ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಾಶ್ಮೀರ ಕಬಳಿಸಲು ಪಾಕ್ ಉಗ್ರರಿಂದ ವಿನೂತನ ತಂತ್ರ (Kashmir violence | PoK | Hizbul Mujahideen | Kashmir Valley)
Bookmark and Share Feedback Print
 
ಇದುವರೆಗೆ ಭಯೋತ್ಪಾದನೆಯನ್ನಷ್ಟೇ ಮಾಡಿಕೊಂಡು ಬರುತ್ತಿದ್ದ ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳು ಇದೀಗ ವಾಸ್ತವ ಸ್ಥಿತಿಯನ್ನು ಅರಿತುಕೊಂಡು ಪರಿಸ್ಥಿತಿಯ ಲಾಭವನ್ನು ಪಡೆದುಕೊಳ್ಳುತ್ತಾ ಭಾರತದ ವಶದಲ್ಲಿರುವ ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಸೇರಿಸಲು ವಿನೂತನ ತಂತ್ರವನ್ನು ಅನುಸರಿಸುತ್ತಿರುವುದು ಇತ್ತೀಚಿನ ಹಿಜ್ಬುಲ್ ಮುಜಾಹಿದೀನ್ ಸಂಭಾಷಣೆಯೊಂದರಲ್ಲಿ ಬಹಿರಂಗವಾಗಿದೆ.

ಕಳೆದ ಹಲವು ದಶಕಗಳಿಂದ ಕಾಶ್ಮೀರವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಾದದ ಕೇಂದ್ರ ಬಿಂದುವನ್ನಾಗಿ ಮಾಡಲು ಪಾಕಿಸ್ತಾನ ಯತ್ನಿಸುತ್ತಿರುವುದು ಹೊಸ ಸುದ್ದಿಯೇನಲ್ಲ. ಆದರೆ ಅದಕ್ಕಾಗಿ ಭಯೋತ್ಪಾದಕರನ್ನು ಹೊಸ ರೀತಿಯಲ್ಲಿ ಛೂ ಬಿಟ್ಟಿರುವುದು ಮಾತ್ರ ಇತ್ತೀಚಿನ ಬೆಳವಣಿಗೆ.

ಏನದು ತಂತ್ರ..?
ಕಾಶ್ಮೀರ ಕಣಿವೆಯ ನಿರುದ್ಯೋಗಿ ಯುವಕರನ್ನು ಗುರಿ ಮಾಡಿಕೊಂಡು ರಾಜ್ಯದಲ್ಲಿ ಅಶಾಂತಿಯ ವಾತಾವರಣವನ್ನು ಸೃಷ್ಟಿಸುವುದು ಮತ್ತು ಅದೇ ಸ್ಥಿತಿಯನ್ನು ಮುಂದುವರಿಸುವುದು ಅವರ ಉದ್ದೇಶ. ಅದಕ್ಕಾಗಿ ಇಲ್ಲಿನ ಪ್ರತ್ಯೇಕತಾವಾದಿ ನಾಯಕರ ಬೆಂಬಲವನ್ನೂ ಪಡೆದುಕೊಂಡು ಕಳೆದೆರಡು ವರ್ಷಗಳಿಂದ ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸುತ್ತಿದೆ.

ಸಾಮಾನ್ಯವಾಗಿ ಕಲ್ಲು ತೂರಾಟ ಎಂದಾಗ ಅದು ಸಾಮಾನ್ಯ ಅಪರಾಧಿ ಕೃತ್ಯ. ಆದರೆ ಕಾಶ್ಮೀರದಲ್ಲಿ ಹಾಗಲ್ಲ. ಅಲ್ಲಿ ಭದ್ರತಾ ಪಡೆಗಳ, ಪೊಲೀಸರ ಮೇಲೆ ಕಲ್ಲೆಸೆಯಲೆಂದೇ ಲೋಡುಗಟ್ಟಲೆ ಜಲ್ಲಿ ಕಲ್ಲುಗಳನ್ನು ತರಿಸಲಾಗುತ್ತದೆ. ಅಲ್ಲಲ್ಲಿ ಮನೆಗಳ ಪಕ್ಕ ಕಲ್ಲುಗಳನ್ನು ರಾಶಿ ಹಾಕಿಕೊಂಡು ನಂತರ ಅವುಗಳನ್ನು ಭದ್ರತಾ ಸಿಬ್ಬಂದಿಗಳತ್ತ ಎಸೆಯಲಾಗುತ್ತದೆ. ಹೀಗೆ ಕಲ್ಲೆಸೆತದಲ್ಲಿ ಪಾಲ್ಗೊಳ್ಳುವವರಿಗೆ 150ರಿಂದ 200 ರೂಪಾಯಿಗಳಷ್ಟು ದಿನಗೂಲಿಯನ್ನೂ ಅವರ ನಾಯಕರು ನೀಡುತ್ತಾರೆ.

ಈ ಸಂದರ್ಭದಲ್ಲಿ ಭದ್ರತಾ ಪಡೆಗಳು ಕಠಿಣ ಕ್ರಮಕ್ಕೆ ಮುಂದಾದರೆ, ಗೋಲಿಬಾರ್ ನಡೆಸಿದರೆ, ಅವರ ಹೆಣವನ್ನೇ ಮುಂದಿಟ್ಟುಕೊಂಡು ಮತ್ತೆ ಪ್ರತಿಭಟನೆ ನಡೆಸುತ್ತಾರೆ. ಪೊಲೀಸ್ ಠಾಣೆಗಳಿಗೆ, ಭದ್ರತಾ ಪಡೆಗಳ ವಾಹನಗಳಿಗೆ ಬೆಂಕಿ ಹಚ್ಚುತ್ತಾರೆ. ಸಹಜವಾಗಿ ಅಲ್ಲಿ ನಿಷೇಧಾಜ್ಞೆ ಹೇರಲ್ಪಡುತ್ತದೆ.

ನಿರಂತರ ನಿಷೇಧಾಜ್ಞೆ ಹೇರಲ್ಪಟ್ಟಾಗ ಅದು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸುದ್ದಿಯಾಗುತ್ತದೆ. ಇದರ ಲಾಭ ಪಡೆಯುವುದು ಪಾಕಿಸ್ತಾನ. ಕಾಶ್ಮೀರದ ಜನತೆ ಪಾಕಿಸ್ತಾನದ ಆಡಳಿತವನ್ನು ಬಯಸುತ್ತಿದ್ದಾರೆಯೇ ಹೊರತು, ಭಾರತದ್ದಲ್ಲ ಎಂದು ಬಿಂಬಿಸುವ ಮೂಲಕ ತನ್ನ ಕಾರ್ಯವನ್ನು ಸಿದ್ಧಿಸಲು ಯತ್ನಿಸುವಲ್ಲಿ ಭಯೋತ್ಪಾದಕರು ಸಂಪೂರ್ಣ ಸಹಕಾರ ನೀಡುತ್ತಾರೆ.

ಅದಕ್ಕೀಗ ಸಿಕ್ಕಿದೆ ಪ್ರಮುಖ ಪುರಾವೆ...
ಕಾಶ್ಮೀರ ಹಿಂಸಾಚಾರದ ಹಿಂದೆ ಪಾಕಿಸ್ತಾನ ಮೂಲದ ಭಯೋತ್ಪಾದನಾ ಸಂಘಟನೆಗಳ ಕೈವಾಡವಿದೆ ಎಂದು ಇತ್ತೀಚೆಗಷ್ಟೇ ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಮತ್ತು ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿದ್ದರು. ಅದರ ಬೆನ್ನಿಗೆ ಉಗ್ರ ಸಂಘಟನೆಯ ಸದಸ್ಯನೊಬ್ಬ ಕಾಶ್ಮೀರದ ವ್ಯಕ್ತಿಯೊಬ್ಬನೊಂದಿಗೆ ಕಲ್ಲು ತೂರಾಟ ಹೇಗೆ ನಡೆಯುತ್ತಿದೆ ಎಂಬುದನ್ನು ಪ್ರಶ್ನಿಸುವ-ಮಾತುಕತೆ ನಡೆಸುವ ಧ್ವನಿ ಮುದ್ರಿಕೆ ಬಹಿರಂಗವಾಗಿದೆ.

ಶ್ರೀನಗರದಲ್ಲಿನ ನಿಷೇಧಾಜ್ಞೆ, ಭದ್ರತಾ ಪಡೆಗಳ ಚಲನವಲನ, ನಡೆಯುತ್ತಿರುವ ಪ್ರತಿಭಟನೆಗಳ ಸ್ವರೂಪದ ಕುರಿತು ದಕ್ಷಿಣ ಕಾಶ್ಮೀರದ ಸೋಫಿಯಾನ್ ಎಂಬಲ್ಲಿನ ವ್ಯಕ್ತಿಯೊಬ್ಬ (ಈತ ಪ್ರತ್ಯೇಕತಾವಾದಿ ಮುಖಂಡ ಎಂದು ಹೇಳಲಾಗಿದೆ) ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಹಿಜ್ಬುಲ್ ಮುಜಾಹಿದೀನ್ ಭಯೋತ್ಪಾದಕ ಸಂಘಟನೆಯ ಅಬ್ದುಲ್ ಇಂಖಿಲಾಬಿ ಎಂಬಾತನಿಗೆ ವಿವರಣೆ ನೀಡುವ ದೂರವಾಣಿ ಸಂಭಾಷಣೆಯನ್ನು ತನಿಖಾ ದಳಗಳು ದಾಖಲು ಮಾಡಿಕೊಂಡಿವೆ.

ಅವರಿಬ್ಬರ ನಡುವೆ ನಡೆದ ಮಾತುಕತೆಗಳು ಹೀಗಿವೆ.

'ಕಲ್ಲು ತೂರಾಟ ಈಗಲೂ ನಡೆಯುತ್ತಿದೆಯಾ? ಅಲ್ಲಿ ಏನು ನಡೆಯುತ್ತಿದೆ ಫ್ರೆಂಡ್?'

'ನನಗೆ ಗೊತ್ತಿಲ್ಲ. ಆದರೆ ಪರಿಸ್ಥಿತಿ ಮಾತ್ರ ತೀರಾ ಹದಗೆಟ್ಟಿದೆ'

'ಭಾರತೀಯ ಮಿಲಿಟರಿಯು ಕಾಶ್ಮೀರಿಗಳಿಗೆ ತೊಂದರೆ ಕೊಡುತ್ತಿದೆ. ಅವರನ್ನು ಅದು ಬದುಕಲು ಬಿಡುತ್ತಿಲ್ಲ, ಅಲ್ಲವೇ?'

'ಹೌದು, ಅವರು ಕನಿಕರ ತೋರಿಸಲಾರರು'

'ಕಲ್ಲು ತೂರಾಟ ಎಷ್ಟು ಗಂಟೆಗೆ ಆರಂಭವಾಗುತ್ತದೆ?'

'ಪ್ರತಿಭಟನಾ ಮೆರವಣಿಗೆ ನಡೆಯುವ ದಿನ ಬೆಳಿಗ್ಗೆ ಒಂಬತ್ತು ಗಂಟೆ ಹೊತ್ತಿಗೆ ಕಲ್ಲು ತೂರಾಟ ಆರಂಭವಾಗುತ್ತದೆ. ಪ್ರತಿಭಟನೆಯಲ್ಲಿ ಎಲ್ಲರೂ ಪಾಲ್ಗೊಳ್ಳಬೇಕೆಂದು ಪ್ರಕಟಣೆ ಹೊರಡಿಸಲಾಗಿದೆ. ಈ ನಡುವೆ ರಾತ್ರಿಯಿಂದಲೇ ಭದ್ರತಾ ಪಡೆಗಳು ನಿಷೇಧಾಜ್ಞೆ ಹೇರಿವೆ'

'ಮತ್ತಷ್ಟು ಸೇನಾ ಪಡೆಗಳನ್ನು ನಿಯೋಜಿಸಲಾಗುತ್ತದೆ ಎಂಬ ಸುದ್ದಿ ನನ್ನ ಕಿವಿಗೆ ಬಿದ್ದಿದೆ'

'ಹೌದು, ಈಗಾಗಲೇ ಕೆಲವು ಪಡೆಗಳು ಇಲ್ಲಿಗೆ ಬಂದಿವೆ'

'ಹಾಗಾದರೆ ಈ ಹಿಂದೆ ಅಲ್ಲಿ ಸೇನೆ ಇರಲಿಲ್ಲವೇ?'

'ಶ್ರೀನಗರದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಮಾತ್ರ ಇತ್ತು. ಆದರೆ ಸೋಫಿಯಾನ್ ಮತ್ತು ಪುಲ್ವಾಮಾ ಪ್ರದೇಶಗಳಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ ಮತ್ತು ರಾಜ್ಯ ಪೊಲೀಸರು ಮಾತ್ರ ಇದ್ದರು'
ಸಂಬಂಧಿತ ಮಾಹಿತಿ ಹುಡುಕಿ