್ಥಾನವನ್ನು ಕೂಡ ಇದೇ ಸಂದರ್ಭದಲ್ಲಿ ಧ್ವಂಸ ಮಾಡಿ ಆಕ್ರೋಶ ವ್ಯಕ್ತಪಡಿಸಲಾಯಿತು. ಬೆನ್ನಿಗೆ ದೇಶದಾದ್ಯಂತ 22ಕ್ಕೂ ಹೆಚ್ಚು ಪ್ರಕರಣಗಳು ನಟಿಯ ವಿರುದ್ಧ ದಾಖಲಾಗಿದ್ದವು. ಇತ್ತೀಚೆಗಷ್ಟೇ ಈ ಎಲ್ಲಾ ಪ್ರಕರಣಗಳನ್ನು ಸರ್ವೋಚ್ಚ ನ್ಯಾಯಾಲಯ ವಜಾಗೊಳಿಸಿತ್ತು.
ಸಾನಿಯಾ ಹೇಳಿದ್ದೇನು? ದೆಹಲಿಯಲ್ಲಿ ನಡೆದಿದ್ದ ಹಿಂದೂಸ್ತಾನ್ ಟೈಮ್ಸ್ ನಾಯಕತ್ವ ಶೃಂಗದಲ್ಲಿ ಮಾಜಿ ಭುವನ ಸುಂದರಿ ನತಾಲಿಯೇ ಗ್ಲೆಬನೋವಾ ಮತ್ತು ಫಾರ್ಮುಲಾ ವನ್ ತಾರೆ ನರೇನ್ ಕಾರ್ತಿಕೇಯನ್ ಜತೆ ಪಾಲ್ಗೊಂಡಿದ್ದ ಸಾನಿಯಾ, ಖುಷ್ಬೂ ಹೇಳಿಕೆಯನ್ನು ಬೆಂಬಲಿಸಿದ್ದರು.
ಆದರೆ ಇದು ತೀವ್ರ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಸಾನಿಯಾ ಹೇಳಿಕೆಯಿಂದ ಹಿಂದಕ್ಕೆ ಸರಿದಿದ್ದಲ್ಲದೆ, ತಾನು ಆ ರೀತಿ ಹೇಳಿಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದರು.
ವಿವಾಹ ಪೂರ್ವ ಲೈಂಗಿಕತೆ ಇಸ್ಲಾಂ ಪ್ರಕಾರ ಮಹಾ ಪಾಪವಾಗಿರುವುದರಿಂದ ಮತ್ತು ಇದನ್ನು ಅಲ್ಲಾಹು ಕ್ಷಮಿಸುವುದಿಲ್ಲ ಎಂಬುದು ನನ್ನ ನಂಬಿಕೆಯಾಗಿರುವುದರಿಂದ ಇದನ್ನು ನಾನು ಸಮರ್ಥಿಸಿಕೊಳ್ಳುವುದು ಸಾಧ್ಯವೇ ಇಲ್ಲ. ನಾನು ಅಂತಹ ಯಾವುದೇ ಹೇಳಿಕೆಯನ್ನು ನೀಡಿಲ್ಲ. ನಾನೊಬ್ಬ ಮುಸ್ಲಿಂ ಮತ್ತು ಭಾರತೀಯ ನಾರಿಯಾಗಿದ್ದು, ಅಂತಹ ಯಾವುದೇ ವಿಚಾರಗಳನ್ನು ಬೆಂಬಲಿಸಲಾರೆ ಎಂದಿದ್ದರು.