ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹೆಗ್ಡೆಯವರನ್ನು ಕರ್ನಾಟಕ ಗೌರವಿಸುವ ಭರವಸೆ: ಅಡ್ವಾಣಿ (Karnataka | BJP | LK Advani | Santosh Hegde)
Bookmark and Share Feedback Print
 
ತನ್ನ ಮನವಿಯ ಹಿನ್ನೆಲೆಯಲ್ಲಿ ಲೋಕಾಯುಕ್ತ ಹುದ್ದೆಯಲ್ಲಿ ಮುಂದುವರಿಯಲು ಒಪ್ಪಿಕೊಂಡ ನ್ಯಾಯಮೂರ್ತಿ ಸಂತೋಷ್ ಹೆಗ್ಡೆಯವರಿಗೆ ಕೃತಜ್ಞತೆ ಸಲ್ಲಿಸಿರುವ ಬಿಜೆಪಿ ವರಿಷ್ಠ ಎಲ್.ಕೆ. ಅಡ್ವಾಣಿ, ಕರ್ನಾಟಕ ಸರಕಾರವು ಈ ಸಂಬಂಧ ಸಂಪೂರ್ಣ ಸಹಕಾರ ನೀಡುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.

ನಾನು ಮಾಡಿಕೊಂಡ ಮನವಿಗೆ ತಕ್ಷಣವೇ ಪ್ರತಿಕ್ರಿಯಿಸಿ ರಾಜೀನಾಮೆಯನ್ನು ಹಿಂದಕ್ಕೆ ಪಡೆದುಕೊಂಡು ಕರ್ನಾಟಕ ಲೋಕಾಯುಕ್ತರಾಗಿ ಮುಂದುವರಿಯಲು ಒಪ್ಪಿಕೊಂಡ ಸಂತೋಷ್ ಹೆಗ್ಡೆಯವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಅವರು ವ್ಯಕ್ತಪಡಿಸಿರುವ ವಿಚಾರಗಳತ್ತ ಕರ್ನಾಟಕ ಸರಕಾರವು ಸಂಪೂರ್ಣ ಗಮನ ಹರಿಸಲಿದೆ ಎಂಬ ವಿಶ್ವಾಸ ನನ್ನದು ಎಂದು ಅಡ್ವಾಣಿ ತನ್ನ ಬ್ಲಾಗಿನಲ್ಲಿ ಬರೆದುಕೊಂಡಿದ್ದಾರೆ.

ಭ್ರಷ್ಟಾಚಾರದ ವಿರುದ್ಧದ ಹೋರಾಟ ಮತ್ತು ಅಕ್ರಮ ಗಣಿಗಾರಿಕೆ ತಡೆಯುವ ನಿಟ್ಟಿನಲ್ಲಿ ಕರ್ನಾಟಕ ಸರಕಾರವು ಸಹಕಾರ ನೀಡುವ ಬದಲು ಕಿರುಕುಳ ನೀಡುತ್ತಿದೆ ಎಂದಿದ್ದ ಹೆಗ್ಡೆಯವರು ಜೂನ್ 23ರಂದು ರಾಜೀನಾಮೆಗೆ ಮುಂದಾಗಿದ್ದರು.

ಅಡ್ವಾಣಿಯವರು ಮನವಿ ಮಾಡಿಕೊಂಡ ನಂತರ, ಭ್ರಷ್ಟಾಚಾರವನ್ನು ತಡೆಗಟ್ಟಲು ಅಗತ್ಯವಿರುವ ಹೆಚ್ಚಿನ ಅಧಿಕಾರದ ಬೇಡಿಕೆಯನ್ನು ಈಡೇರಿಸಲಾಗುತ್ತದೆ ಎಂದು ರಾಜ್ಯ ಸರಕಾರವೂ ಭರವಸೆ ನೀಡಿದ್ದರಿಂದ ಜುಲೈ 3ರಂದು ರಾಜೀನಾಮೆ ವಾಪಸ್ ನಿರ್ಧಾರವನ್ನು ಹೆಗ್ಡೆಯವರು ಪ್ರಕಟಿಸಿದ್ದರು.

ಸಂತೋಷ್ ಹೆಗ್ಡೆಯವರ ತಂದೆ, ಮಾಜಿ ಲೋಕಸಭಾ ಸ್ಪೀಕರ್ ಕೆ.ಎಸ್. ಹೆಗ್ಡೆಯವರನ್ನೂ ಅಡ್ವಾಣಿಯವರು ತನ್ನ ಬ್ಲಾಗ್ ಬರಹದ ಮೂಲಕ ನೆನಪಿಸಿಕೊಂಡಿದ್ದು, ಅವರು ರಾಷ್ಟ್ರಪತಿಯಾಗಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

ರಾಷ್ಟ್ರಪತಿಯವರ ಆಯ್ಕೆ ಸಂದರ್ಭದ ಚರ್ಚೆ ನಡೆಯುತ್ತಿದ್ದಾಗ ಆಗಿನ ಪ್ರಧಾನ ಮಂತ್ರಿ ಮೊರಾರ್ಜಿ ಭಾಯ್ ದೇಸಾಯಿಯವರ ಬಳಿ ನಾನು ಕೆ.ಎಸ್. ಹೆಗ್ಡೆಯವರ ಹೆಸರನ್ನು ಪ್ರಸ್ತಾಪಿಸಿದ್ದೆ. ವಿದ್ವತ್, ಪಾಂಡಿತ್ಯ, ಪಕ್ಷಪಾತರಹಿತತೆ ಮತ್ತು ರಾಷ್ಟ್ರಪತಿಯವರ ಹುದ್ದೆಗೆ ಗೌರವ ತಂದು ಕೊಡುವ ವ್ಯಕ್ತಿತ್ವ ಅವರಲ್ಲಿದ್ದುದರಿಂದ ನಾನು ಇದನ್ನು ಮುಂದಿಟ್ಟಿದ್ದೆ. ಅವರೆಡೆಗೆ ನನಗೆ ಅಪಾರ ಗೌರವವಿತ್ತು ಎಂದು ಅವರು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಗಮನದಲ್ಲಿದ್ದ ಮತ್ತೊಂದು ಹೆಸರು ಎನ್. ಸಂಜೀವ ರೆಡ್ಡಿ. 1977ರಲ್ಲಿ ಅವರೇ ಅಧ್ಯಕ್ಷರಾದರು. ಕೆ.ಎಸ್. ಹೆಗ್ಡೆಯವರನ್ನು ಸ್ಪೀಕರ್ ಮಾಡಲಾಯಿತು ಎಂದು ಅಡ್ವಾಣಿ ತನ್ನ ಬ್ಲಾಗಿನಲ್ಲಿ ಬರೆದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ