ಜುಲೈ ಐದರಂದು ಬಿಜೆಪಿ ಮತ್ತು ಇತರ ಪಕ್ಷಗಳು ತೈಲ ಬೆಲೆಯೇರಿಕೆ ವಿರೋಧಿಸಿ ಭಾರತ ಬಂದ್ ನಡೆಸಿದಾಗ ಸುಮ್ಮನಿದ್ದ ಲಾಲೂ ಪ್ರಸಾದ್ ಯಾದವ್ ಮತ್ತು ರಾಮ್ ವಿಲಾಸ್ ಪಾಸ್ವಾನ್ ಅವರ ಪಕ್ಷಗಳು ಇಂದು ಬಂದ್ ನಡೆಸಿವೆ. ಪರಿಣಾಮ ಒಂದೇ ವಾರದಲ್ಲಿ ಎರಡೆರಡು ಬಾರಿ ಸಾರ್ವಜನಿಕರು ಬಂದ್‌ಗೆ ಆಹಾರವಾಗಿದ್ದಾರೆ.
ನಿತೀಶ್ ಕುಮಾರ್ ಅವರ ಸಂಯುಕ್ತ ಜನತಾದಳ-ಬಿಜೆಪಿ ಆಡಳಿತವಿರುವ ಬಿಹಾರದಲ್ಲಿ ವಿರೋಧ ಪಕ್ಷಗಳಾಗಿರುವ ರಾಷ್ಟ್ರೀಯ ಜನತಾದಳ ಮತ್ತು ಲೋಕ ಜನ ಶಕ್ತಿ ಪಕ್ಷಗಳು ಕರೆ ನೀಡಿದ್ದ ಬಂದ್‌ಗೆ ಅತ್ಯುತ್ತಮ ಪ್ರತಿಕ್ರಿಯೆ ದೊರೆತಿದ್ದು, ರಾಜ್ಯದಾದ್ಯಂತ ರೈಲು ಮತ್ತು ಬಸ್ಸು ಸೇವೆಗಳು ಬಹುತೇಕ ಸ್ಥಗಿತಗೊಂಡಿವೆ ಎಂದು ವರದಿಗಳು ಹೇಳಿವೆ.
ರಾಜಧಾನಿ ಪಾಟ್ನಾದಲ್ಲಿ ಎಲ್‌ಜೆಪಿ ಅಧ್ಯಕ್ಷ ರಾಮ್ ವಿಲಾಸ್ ಪಾಸ್ವಾನ್, ಮಾಜಿ ಕೇಂದ್ರ ಸಚಿವ ಜೈಪ್ರಕಾಶ್ ನಾರಾಯಣ್ ಯಾದವ್ ಮತ್ತು ರಾಜ್ಯಸಭಾ ಸದಸ್ಯ ರಾಮಕೃಪಾಲ್ ಯಾದವ್ ನೇತೃತ್ವದಲ್ಲಿ ಸಾವಿರಾರು ಆರ್‌ಜೆಡಿ-ಎಲ್‌ಜೆಪಿ ಕಾರ್ಯಕರ್ತರು ಪ್ರತಿನಭಟನೆ ನಡೆಸಿದ್ದಾರೆ.
ರಾಜ್ಯದಾದ್ಯಂತ ಈ ಪಕ್ಷಗಳಿಗೆ ಸೇರಿದ ಒಂದು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರನ್ನು ಮುನ್ನೆಚ್ಚೆರಿಕಾ ಕ್ರಮವಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುಷ್ಕರ ಹಿನ್ನೆಲೆಯಲ್ಲಿ ಬಿಹಾರದ ಹಲವೆಡೆ ರೈಲುಗಳು ಸ್ಥಗಿತಗೊಂಡಿವೆ. ಪ್ರಮುಖ ನಗರಗಳಲ್ಲಿ ಬಸ್ಸು ಮತ್ತು ಇತರ ವಾಹನಗಳ ಸಂಚಾರವೂ ವಿರಳವಾಗಿತ್ತು.
ಔರಂಗಾಬಾದ್, ಗಯಾ, ಅರಾ, ಮಸ್ಸೂರಿ, ನವಡಾ, ಬರ್ಹಾ, ಜೆಹನಾಬಾದ್, ಗೋಪಾಲಗಂಜ್, ಚಾಪ್ರಾ, ಮುಜಾಫರಪುರ್, ದರ್ಬಾಂಗಾ ಮತ್ತು ಸಹರಾಗಳಲ್ಲಿ ಬಂದ್‌ಗೆ ಅತ್ಯುತ್ತಮ ಪ್ರತಿಕ್ರಿಯೆ ದೊರಕಿದೆ. ಜಾರುವಾ, ಅರಾ, ಔರಂಗಾಬಾದ್, ಮುಜಾಫರಪುರ್ ಮತ್ತು ಸಸರಾಮ್‌ಗಳಲ್ಲಿ ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿದ್ದರಿಂದ ಟ್ರಕ್ಕುಗಳು ಮತ್ತು ಇತರ ವಾಹನಗಳು ರಸ್ತೆಗಳಲ್ಲೇ ಉಳಿದುಕೊಂಡಿವೆ.
ರಾಜ್ಯದ ಬಹುತೇಕ ವಾಣಿಜ್ಯ ಮಳಿಗೆಗಳು ಮತ್ತು ಇತರ ಖಾಸಗಿ ಸಂಸ್ಥೆಗಳು ಇಂದು ವ್ಯವಹಾರ ನಡೆಸಿಲ್ಲ. ಸಿಬ್ಬಂದಿಗಳು ಬಂದ್ ಕಾರಣದಿಂದಾಗಿ ಕಚೇರಿ ತಲುಪಲು ಸಾಧ್ಯವಾಗದಿರುವುದರಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳ ಕಚೇರಿಗಳಲ್ಲಿ ಬಹುತೇಕ ಬಣಗುಡುವ ವಾತಾವರಣ ಕಂಡು ಬಂದಿದೆ.
ತಾನು ಮತ್ತು ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಜುಲೈ 26ರಿಂದ ನಡೆಯುವ ಸಂಸತ್‌ನ ಮುಂಗಾರು ಅಧಿವೇಶನದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯೇರಿಕೆ ಕುರಿತು ದನಿಯೆತ್ತುವುದಾಗಿ ಪಾಸ್ವಾನ್ ತಿಳಿಸಿದ್ದಾರೆ.